ಭಾನುವಾರ, ಏಪ್ರಿಲ್ 11, 2021
26 °C
ನಗರದಲ್ಲಿ ಶೇ 25ರಷ್ಟು ಪ್ರಕರಣಗಳು ಕಡಿಮೆಯಾಗಿವೆ: ಆರೋಗ್ಯ ಇಲಾಖೆ ಮಾಹಿತಿ

ಕೋವಿಡ್: ಬೀದಿ ನಾಯಿ ಕಡಿತ ಇಳಿಕೆ

ವರುಣ್‌ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಮತ್ತು ಲಾಕ್‌ಡೌನ್‌ನಿಂದಾಗಿ ನಗರದಲ್ಲಿ ಬೀದಿ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಕಳೆದ ಒಂದು ವರ್ಷದಲ್ಲಿ ಶೇ 25ರಷ್ಟು ಇಳಿಕೆಯಾಗಿದೆ. 

ನಗರದ ಜನತೆಯನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಬೀದಿ ನಾಯಿ ಕಡಿತ ಕೂಡ ಒಂದು. ಹೆಚ್ಚಾಗಿ ಮಕ್ಕಳು ಮತ್ತು ವೃದ್ಧರು ನಾಯಿ ಕಡಿತಕ್ಕೆ ಒಳಗಾಗುತ್ತಿದ್ದರು. ಎಲ್ಲ ನಾಯಿಗಳು ಆ್ಯಂಟಿ ರೇಬಿಸ್ ಲಸಿಕೆಗೆ ಒಳಪಡದ ಪರಿಣಾಮ ನಾಯಿ ಕಚ್ಚಿದಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿದ್ದವು. ನಗರದಲ್ಲಿ 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿವೆ. ಕಳೆದ ಮೂರು ವರ್ಷದ ಅವಧಿಯಲ್ಲಿ 2.55 ಲಕ್ಷ ಬೀದಿ ನಾಯಿಗಳಿಗೆ ಆ್ಯಂಟಿ ರೇಬಿಸ್ ಲಸಿಕೆ ನೀಡಲಾಗಿದೆ.

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಯಾವುದೇ ನಾಯಿಯನ್ನು ಸಾಯಿಸುವಂತಿಲ್ಲ. ‌ಅದೇ ರೀತಿ, ಒಂದು ಪ್ರದೇಶದಲ್ಲಿ ಹಿಡಿದ ಬೀದಿನಾಯಿಯನ್ನು ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ದು ಬಿಡುವಂತಿಲ್ಲ. ಇದರಿಂದಾಗಿ ಬೀದಿ ನಾಯಿ ಹಾವಳಿ ನಿಯಂತ್ರಣ ಸವಾಲಿನಿಂದ ಕೂಡಿದೆ. 

ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷ ಜನತೆ ಹೆಚ್ಚಾಗಿ ಮನೆಯಲ್ಲಿಯೇ ಸಮಯ ಕಳೆದಿದ್ದರು. ಶಾಲಾ– ಕಾಲೇಜುಗಳು ರಜೆಯಿದ್ದ ಕಾರಣ ಬೀದಿಗಳಲ್ಲಿ ಮಕ್ಕಳ ಓಡಾಟ ಕೂಡ ಕಡಿಮೆಯಾಗಿತ್ತು. ಇದರಿಂದಾಗಿ ನಾಯಿ ಕಡಿತ ಪ್ರಕರಣಗಳು ಕೂಡ ಇಳಿಕೆ ಕಂಡಿವೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 2020ರಲ್ಲಿ 6,606 ನಾಯಿ ಕಡಿತ ಪ್ರಕರಣಗಳು ದೃಢಪಟ್ಟಿವೆ. ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ. ಈ ವರ್ಷ ಜನವರಿ ತಿಂಗಳಲ್ಲಿ 662 ಮಂದಿ ಮೇಲೆ ನಾಯಿಗಳು ದಾಳಿ ನಡೆಸಿವೆ.

ರಾತ್ರಿ ಓಡಾಟ ಕಡಿಮೆ: ‘ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ತಂಡಗಳಾಗಿ ಕಾಣಿಸಿಕೊಳ್ಳುವ ಬೀದಿ ನಾಯಿಗಳು ಬೈಕ್ ಸವಾರರು ಹಾಗೂ ಪಾದಾಚಾರಿಗಳ ಮೇಲೆ ದಾಳಿ ಮಾಡುತ್ತವೆ. ಅದರಲ್ಲೂ ರಾತ್ರಿ ವೇಳೆ ಬೀದಿ ನಾಯಿ ಕಾಟ ಜಾಸ್ತಿಯಾಗಿರುತ್ತದೆ. ಆಟವಾಡುತ್ತಿರುವ ಮಕ್ಕಳ ಮೇಲೆ ದಾಳಿಮಾಡಿ, ಗಾಯಗೊಳಿಸಿದ ಪ್ರಕರಣಗಳು ಈ ಹಿಂದೆ ವರದಿಯಾಗಿವೆ. ಆದರೆ, ಕಳೆದ ವರ್ಷ ಕೋವಿಡ್‌ಕಾರಣ ಜನರ ಸಂಚಾರ ಹೊರಗಡೆ ಕಡಿಮೆಯಿತ್ತು. ಅದರಲ್ಲೂ ರಾತ್ರಿ ವೇಳೆ ಓಡಾಟ ವಿರಳವಾಗಿತ್ತು. ಇದರಿಂದಾಗಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಅಗತ್ಯ ಪ್ರಮಾಣದಲ್ಲಿ ರೇಬಿಸ್ ನಿರೋಧಕ ಚುಚ್ಚುಮದ್ದು ಲಭ್ಯವಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಬೀದಿ ನಾಯಿ ಹಾವಳಿ ಕಡಿಮೆ ಮಾಡಲು ಬಿಬಿಎಂಪಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. 2018–19ನೇ ಸಾಲಿನಲ್ಲಿ 46,151 ನಾಯಿಗಳು, 2019–20ನೇ ಸಾಲಿನಲ್ಲಿ 38,035 ನಾಯಿಗಳು ಹಾಗೂ 2020–21ನೇ ಸಾಲಿನಲ್ಲಿ (ಜನವರಿ ಅಂತ್ಯಕ್ಕೆ) 32,066 ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮೂರು ವರ್ಷದ ಅವಧಿಯಲ್ಲಿ ಈ ಚಿಕಿತ್ಸೆಗೆ 1.16 ಲಕ್ಷ ನಾಯಿಗಳು ಒಳಪಟ್ಟಿವೆ.

‘ನಾಯಿ ಕಡಿತ– ಚಿಕಿತ್ಸೆ ಪಡೆಯದಿದ್ದಲ್ಲಿ ಅಪಾಯ’

‘ಯಾವುದೇ ನಾಯಿ ಕಚ್ಚಿದರೂ ನಿರ್ಲಕ್ಷ್ಯ ಮಾಡಬಾರದು. ನಾಯಿ ಕಡಿತದಿಂದಲೇ ರೇಬಿಸ್‌ ಕಾಣಿಸಿಕೊಳ್ಳುವುದು ಜಾಸ್ತಿ. ರೇಬಿಸ್ ಸೋಂಕು ದೇಹದ ನರವ್ಯೂಹ ಸೇರಿದ ಬಳಿಕ ಬಲಿಷ್ಠಗೊಂಡು ವ್ಯಕ್ತಿಯನ್ನು ಘಾಸಿಗೊಳಿಸುತ್ತದೆ. ಕಚ್ಚಿದ ಗಾಯವನ್ನು ಮೊದಲು ಶುದ್ಧ ನೀರಿನಿಂದ ತೊಳೆಯಬೇಕು. ಸಾಬೂನಿನಿಂದ ಗಾಯವನ್ನು ಶುಭ್ರಗೊಳಿಸಿದಲ್ಲಿ ಸೋಂಕು ದೇಹದ ನರವ್ಯೂಹವನ್ನು ಸೇರುವುದನ್ನು ತಡೆಯಲು ಸಾಧ್ಯವಾಗಲಿದೆ’ ಎಂದು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯ ಅಧೀಕ್ಷಕ ಡಾ. ಅನ್ಸರ್ ಅಹಮದ್ ತಿಳಿಸಿದರು.

‘ಗಾಯ ದೊಡ್ಡದಾಗಿದ್ದರೆ ಅಥವಾ ರಕ್ತಸ್ರಾವ ಅಧಿಕವಾಗಿದ್ದಲ್ಲಿ ಶುದ್ಧ ಬಟ್ಟೆಯನ್ನು ಕಟ್ಟಿಕೊಳ್ಳಬೇಕು. ಬಳಿಕ ಹತ್ತಿರದ ಆಸ್ಪತ್ರೆಗೆ ತೆರಳಿ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ಪಡೆಯಬೇಕು. ಕಚ್ಚಿದ ನಾಯಿ ಮೇಲೆ ಕೂಡ ನಿಗಾ ಇಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ನಾಯಿಯನ್ನು ಸಾಯಿಸಬಾರದು’ ಎಂದರು. 

ನಗರದಲ್ಲಿ ನಾಯಿ ಕಡಿತ ಪ್ರಕರಣಗಳು

ವರ್ಷ; ಪ್ರಕರಣಗಳು
2017
; 11,340
2018; 10,110
2019; 8,799
2020; 6,606
2021 (ಜನವರಿ ಅಂತ್ಯಕ್ಕೆ); 662

ಅಂಕಿ–ಅಂಶಗಳು

37,517: 5 ವರ್ಷಗಳಲ್ಲಿ ವರದಿಯಾದ ನಾಯಿ ಕಡಿತ ಪ್ರಕರಣಗಳು
3.10 ಲಕ್ಷ: ನಗರದಲ್ಲಿರುವ ಬೀದಿ ನಾಯಿಗಳು
1.16 ಲಕ್ಷ: 3 ವರ್ಷಗಳಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಾಯಿಗಳು
2.55 ಲಕ್ಷ: 3 ವರ್ಷಗಳಲ್ಲಿ ರೇಬಿಸ್ ನಿರೋಧಕ ಲಸಿಕೆ ಪಡೆದ ನಾಯಿಗಳು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು