ಗುರುವಾರ , ಆಗಸ್ಟ್ 18, 2022
23 °C
ಉತ್ತರ ಕರ್ನಾಟಕದಲ್ಲಿ ಹಿನ್ನಡೆ

23 ಜಿಲ್ಲೆ: ಶೇ 40ಕ್ಕಿಂತ ಕಡಿಮೆ ಜನರಿಗೆ ಲಸಿಕೆ, ಬೇಡಿಕೆಯಷ್ಟು ಪೂರೈಸದ ಕೇಂದ್ರ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣಾ ಅಭಿಯಾನ ಪ್ರಾರಂಭವಾಗಿ ಐದೂವರೆ ತಿಂಗಳು ಕಳೆದರೂ ಒಂದು ಡೋಸ್ ಲಸಿಕೆ ಪಡೆದವರ ಪ್ರಮಾಣ 23 ಜಿಲ್ಲೆಗಳಲ್ಲಿ ಶೇ 40ಕ್ಕಿಂತ ಕಡಿಮೆಯಿದೆ.

18 ವರ್ಷ ಮೇಲ್ಪಟ್ಟವರಲ್ಲಿ ಬೆಂಗಳೂರಿನಲ್ಲಿ ಗರಿಷ್ಠ (ಶೇ 69.47) ಹಾಗೂ ಹಾವೇರಿಯಲ್ಲಿ ಕನಿಷ್ಠ (ಶೇ 22.29) ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳು ಶೇ 40ರ ಗಡಿಯೊಳಗೆ ಇವೆ. ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಜನರ ಹಿಂಜರಿಕೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಜನವರಿ 16ರಂದು ಲಸಿಕಾ ಅಭಿಯಾನ ಶುರುವಾಗಿತ್ತು. ಪ್ರಾರಂಭಿಕ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಮುಂಚೂಣಿ ಯೋಧರಿಗೆ ಮಾತ್ರ ಲಸಿಕೆ ವಿತರಿಸಲಾಗಿತ್ತು. ಬಳಿಕ ಆದ್ಯತೆಯ ಅನುಸಾರ ಹಿರಿಯ ನಾಗರಿಗರು, 45 ವರ್ಷ ಮೇಲ್ಪಟ್ಟವರು ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಲಸಿಕೆಯ ಬೇಡಿಕೆ ಮತ್ತು ಪೂರೈಕೆ ನಡುವೆ ವ್ಯತ್ಯಯ ಉಂಟಾದ ಕಾರಣ ಅಭಿಯಾನಕ್ಕೆ ಹಿನ್ನಡೆಯಾಗಿತ್ತು.

ಕೆಲ ದಿನಗಳಿಂದ ಪ್ರತಿ ನಿತ್ಯ ಎರಡು ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಈವರೆಗೆ 2.48 ಕೋಟಿಗೂ ಅಧಿಕ ಡೋಸ್ ಲಸಿಕೆ ವಿತರಿಸಲಾಗಿದೆ. ಸರ್ಕಾರಿ ಆರೋಗ್ಯ ಕೇಂದ್ರಗಳ ಜತೆಗೆ ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಕೂಡ ಲಸಿಕೆ ಒದಗಿಸಲಾಗುತ್ತಿದೆ. 2.04 ಕೋಟಿ ಮಂದಿ ಈವರೆಗೆ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಅವರಲ್ಲಿ 44.24 ಲಕ್ಷ ಮಂದಿ ಮಾತ್ರ ಎರಡೂ ಡೋಸ್ ಪೂರ್ಣಗೊಳಿಸಿದ್ದಾರೆ.

ವೇಗಕ್ಕೆ ಹಿನ್ನಡೆ: ರಾಜ್ಯ ಸರ್ಕಾರವು ಈ ವರ್ಷಾಂತ್ಯದೊಳಗೆ 18 ವರ್ಷ ಮೇಲ್ಪಟ್ಟ ಎಲ್ಲ ಫಲಾನುಭವಿಗಳಿಗೆ ಲಸಿಕೆ ವಿತರಿಸುವ ಗುರಿ ಹಾಕಿಕೊಂಡಿದೆ. ಇದು ಸಾಕಾರವಾಗಬೇಕಾದಲ್ಲಿ ಪ್ರತಿನಿತ್ಯ ಎರಡೂವರೆ ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ವಿತರಿಸಬೇಕಾಗುತ್ತದೆ. ಆದರೆ, ಕೇಂದ್ರ ಸರ್ಕಾರವು ಜುಲೈ ತಿಂಗಳಲ್ಲಿ ರಾಜ್ಯಕ್ಕೆ 60 ಲಕ್ಷ ಡೋಸ್ ಲಸಿಕೆಗಳನ್ನು ಹಂಚಿಕೆ ಮಾಡಿದೆ. ಇದರಿಂದಾಗಿ ಕಳೆದ ಒಂದು ವಾರದಿಂದ ಅಭಿಯಾನದ ವೇಗಕ್ಕೆ ಹಿನ್ನಡೆಯಾಗಿದೆ.

ರಾಜ್ಯದ ಎರಡು ಜಿಲ್ಲೆಗಳಲ್ಲಿ ಮಾತ್ರ ಗುರುತಿಸಲಾದ ಫಲಾನುಭವಿಗಳಲ್ಲಿ ಶೇ 50ಕ್ಕೂ ಅಧಿಕ ಮಂದಿಗೆ ಕನಿಷ್ಠ ಒಂದು ಡೋಸ್ ಲಸಿಕೆ ದೊರೆತಿದೆ. ಲಸಿಕೆ ವಿತರಣೆಯಲ್ಲಿ ಬೆಂಗಳೂರು ಪ್ರಥಮ ಹಾಗೂ ಉಡುಪಿ ದ್ವಿತೀಯ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 56.65 ಲಕ್ಷ ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಹಾವೇರಿ, ಕಲಬುರ್ಗಿ ಸೇರಿದಂತೆ 7 ಜಿಲ್ಲೆಗಳಲ್ಲಿ ಲಸಿಕೆ ಪಡೆಯಲು ಗುರುತಿಸಲಾದ ಅರ್ಹ ಫಲಾನುಭವಿಗಳಲ್ಲಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರ ಸಂಖ್ಯೆ ಶೇ 30ಕ್ಕಿಂತ ಕಡಿಮೆಯಿದೆ.

‌‘ಕೋವ್ಯಾಕ್ಸಿನ್’ ಎರಡನೇ ಡೋಸ್‌ಗೆ ಪರದಾಟ
ರಾಜ್ಯದಲ್ಲಿ ವಿತರಿಸಲಾದ 2.48 ಕೋಟಿ ಡೋಸ್ ಲಸಿಕೆಯಲ್ಲಿ 2.17 ಕೋಟಿ ಡೋಸ್ ಲಸಿಕೆ ‘ಕೋವಿಶೀಲ್ಡ್’ ಆಗಿದೆ. 31.78 ಲಕ್ಷ ಡೋಸ್ ಮಾತ್ರ ‘ಕೋವ್ಯಾಕ್ಸಿನ್’ ಲಸಿಕೆ ವಿತರಿಸಲಾಗಿದೆ. ಈ ಲಸಿಕೆಯನ್ನು ನಾಲ್ಕು ವಾರಗಳ ಅಂತರದಲ್ಲಿ ಎರಡನೇ ಡೋಸ್ ವಿತರಿಸಲಾಗುತ್ತಿದೆ. ಬೇಡಿಕೆಯಷ್ಟು ಪೂರೈಕೆಯಾಗದ ಕಾರಣ ಬಹುತೇಕ ಲಸಿಕೆ ವಿತರಣಾ ಕೇಂದ್ರಗಳಲ್ಲಿ ‘ಕೋವ್ಯಾಕ್ಸಿನ್’ ಲಸಿಕೆಯ ದಾಸ್ತಾನು ಖಾಲಿಯಾಗಿದೆ. ಇದರಿಂದಾಗಿ ಎರಡನೇ ಡೋಸ್ ಪಡೆಯಲು ಫಲಾನುಭವಿಗಳು ಪರದಾಟ ನಡೆಸಬೇಕಾದ ಪರಿಸ್ಥಿತಿ ರಾಜ್ಯದಾದ್ಯಂತ ನಿರ್ಮಾಣವಾಗಿದೆ.

‘ಲಾಕ್‌ಡೌನ್ ಸಡಿಲಿಕೆ ಮಾಡಿದ ಬಳಿಕ ಲಸಿಕೆ ಪಡೆದುಕೊಳ್ಳಲು ಬರುವವರ ಸಂಖ್ಯೆ ಎರಡು ಪಟ್ಟು ಜಾಸ್ತಿಯಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೀಡಲಾಗುತ್ತಿದೆ. ‘ಕೋವ್ಯಾಕ್ಸಿನ್’ ಲಸಿಕೆ ಕೊರತೆ ಇರುವ ಕಾರಣ ಎರಡನೇ ಡೋಸ್ ಮಾತ್ರ ವಿತರಿಸಲಾಗುತ್ತಿದೆ. ಕೆಲವರಿಗೆ ನಿಗದಿಪಡಿಸಿದ ದಿನಾಂಕದಂದು ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಬೆಂಗಳೂರಿನ ಸರ್ಕಾರಿ ಲಸಿಕಾ ಕೇಂದ್ರದ ನೋಡಲ್ ಅಧಿಕಾರಿಯೊಬ್ಬರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು