ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid In Karnataka: ಹೊಸ ವರ್ಷಕ್ಕೆ ನೂತನ ಮಾರ್ಗಸೂಚಿ -ಸಿಎಂ ಬೊಮ್ಮಾಯಿ

Last Updated 24 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವಿದೇಶಗಳಲ್ಲಿ ಕೋವಿಡ್ ಪ್ರಕರಣಗಳ‌ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಹೊಸ ವರ್ಷಾಚರಣೆಗೆ ನೂತನ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ‌ ಮಾತನಾಡಿದ ಅವರು, ‘ಕಂದಾಯ‌ ಸಚಿವ ಆರ್.ಅಶೋಕ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಅವರುಭಾನುವಾರ ಸಭೆ ನಡೆಸಿ, ಮಾರ್ಗಸೂಚಿಗಳನ್ನು‌ ಪ್ರಕಟಿಸಲಿದ್ದಾರೆ' ಎಂದರು.

‘ಬೂಸ್ಟರ್ ಡೋಸ್‌ ನೀಡಲು ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಶಿಬಿರ ಏರ್ಪಡಿಸಬೇಕು. ಆರೋಗ್ಯ ಪರಿಕರಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು, ಔಷಧ ಹಾಗೂ ಲಸಿಕೆ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿರುವ ಆಮ್ಲಜನಕ ಘಟಕಗಳು ತುರ್ತು ಸಂದರ್ಭದಲ್ಲಿ‌ ಸಮರ್ಪಕವಾಗಿ‌ ಕಾರ್ಯನಿರ್ವಹಿಸುವಂತೆ, ಅವುಗಳನ್ನು ಪ್ರಾಯೋಗಿಕವಾಗಿ ಚಾಲನೆಯಲ್ಲಿಡಲು ತಿಳಿಸಲಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಒಳಜಗಳ: ‘ಅವಧಿಪೂರ್ವ ಚುನಾವಣೆ‌ ನಡೆಸುವ ಯೋಚನೆಯೂ ನಮ್ಮಲ್ಲಿಲ್ಲ‌. ಪಕ್ಷದ‌ಯೋಜನೆಗಳನ್ನು ಜನರಿಗೆ ತಲುಪಿಸಲುಯತ್ನಿಸುತ್ತಿದ್ದೇವೆ. ಚುನಾವಣೆಗೆ ಇನ್ನೂ ಸಮಯ ಇರುವುದರಿಂದ ಕಾಂಗ್ರೆಸ್ ನಾಯಕರಲ್ಲಿ ಒಳಜಗಳಗಳು ಹೆಚ್ಚಾಗುತ್ತಿವೆ. ಅದಕ್ಕಾಗಿ ಕಾರ್ಯಕರ್ತರಿಗೆ ಅವಧಿಪೂರ್ವ ಚುನಾವಣೆ ನಡೆಯುತ್ತದೆ ಎಂದು ಸಂದೇಶ ನೀಡುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ನಾಲ್ವರಿಗೆ ಮಾತ್ರ ಆಸ್ಪತ್ರೆ ಚಿಕಿತ್ಸೆ

ಬೆಂಗಳೂರು: ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳಿದ್ದರೂ ನಾಲ್ವರಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಚೀನಾ ಸೇರಿ ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳದಿಂದ ಪರೀಕ್ಷೆಗಳ ಸಂಖ್ಯೆಯನ್ನು ಏರಿಕೆ ಮಾಡಲಾಗುತ್ತಿದೆ. ವಾರದಿಂದ ರಾಜ್ಯದಲ್ಲಿ ಸೋಂಕು ದೃಢ ಪ್ರಮಾಣ ಶೇ 0.51ರಷ್ಟಿದೆ. ರೋಗದ ತೀವ್ರತೆ ಕಡಿಮೆ ಇರುವುದರಿಂದ ಸೋಂಕಿತರಲ್ಲಿ ಬಹುತೇಕರುಮನೆ ಆರೈಕೆಗೆ ಒಳಗಾಗುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾದವರಿಗೂ ಸಾಮಾನ್ಯ ಹಾಸಿಗೆಯಲ್ಲಿಯೇ ಚಿಕಿತ್ಸೆ ಒದಗಿಸಲಾಗುತ್ತಿದೆ.

ಎರಡು ಸಾವಿರದ ಆಸುಪಾಸಿಗೆ ಇಳಿಕೆ ಕಂಡಿದ್ದ ದೈನಂದಿನ ಕೋವಿಡ್ ಪರೀಕ್ಷೆಗಳ ಸಂಖ್ಯೆ, ಈಗ ಐದು ಸಾವಿರದ ಗಡಿಗೆ ಏರಿಕೆ ಕಂಡಿದೆ. ವಿಮಾನ ನಿಲ್ದಾಣಗಳಲ್ಲಿಯೂ ಪರೀಕ್ಷೆ ನಡೆಸಲಾಗುತ್ತಿದೆ. ಕೋವಿಡ್ ಹೊಸ ಪ್ರಕರಣಗಳು ಸದ್ಯ ಎರಡಂಕಿಯಲ್ಲಿವೆ. ವಾರದಿಂದ ಚೇತರಿಕೆ ಪ್ರಮಾಣ ಶೇ 98.97 ರಷ್ಟಿದೆ.

‘ಚೀನಾ, ಹಾಂಕಾಂಗ್, ದಕ್ಷಿಣ ಕೊರಿಯಾ ಮೊದಲಾದ ದೇಶಗಳಿಂದ ಬರುತ್ತಿರುವವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

‘ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆಯದವರು ಸಮೀಪದ ಆಸ್ಪತ್ರೆಗೆ ತೆರಳಿ, ಲಸಿಕೆ ಪಡೆದುಕೊಳ್ಳಬೇಕು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜತೆಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT