ಬುಧವಾರ, ಡಿಸೆಂಬರ್ 8, 2021
18 °C
23.49 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಿಗೆ ಆಪ್ತ ಸಮಾಲೋಚನೆ ಕರೆ

ಮಧ್ಯ ವಯಸ್ಕರಿಗೆ ‘ಕೋವಿಡ್’ ಮನೋವ್ಯಾಧಿ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಮಾನಸಿಕ ಆರೋಗ್ಯ

ಬೆಂಗಳೂರು: ಕೊರೊನಾ ಕಾಣಿಸಿಕೊಂಡು ಒಂದೂವರೆ ವರ್ಷ ಕಳೆದರೂ ಕೋವಿಡ್‌ ಬಗೆಗಿನ ಮನೋವ್ಯಾಧಿ ದೂರವಾಗಿಲ್ಲ. ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗವು ಈವರೆಗೆ 23.49 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರನ್ನು ಸಂಪರ್ಕಿಸಿದ್ದು, ಮಾನಸಿಕ ಸಮಸ್ಯೆಗಳನ್ನು ಎದುರಿಸಿದವರಲ್ಲಿ ಶೇ 50ಕ್ಕೂ ಅಧಿಕ ಮಂದಿ ಮಧ್ಯ ವಯಸ್ಕರಾಗಿದ್ದಾರೆ.

ರಾಜ್ಯದಲ್ಲಿ 29.41 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಪ್ರಾರಂಭಿಕ ದಿನಗಳಲ್ಲಿ ಸೋಂಕಿತರಾದವರಲ್ಲಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಯೂ ಇದೆ. ಈವರೆಗೆ ಸೋಂಕಿತರಾಗಿ ಮೃತಪಟ್ಟವರಲ್ಲಿ 26 ಮಂದಿ ಅನ್ಯ ಕಾರಣಗಳಿಂದ ಸಾವಿಗೀಡಾಗಿದ್ದಾರೆ. ಕೋವಿಡ್ ಪೀಡಿತರಾದವರಿಗೆ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಆಪ್ತ ಸಮಾಲೋಚನೆ ನೀಡಲು ಕರೆ ಮಾಡಲಾಗುತ್ತಿದೆ. ಈ ಮೂಲಕ ಸೋಂಕಿತರಲ್ಲಿನ ಭಯ, ಆತಂಕವನ್ನು ದೂರ ಮಾಡಲು ತರಬೇತಿ ಹೊಂದಿದ ಆರೋಗ್ಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. 25ರಿಂದ 50 ವರ್ಷದೊಳಗಿನವರು ಹೆಚ್ಚಾಗಿ ಮಾನಸಿಕ ಸಮಸ್ಯೆಗಳಿಗೆ ಒಳಪಡುತ್ತಿರುವುದು ಆಪ್ತ ಸಮಾಲೋಚನಾ ಕರೆಗಳಿಂದ ದೃಢಪಟ್ಟಿದೆ.

20ರಿಂದ 50 ವರ್ಷದೊಳಗಿನವರಲ್ಲಿ 18 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಸೋಂಕಿತರಾದ ಮಕ್ಕಳು ಹಾಗೂ ವೃದ್ಧಿಗೆ ಸಹ ಆಪ್ತ ಸಮಾಲೋಚನಾ ಕರೆ ಮಾಡಲಾಗಿದೆ. ಕುಟುಂಬ ನಿರ್ವಹಣೆ ಸವಾಲು, ಜೀವಕ್ಕೆ ಅಪಾಯವಾಗುವ ಆತಂಕ, ಮನೆಯಲ್ಲಿನ ಮಕ್ಕಳು ಹಾಗೂ ವೃದ್ಧರಿಗೆ ಸೋಂಕು ತಗಲುವ ಭಯವೇ ಮಧ್ಯ ವಯಸ್ಕರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳಲು ಪ್ರಮುಖ ಕಾರಣ ಎನ್ನುವುದು ಸಮಾಲೋಚನೆಯಿಂದ ತಿಳಿದುಬಂದಿದೆ.

ಮಕ್ಕಳಿಗೆ ಧೈರ್ಯ ಹೆಚ್ಚು: ಕೋವಿಡ್ ಎರಡನೇ ಅಲೆಯಲ್ಲಿ ಮಾರ್ಚ್‌ ನಂತರ ಸೋಂಕಿತರ ಸಂಖ್ಯೆ ಏರಿಕೆ ಕಂಡಿತ್ತು. ಆಪ್ತ ಸಮಾಲೋಚನೆ ಕರೆಗಳ ಸಂಖ್ಯೆಯನ್ನೂ ಹೆಚ್ಚಳ ಮಾಡಲಾಗಿತ್ತು. ದಿನವೊಂದಕ್ಕೆ 20 ಸಾವಿರಕ್ಕೂ ಅಧಿಕ ಮಂದಿಗೆ ಧೈರ್ಯ ತುಂಬಲಾಗುತ್ತಿತ್ತು. ಈಗ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡ ಕಾರಣ ದಿನವೊಂದಕ್ಕೆ ಮಾಡುವ ಕರೆಗಳ ಸಂಖ್ಯೆ 1,500ರ ಆಸುಪಾಸಿನಲ್ಲಿದೆ. ವೈದ್ಯರು, ಕಾರ್ಮಿಕರಿಗೆ ಕೂಡ ಮಾನಸಿಕ ಸಮಸ್ಯೆಗಳಿಗೆ ಕೌನ್ಸೆಲಿಂಗ್ ಮಾಡಲಾಗಿದೆ. ಕೊರೊನಾ ಸೋಂಕಿತರಾದವರಲ್ಲಿ ಮಕ್ಕಳು ಮಾನಸಿಕವಾಗಿ ಧೈರ್ಯದಿಂದ ಇರುವುದು ಈ ಕರೆಗಳಿಂದ ಗೊತ್ತಾಗಿದೆ.

‘ಸೋಂಕು ದೃಢಪಟ್ಟವರ ಮನಸ್ಥಿತಿಯನ್ನು ವಿಚಾರಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದೇವೆ. ಪ್ರೀತಿ ಪಾತ್ರರಿಂದ ದೂರವಾಗುತ್ತೇನೆ ಎಂಬ ಭ್ರಮೆ ಹಲವರಲ್ಲಿದೆ. ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ ಕೋವಿಡ್ ಕಾಯಿಲೆ ವಾಸಿಯಾಗುವವರೆಗೂ ಕರೆ ಮಾಡುತ್ತೇವೆ. ಕೆಲವರ ಸ್ವಭಾವದಲ್ಲಿಯೇ ಆತಂಕ, ಭಯ ಇರುತ್ತದೆ. ಅಂತಹವರು ಹೆಚ್ಚು ಮಾನಸಿಕವಾಗಿ ಕುಗ್ಗುತ್ತಾರೆ’ ಎಂದು ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ಉಪನಿರ್ದೇಶಕಿ ಡಾ. ರಜನಿ ಪಿ. ತಿಳಿಸಿದರು.

150 ಸಿಬ್ಬಂದಿ ಕಾರ್ಯನಿರ್ವಹಣೆ

ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡ ಬಳಿಕ ವರ್ಚುವಲ್ ವೇದಿಕೆಯ ಮೂಲಕ ಮನೆ ಆರೈಕೆಗೆ ಒಳಗಾದವರಿಗೆ ಅಗತ್ಯ ಸಲಹೆ ನೀಡಲಾಗಿತ್ತು. ಈ ಕಾರ್ಯಕ್ಕೆ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿತ್ತು. 5 ಸಾವಿರ ವಿದ್ಯಾರ್ಥಿಗಳು ಹಾಗೂ 100 ವೈದ್ಯರಿಗೆ ತರಬೇತಿ ನೀಡಲಾಗಿತ್ತು. ಮಾನಸಿಕ ಆರೋಗ್ಯ ವಿಭಾಗದಿಂದ ಸದ್ಯ 150 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಮನೆ ಆರೈಕೆಯಲ್ಲಿ ಇರುವ ಸೋಂಕಿತರು ಚೇತರಿಕೆ ಕಾಣುವ ಒಳಗೆ ನಾಲ್ಕು ಕರೆಗಳನ್ನು ಮಾಡಲಾಗುತ್ತದೆ. ಪ್ರತಿ ನಿತ್ಯ ದೂರವಾಣಿ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಐವಿಆರ್‌ಎಸ್ ಕರೆಗಳು ಕೂಡ ಹೋಗುತ್ತವೆ. ಕೆಲವರು ತಪ್ಪಾದ ದೂರವಾಣಿ ಸಂಖ್ಯೆ ನೀಡಿರುತ್ತಾರೆ. ಅಂತಹವರನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಕೋವಿಡ್ ಪ್ರಕರಣ ಇಳಿಕೆಯಾಗಿರುವುದರಿಂದ ಈಗ ನಮ್ಮ ಸಿಬ್ಬಂದಿಯೇ ಈ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ’ ಎಂದು ಡಾ. ರಜನಿ ಪಿ. ವಿವರಿಸಿದರು.


ಡಾ. ರಜನಿ ಪಿ.

* ಸೋಂಕಿತರು ಅನವಶ್ಯಕವಾಗಿ ಆತಂಕಕ್ಕೆ ಒಳಗಾಗಬಾರದು. ಆದರೆ, ಎಚ್ಚರದಿಂದ ಇರಬೇಕು. ಮಾನಸಿಕ ಸ್ಥೈರ್ಯ ಕಳೆದುಕೊಂಡಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕುಗ್ಗಲಿದೆ

-ಡಾ. ರಜನಿ ಪಿ., ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ಉಪನಿರ್ದೇಶಕಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು