ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಪೂರ್ವ ತಾಲೀಮು: ಡಿಸಿಎಂಗೆ ಇಂಜೆಕ್ಷನ್‌!

ಕೋವಿಡ್‌ ಲಸಿಕೆ ಪೂರ್ವ ತಾಲೀಮು ಕಾರ್ಯಕ್ರಮಕ್ಕೆ ಚಾಲನೆ
Last Updated 8 ಜನವರಿ 2021, 21:38 IST
ಅಕ್ಷರ ಗಾತ್ರ

ರಾಮನಗರ: ‘ಸರ್‌ ಶರ್ಟ್‌ ಅನ್ನು ತೋಳಿಂದ ಮೇಲಕ್ಕೆ ಮಡಿಸಿ. ಒಂದೇ ಒಂದು ಇಂಜೆಕ್ಷನ್ ನೀಡುತ್ತೇನೆ. ಗಾಬರಿ ಆಗಬೇಡಿ. ಇದಾದ ಬಳಿಕ ಮೂವತ್ತು ನಿಮಿಷ ಇಲ್ಲೇ ಇರಿ’

ಹೀಗೆಂದು ನರ್ಸ್‌ ಕೇಳಿದ್ದು ನಾಡಿನ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ! ಸ್ವತಃ ವೈದ್ಯರಾದ ಉಪಮುಖ್ಯಮಂತ್ರಿಗೆ ಲಸಿಕೆಯ ಪಾಠ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್‌ ಚುಚ್ಚುಮದ್ದಿನ ಕುರಿತು ವಿವರಣೆಯನ್ನೂ ನೀಡಿದರು. ಅಂದ ಹಾಗೇ ಈ ಘಟನೆ ನಡೆದದ್ದು ಜಿಲ್ಲಾಸ್ಪತ್ರೆಯ ಆವರಣದಲ್ಲಿ.

ಜಿಲ್ಲೆಯ ಎಂಟು ಆಸ್ಪತ್ರೆಗಳಲ್ಲಿ ಶುಕ್ರವಾರ ಕೋವಿಡ್‌ ಡ್ರೈ ರನ್ ಕಾರ್ಯಕ್ರಮ ನಡೆದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅಶ್ವತ್ಥನಾರಾಯಣ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾವೇ ನೋಂದಣಿ ಮಾಡಿಸಿ, ದೇಹ ಉಷ್ಣತೆ ತಪಾಸಣೆ ಮಾಡಿಸಿಕೊಂಡು ಒಳ ಬಂದ ಅವರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಕುರಿತು ಮಾಹಿತಿ ಹಂಚಿಕೊಂಡರು.

ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು ‘ರಾಜ್ಯದಲ್ಲಿ ವಾರದೊಳಗೆ ಕೋವಿಡ್ ಲಸಿಕೆ ಲಭ್ಯ ಆಗಲಿದ್ದು, ಮೊದಲ ಹಂತದಲ್ಲಿ ಆರೋಗ್ಯ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕೋವಿಡ್‌ ವಾರಿಯರ್‌ಗಳಿಗೆ ಲಸಿಕೆ ನೀಡಲಾಗುವುದು’ ಎಂದು ತಿಳಿಸಿದರು.

‘ಸ್ವತಃ ನಾನೇ ಲಸಿಕೆಯನ್ನು ಪಡೆಯುವ ಅಣಕು ಪ್ರಕ್ರಿಯೆಗೆ ಒಳಗಾಗಿದ್ದೇನೆ. ಅತ್ಯಂತ ವೈಜ್ಞಾನಿಕ ಮತ್ತು ಸುರಕ್ಷಿತವಾಗಿ ಇಡೀ ಪ್ರಕ್ರಿಯೆ ನಡೆಯುತ್ತದೆ’ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

‘ಲಸಿಕೆಯು ಈಗಾಗಲೇ ಪ್ಯಾಕಿಂಗ್‌ ಆಗಿ ಆಯಾ ರಾಜ್ಯಗಳಿಗೆ ಬರುತ್ತಿದೆ. ಇದಕ್ಕಾಗಿ ಸರ್ಕಾರ ‘ಡ್ರೈ ರನ್‌’ ಮೂಲಕ ಅಗತ್ಯ ಸಿದ್ಧತೆ ನಡೆಸಿದೆ. ಒಬ್ಬ ವ್ಯಕ್ತಿಗೆ ಮೊದಲ ದಿನದಂದು ಒಂದು ಲಸಿಕೆ ಹಾಗೂ 28 ದಿನಗಳ ಬಳಿಕ ಇನ್ನೊಂದು ಲಸಿಕೆ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT