ಬುಧವಾರ, ಏಪ್ರಿಲ್ 14, 2021
31 °C
ವಿಧಾನಪರಿಷತ್‌ನಲ್ಲಿ ಕಾರ್ಯದರ್ಶಿಗೆ ಸಭಾಪತಿ ಹೊರಟ್ಟಿ ನಿರ್ದೇಶನ

ಕಾರಿಡಾರ್‌ನಲ್ಲಿ ಮೊಬೈಲ್‌ನಲ್ಲಿ ಹರಟೆ ಹೊಡೆದರೆ ಶಿಸ್ತುಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಚೇರಿ ಸಮಯದಲ್ಲಿ ಶಿಸ್ತು ಪಾಲಿಸದೆ, ಕಾರಿಡಾರ್‌ನಲ್ಲಿ ನಿಂತು ಮೊಬೈಲ್‌ನಲ್ಲಿ ಗಂಟೆಗಟ್ಟಲೆ ಹರಟೆ ಹೊಡೆಯುವ ವಿಧಾನಪರಿಷತ್ತಿನ ಸಿಬ್ಬಂದಿಗೆ ಚಾಟಿ ಬೀಸಲು ಸಭಾಪತಿ ಬಸವರಾಜ ಹೊರಟ್ಟಿ ನಿರ್ಧರಿಸಿದ್ದಾರೆ.

ಅಷ್ಟೇ ಅಲ್ಲ, ಸಚಿವಾಲಯದಲ್ಲಿ ಅಳವಡಿಸಿರುವ ಹಲವು ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವುಗಳನ್ನು ಉದ್ದೇಶಪೂರ್ವಕವಾಗಿ ಕೆಲವರು ಹಾಳು ಮಾಡುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೊರಟ್ಟಿ, ಅಂಥವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪರಿಷತ್‌ ಕಾರ್ಯದರ್ಶಿ ಕೆ.ಆರ್‌. ಮಹಾಲಕ್ಷಿ ಅವರಿಗೆ ಟಿಪ್ಪಣಿ ಮೂಲಕ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವ ಹೊರಟ್ಟಿ, ‘ನೀವು ಕಾರ್ಯದರ್ಶಿಯಂಥ ಉನ್ನತ ಹುದ್ದೆಯಲ್ಲಿರುವುದರಿಂದ ಯಾವುದೇ ಮುಲಾಜಿಲ್ಲದೆ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ಆಡಳಿತವನ್ನು ಚುರುಕುಗೊಳಿಸಬೇಕು. ಟಿಪ್ಪಣಿಯಲ್ಲಿ ಸೂಚಿಸಿರುವ ಎಲ್ಲ ಅಂಶಗಳನ್ನು ಜಾರಿಗೊಳಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಂಡು ಕಾರ್ಯರೂಪಕ್ಕೆ ತರಬೇಕು’ ಎಂದೂ ಹೇಳಿದ್ದಾರೆ.

‘ವಿಧಾನ ಪರಿಷತ್‌ ಸಚಿವಾಲಯದಲ್ಲಿ ಸಿಬ್ಬಂದಿಗೆ ಬಯೋಮೆಟ್ರಿಕ್‌ ಪದ್ಧತಿ ಕಡ್ಡಾಯವಾಗಿ ಜಾರಿಗೊಳಿಸಬೇಕು. ಅದರ ವರದಿಯನ್ನು ಪ್ರತಿ ತಿಂಗಳು ನನ್ನ ಆಪ್ತ ಶಾಖೆಗೆ ತಲುಪಿಸಬೇಕು. ಈ ನಿಯಮ ಉಲ್ಲಂಘಿಸಿದವರ ವಿರುದ್ಧ ತೆಗೆದುಕೊಂಡ ಶಿಸ್ತು ಕ್ರಮದ ಬಗ್ಗೆಯೂ ಮಾಹಿತಿ ನೀಡಬೇಕು’ ಎಂದು ಕಾರ್ಯದರ್ಶಿಗೆ ಹೊರಟ್ಟಿ ಸೂಚನೆ ನೀಡಿದ್ದಾರೆ.

‘ಪರಿಷತ್ತಿನಲ್ಲಿ ಕಾರ್ಯ ನಿರ್ವಹಿಸುವ ‘ಡಿ’ ಗ್ರೂಪ್‌ (ಚಾಲಕರ ಸಹಿತ)ಸಿಬ್ಬಂದಿ ಕಡ್ಡಾಯವಾಗಿ ಸಮವಸ್ತ್ರ ಧರಿಸುವಂತೆ ಸುತ್ತೋಲೆ ಹೊರಡಿಸಬೇಕು. ಪರಿಷತ್ತಿನ ಪ್ರತಿ ಶಾಖೆಯ ಸಿಬ್ಬಂದಿಯ ಚಲನವಲನವನ್ನು ಪುಸ್ತಕದಲ್ಲಿ ಕಡ್ಡಾಯವಾಗಿ ನಿರ್ವಹಿಸಬೇಕು. ಪರಿಷತ್ತಿನ ಕೆಲಸಬಿಟ್ಟು ಹೊರಗಡೆ ಹೋದ ಸಿಬ್ಬಂದಿ ಮಾಡಿದ ಪ್ರಮಾದಗಳಿಗೆ ವಿಧಾನ ಪರಿಷತ್‌ ಆಗಲಿ, ಸರ್ಕಾರವಾಗಲಿ ಹೊಣೆಯಲ್ಲ’ ಎಂದೂ ಹೇಳಿರುವ ಹೊರಟ್ಟಿ, ‘ಸದನಲ್ಲಿ ಮಸೂದೆಗಳನ್ನು ಮಂಡಿಸುವ ಸಂದರ್ಭದಲ್ಲಿ ಸದಸ್ಯರ ಬೇಡಿಕೆಯಂತೆ ಅವುಗಳನ್ನು 2–3 ದಿನಗಳ ಮೊದಲೇ ನೀಡಲು ಕ್ರಮ ತೆಗೆದುಕೊಳ್ಳಬೇಕು’ ಎಂದೂ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು