ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರಿಪ್ಟೊ’ ವಂಚನೆ: ಸಿಸಿಬಿ ಕಾರ್ಯಾಚರಣೆ, ₹ 17 ಕೋಟಿ ಮೌಲ್ಯದ ವಸ್ತು ಜಪ್ತಿ

ನಾಲ್ವರ ಬಂಧನ, 44 ಖಾತೆ ವ್ಯವಹಾರಕ್ಕೆ ತಡೆ
Last Updated 19 ಏಪ್ರಿಲ್ 2022, 7:34 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ರಿಪ್ಟೊ’ ಕರೆನ್ಸಿ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ₹ 78 ಲಕ್ಷ ನಗದು ಸೇರಿ ₹ 17 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

‘ಶೇರ್‌ಹ್ಯಾಷ್’ ಹೆಸರಿನ ಆ್ಯಪ್‌ ಮೂಲಕ ವಂಚನೆ ಮಾಡಿದ್ದ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಸಿಸಿಬಿ ಅಧಿಕಾರಿಗಳು, ವಂಚನೆ ಜಾಲ ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.

‘ಶೀತಲ್ ಬಸ್ತವಾಡ್, ಇಮ್ರಾನ್ ರಿಯಾಜ್, ರೆಹಮತ್‌ಉಲ್ಲಾ ಖಾನ್ ಹಾಗೂ ಜಬೀವುಲ್ಲಾ ಖಾನ್ ಬಂಧಿ ತರು. ಇವರಿಂದ 1 ಕೆ.ಜಿ 650 ಗ್ರಾಂ ಚಿನ್ನಾಭರಣ, ₹ 78 ಲಕ್ಷ ನಗದು, 44 ಡಿಎಸ್‌ಸಿ (ಡಿಜಿಟಲ್ ಸಹಿ ಪ್ರಮಾಣ ಪತ್ರ) ಟೋಕನ್‌ಗಳು, 5 ಮೊಹರುಗಳು, ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಕಂಪನಿ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳ 44 ಖಾತೆಗಳಲ್ಲಿ ₹ 15 ಕೋಟಿ ಹಣವಿದ್ದು, ವ್ಯವಹಾರವನ್ನು ತಡೆ ಹಿಡಿಯಲಾಗಿದೆ’ ಎಂದೂ ಹೇಳಿದರು.

ಐದು ಕಂಪನಿ ಹೆಸರಿನಲ್ಲಿ ವ್ಯವಹಾರ: ‘ಹೂಡಿಕೆ ಹೆಸರಿನಲ್ಲಿ ಜನರಿಂದ ಹಣ ಪಡೆದು ವಂಚಿಸುವ ಉದ್ದೇಶ ವಿಟ್ಟುಕೊಂಡಿದ್ದ ಆರೋಪಿಗಳು, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ‘ಶೇರ್‌ಹ್ಯಾಷ್’ ಆ್ಯಪ್‌ ಅಭಿವೃದ್ಧಿ ಪಡಿಸಿದ್ದರು. ಇದರ ಮೂಲಕ ಹಣದ ವ್ಯವಹಾರ ನಡೆಸಲು ಐದು ಕಂಪನಿಗಳನ್ನು ಸೃಷ್ಟಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಕೋಟ್ಯಾಟ್ ಟೆಕ್ನಾಲಜಿ, ಸಿರಲೇನಾ ಟೆಕ್ ಸೆಲ್ಯೂಷನ್ಸ್, ನೈಲೇನ್ ಇನ್ಫೊಟ‌ಚ್, ಮೊಲ್ಟ್ರೀಸ್ ಎಕ್ಸಿಮ್ ಹಾಗೂ ಕ್ರ್ಯಾಂಪಿಂಗ್‌ಟನ್ ಟೆಕ್ನಾಲಜಿ ಕಂಪನಿಗಳ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಆರೋಪಿಗಳು ಖಾತೆ ತೆರೆದಿದ್ದರು. ಈ ಖಾತೆಗಳಿಗೆ ಸಾರ್ವಜನಿಕರು ಹಣ ಜಮೆ ಮಾಡಿದ್ದರು. ಅದೇ ಖಾತೆಗಳನ್ನು ಇದೀಗ ಜಪ್ತಿ ಮಾಡಲಾಗಿದೆ’ ಎಂದೂ ವಿವರ ನೀಡಿದರು.

900 ವಾಟ್ಸ್‌ಆ್ಯಪ್‌ ಗ್ರೂಪ್: ‘ಕ್ರಿಪ್ಟೊ ಕರೆನ್ಸಿ ಮೇಲೆ ಹೂಡಿಕೆ ಮಾಡಿದರೆ, ಪ್ರತಿ ದಿನವೂ ಲಾಭಾಂಶ ನೀಡುತ್ತೇವೆ’ ಎಂಬುದಾಗಿ ಆರೋಪಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದ್ದರು.

ಏನಿದು ‘ಕ್ರಿಪ್ಟೊ’ ಮೈನಿಂಗ್?
‘ಕ್ರಿಪ್ಟೊ’ ಎನ್ನುವುದು ರೂಪಾಯಿ ಹಾಗೂ ಡಾಲರ್‌ ರೀತಿಯಲ್ಲೇ ಒಂದು ನಾಣ್ಯ. ಇದರಲ್ಲಿ ಬಿಟ್‌ ಕಾಯಿನ್‌ ಸೇರಿದಂತೆ ಹಲವು ವಿಧಗಳಿವೆ.ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಅಂಕಿಗಳ ರೂಪದಲ್ಲಷ್ಟೇ ಇದನ್ನು ನೋಡಬಹುದು. ಇಂಥ ‘ಕ್ರಿಪ್ಟೊ’ ಕರೆನ್ಸಿಯನ್ನು ಬಳಕೆದಾರರೇ ಸೃಷ್ಟಿಸಬೇಕು. ಈ ಪ್ರಕ್ರಿಯೆಗೆ ಮೈನಿಂಗ್ ಎನ್ನಲಾಗುತ್ತದೆ.

ಮೈನಿಂಗ್ ಮಾಡಲು ಕಂಪ್ಯೂಟರ್‌ನಲ್ಲಿ ಕೆಲ ಗಣಿತದ ಸಮಸ್ಯೆಗಳನ್ನು ಬಗೆ ಹರಿಸಬೇಕಾಗುತ್ತದೆ. ಇದಕ್ಕೆ ‘ಹ್ಯಾಷ್ ಫಂಕ್ಷನ್’ ಎನ್ನಲಾಗುತ್ತದೆ.ಈ ಹಂತ ಪ್ರವೇಶಿಸಿದರೆ, ಕರೆನ್ಸಿ ವ್ಯವಹಾರ ಆರಂಭವಾಗುತ್ತದೆ. ವೈಯಕ್ತಿಕ ವಿವರದ ಅಗತ್ಯವಿಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ವಹಿವಾಟುನಡೆಸಬಹುದಾಗಿದೆ.

‘ತನಿಖಾ ತಂಡಕ್ಕೆ ₹70 ಸಾವಿರ ಬಹುಮಾನ’
‘ಕ್ರಿಪ್ಟೊ ಕರೆನ್ಸಿ ಹೂಡಿಕೆ ವಂಚನೆ ಜಾಲವನ್ನು ಪತ್ತೆ ಮಾಡಿರುವ ಸಿಸಿಬಿಯ ತನಿಖಾ ತಂಡಕ್ಕೆ ₹ 70 ಸಾವಿರ ಬಹುಮಾನ ಘೋಷಿಸ ಲಾಗಿದೆ’ ಎಂದು ಕಮಲ್ ಪಂತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT