ಬುಧವಾರ, ಆಗಸ್ಟ್ 10, 2022
24 °C

ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ; ಈ ವರ್ಷ ಪ್ರಾಯೋಗಿಕ, ಮುಂದಿನ ವರ್ಷ ಕಡ್ಡಾಯ: ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಈ ವರ್ಷ ಪ್ರಾಯೋಗಿಕವಾಗಿ ಆರಂಭಿಸಿದ್ದರೂ ಮುಂದಿನ ವರ್ಷ ರೈತರು ತಾವೇ ಕಡ್ಡಾಯವಾಗಿ ಸಮೀಕ್ಷೆ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ನಗರದ ಜಿಕೆವಿಕೆ ಕುವೆಂಪು ಸಭಾಂಗಣದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಕೃಷಿ ಅಧಿಕಾರಿಗಳ ಪ್ರಗತಿಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಈ ವರ್ಷ ತಂತ್ರಜ್ಞಾನ ಬಳಕೆಯ ತೊಡಕು ಮತ್ತು ಮಳೆಯಿಂದ ತೊಂದರೆ ಆಗಿರಬಹುದು. ಆದರೆ, ಬಹುತೇಕರ ಕಡೆಗಳಲ್ಲಿ ಪ್ರಾಯೋಗಿಕತೆ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ರೈತರೇ ಸ್ವಯಂ ಬೆಳೆ ಸಮೀಕ್ಷೆ ನಡೆಸುವುದಕ್ಕೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ರೈತರು ಆ್ಯಪ್‌ ಮೂಲಕ ತಪ್ಪದೇ ಬೆಳೆ ಸಮೀಕ್ಷೆ ನಡೆಸಬೇಕು. ಹೆಚ್ಚು ಹೆಚ್ಚು ರೈತರು ಬೆಳೆ ಸಮೀಕ್ಷೆ ನಡೆಸಲು ಅಧಿಕಾರಿಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕು ಎಂದರು.

ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ವಾಡಿಕೆಗಿಂತ ಶೇ 101 ರಷ್ಟು ಬಿತ್ತನೆಯಾಗಿದೆ. ಇದು ಇಲಾಖೆಗೆ ಸಮಾಧಾನ ತಂದಿದೆ ಎಂದೂ ಪಾಟೀಲ ಹೇಳಿದರು.

ಕೃಷಿ ಅಧಿಕಾರಿಗಳು ರೈತರ ಸ್ನೇಹಿಗಳಾಗನೇಕೇ ಹೊರತು ವ್ಯಾಪಾರಿಗಳ ಸ್ನೇಹಿಗಳಾಗಬಾರದು. ಅಧಿಕಾರಿಗಳು ರೈತರಿಗೆ ಸಿಗುವಂತಿರಬೇಕು. ಅಧಿಕಾರಿಗಳ ಕೆಲಸದ ಬಗ್ಗೆ ರೈತರೇ ಹೆಮ್ಮೆಪಡುವಂತೆ ಕಾರ್ಯನಿರ್ವಹಿಸಬೇಕು. ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳೂ ಆತನ ಮನೆ ಬಾಗಿಲಿಗೆ ಸಿಗುವಂತಾಗಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಗೆ ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರಧಾನಮಂತ್ರಿ ಮೋದಿಯವರೂ ಸಹ ಆಹಾರ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿ ಅನುದಾನ ನೀಡುತ್ತಿದ್ದಾರೆ ಎಂದರು.

ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ನಿಜಕ್ಕೂ ಯೂರಿಯಾಕ್ಕಾಗಲೀ ರಸಗೊಬ್ಬರಕ್ಕಾಗಲೀ ಕೊರತೆಯಿಲ್ಲ. ಸರಬರಾಜು ಹಂಚಿಕೆಯಲ್ಲಿ ಎಲ್ಲೋ‌ ಒಂದೆರಡು ಕಡೆ ವಿಳಂಬವಾಗಿರಬಹುದು. ಆದರೆ ಕೊರತೆಯಿಲ್ಲ. ಕಾಳಸಂತೆಕೋರರು ಮತ್ತು ಸುಳ್ಳು ಸುದ್ದಿಹಬ್ಬಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು