ಮಂಗಳವಾರ, ಮಾರ್ಚ್ 28, 2023
23 °C

ಜನಸಂಖ್ಯಾ ನಿಯಂತ್ರಣ: ಸದನದಲ್ಲಿ ಕಾಯ್ದೆ ಮಂಡಿಸಲು ಸಿ.ಟಿ.ರವಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತರಪ್ರದೇಶ ಮತ್ತು ಅಸ್ಸಾಂ ಮಾದರಿಯಲ್ಲಿ ಜನಸಂಖ್ಯೆ ನಿಯಂತ್ರಣ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ಈ ಸಂಬಂಧ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಕಾಯ್ದೆ ಮಂಡಿಸುವಂತೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂದಿನ ಜನಸಂಖ್ಯಾ ಸ್ಫೋಟದ ಸಂದರ್ಭದಲ್ಲಿ ಜನಸಂಖ್ಯೆ ನಿಯಂತ್ರಿಸಲು ಕಾಯ್ದೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಈ ವಿಷಯದಲ್ಲಿ ಸಾರ್ವಜನಿಕ ಚರ್ಚೆ ನಡೆಯಬೇಕು ಎಂಬ ಅಪೇಕ್ಷೆ ನನ್ನದು. ಚರ್ಚೆಯ ಬಳಿಕ ಸರ್ಕಾರ ತೀರ್ಮಾನವನ್ನು ತೆಗೆದುಕೊಳ್ಳಬೇಕು. ದೇಶದ ಎಲ್ಲ ಪ್ರಜೆಗಳಿಗೂ ಸಮಾನವಾದ ಸವಲತ್ತುಗಳು ಸಿಗಬೇಕಾದರೆ ಜನಸಂಖ್ಯೆ ಏರಿಕೆಗೆ ಕಡಿವಾಣ ಹೇರಬೇಕು. ದೇಶದ ಜನಸಂಖ್ಯೆ 140 ಕೋಟಿ ಮೀರಿ ಸಾಗುತ್ತಿದೆ. ರಾಜ್ಯದಲ್ಲಿ 7 ಕೋಟಿಗೆ ತಲುಪಿದೆ. ಆದರೆ ನಮ್ಮ  ನೈಸರ್ಗಿಕ ಸಂಪನ್ಮೂಲ ಏರಿಕೆಯಾಗುತ್ತಿಲ್ಲ, ಬರಿದಾಗುತ್ತಾ ಹೋಗುತ್ತಿದೆ ಎಂದು ರವಿ ಹೇಳಿದರು.

ಹಿಂದೆ ಕಾಂಗ್ರೆಸ್‌ ಪಕ್ಷ ಜನಸಂಖ್ಯೆ ನಿಯಂತ್ರಣಕ್ಕೆ ಜನರ ಜತೆ ಚರ್ಚೆ ಮಾಡದೇ ನೇರ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೇ ಕೈ ಹಾಕಿತ್ತು. ಇಂದಿರಾ ಬ್ರಿಗೇಡ್‌ ಮತ್ತು ಸಂಜಯ್‌ ಬ್ರಿಗೇಡ್‌ ಹೆಸರಿನಲ್ಲಿ ಆ ಕೆಲಸ ಆಗುತ್ತಿತ್ತು. ಈಗ ಆ ರೀತಿ ಮಾಡಬೇಕಿಲ್ಲ. ಜನಸಂಖ್ಯೆ ನಿಯಂತ್ರಣದ ಸಾಧಕ ಬಾಧಕಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದು, ವಿಧಾನಮಂಡಲದಲ್ಲಿ ಸಮಾಲೋಚಿಸಿದ ನಡೆಸಿ ಬಳಿಕ ಜಾರಿ ಮಾಡಬಹುದು. ಕೆಲವು ಪಕ್ಷಗಳಿಗೆ ದೇಶಕ್ಕಿಂತ ರಾಜಕೀಯ ಮುಖ್ಯವಾಗಿದೆ. ಆದರೆ, ನಮಗೆ ರಾಜಕೀಯ ಮುಖ್ಯವಲ್ಲ, ದೇಶ ಮುಖ್ಯ ಎಂದು ಹೇಳಿದರು.

ಈ ಮಾತುಗಳು ಹೇಳಿದ ತಕ್ಷಣ ಕೆಲವರಿಗೆ ಹೊಟ್ಟೆ ಉರಿ ಆರಂಭವಾಗುತ್ತದೆ. ಇನ್ನು ದೇಶ ಬಿಟ್ಟು ಕಳಿಸಿ ಎಂದರೆ ಎಷ್ಟಾಗಬೇಡ. ನಾನು ಹೇಳಿದ ತಕ್ಷಣ ಎಲ್ಲವೂ ಆಗುವುದಿಲ್ಲ. ಒಂದು ವಿಚಾರವನ್ನು ಸಾರ್ವಜನಿಕ ಚರ್ಚೆಗೆ ಮುಂದಿಟ್ಟಿದ್ದೇನೆ. ನಮ್ಮ ಪಕ್ಷದ ವೇದಿಕೆಯಲ್ಲೂ ಚರ್ಚೆ ನಡೆಯಬೇಕು ಎಂದು ರವಿ ಹೇಳಿದರು.

ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಹೇಳುವವರು ಅವರು ಅಧಿಕಾರದಲ್ಲಿ ಇದ್ದಾಗ ಏಕೆ ಮಾಡಲಿಲ್ಲ. ಏಕೆಂದರೆ, ಕಾಂಗ್ರೆಸ್‌ ಪಕ್ಷದಲ್ಲೇ ಅದಕ್ಕೆ ಸಹಮತವಿಲ್ಲ. ಅದಕ್ಕಾಗಿ ನಾಲ್ಕು ವರ್ಷ ಅದನ್ನು ಮುಟ್ಟುವ ಗೋಜಿಗೇ ಹೋಗಲಿಲ್ಲ. ಆ ಬಗ್ಗೆ ಕಾಳಜಿಯೂ ಇರಲಿಲ್ಲ. ಆಂತರಿಕವಾಗಿ ವಿರೋಧ ಬಂದ ಕಾರಣ ಆ ಬಗ್ಗೆ ಚಕಾರ ಎತ್ತಲಿಲ್ಲ. ಈಗ ಬಿಡುಗಡೆ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು