ಶನಿವಾರ, ಫೆಬ್ರವರಿ 4, 2023
28 °C

ಸಿ.ಟಿ. ರವಿ ಹೇಳಿಕೆ ಬಿಜೆಪಿಯನ್ನು ಬೆತ್ತಲೆಗೊಳಿಸಿದೆ: ರಮಾನಾಥ ರೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ರೌಡಿ ಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮರ್ಥಿಸಿಕೊಂಡಿದ್ದು, ತಮ್ಮ ಪಕ್ಷದ ನೈಜ ಸಿದ್ಧಾಂತವನ್ನು ಬಹಿರಂಗಪಡಿಸಿದ್ದಾರೆ. ಅವರ ಹೇಳಿಕೆಯು ಬಿಜೆಪಿಯನ್ನು ಬೆತ್ತಲೆಗೊಳಿಸಿದೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ರಮಾನಾಥ ರೈ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ರಾಜಕಾರಣಿಗಳ ಮೇಲೆ  ಪ್ರಕರಣಗಳು ದಾಖಲಾಗುವುದು ಸಹಜ ಎಂದು ಸಿ.ಟಿ.ರವಿ ಹೇಳಿದ್ದಾರೆ. ಆದರೆ, ಒಬ್ಬ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗುವುದಕ್ಕೂ, ಆತನನ್ನು ರೌಡಿ ಶೀಟರ್‌ ಎಂದು ಪರಿಗಣಿಸುವುದಕ್ಕೂ ವ್ಯತ್ಯಾಸ ಇದೆ. ಪದೇ ಪದೇ ಅಪರಾಧ ಕೃತ್ಯಗಳನ್ನು ನಡೆಸಿ ಜನರಲ್ಲಿ ಭಯಹುಟ್ಟಿಸುವ ವ್ಯಕ್ತಿಯನ್ನು ರೌಡಿ ಶೀಟರ್‌ ಎಂದು ಪೊಲೀಸ್‌ ಇಲಾಖೆ ಪರಿಗಣಿಸುತ್ತದೆ. ಅಂತಹವರನ್ನು ಪಕ್ಷಕ್ಕೆ ಸೇರ್ಪಡೆ ಮಾಡುವುದನ್ನು ಸಿ.ಟಿ.ರವಿ ಸಮರ್ಥನೆ ಮಾಡಿಕೊಳ್ಳುವುದು ಎಷ್ಟು ಸರಿ’ ಎಂದು ರೈ ಪ್ರಶ್ನಿಸಿದರು.

’ಬುದ್ಧಿವಂತರ ಜಿಲ್ಲೆ ಎಂದೇ ಗುರುತಿಸಿಕೊಂಡ ದಕ್ಷಿಣ ಕನ್ನಡದಲ್ಲಿ ಹತ್ಯೆಗಳು ನಡೆಯುವಷ್ಟರಮಟ್ಟಿಗೆ ಕೋಮು ರಾಜಕಾರಣ ತಾರಕಕ್ಕೆ ಹೋಗಿದೆ. ಒಂದು ಧರ್ಮದವರು ಒನ್ನೊಂದು ಧರ್ಮದವರನ್ನು ಕೊಲೆ ಮಾಡುವುದು ಮಾಮೂಲಿ ಎಂಬಾಂತಾಗಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರ ಹೇಳಿಕೆ ಇದಕ್ಕೂ ಅನ್ವಯವಾಗುತ್ತದೆ’ ಎಂದರು. 

‘ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಯಾವುದೇ ನಾಯಕ ಅಥವಾ ಕಾರ್ಯಕರ್ತರ ಹೆಸರು ಹತ್ಯೆ ಪ್ರಕರಣಗಳ ಎಫ್‌ಐಆರ್‌ನಲ್ಲಿ ಇಲ್ಲ. ಯಾರೂ ಬೇಕಿದ್ದರೂ ಮಾಹಿತಿ ಹಕ್ಕಿನಲ್ಲಿ ಈ ಬಗ್ಗೆ ಮಾಹಿತಿ ಪಡೆಯಬಹುದು’ ಎಂದರು.

‘ಜಿಲ್ಲೆಯಲ್ಲಿ ಧರ್ಮಾಧರಿತ ಹತ್ಯೆಗಳಿಗೆ ಕಾರಣರಾದವರು ಈಗಲೂ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಕೋಮು ಹತ್ಯೆ ಪ್ರಕರಣಗಳ ಸೂತ್ರಧಾರರು ಯಾವುದೇ ಪಕ್ಷದಲ್ಲಿರಲಿ, ಅವರನ್ನು ಪತ್ತೆಹಚ್ಚಿ, ಕಾನೂನು ಕ್ರಮಕೈಗೊಳ್ಳಬೇಕಿದೆ. ಇದಕ್ಕಾಗಿ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸುವ ಅಗತ್ಯ ಇದೆ. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಾಗ ನಾವು ಈ ಸಲುವಾಗಿ ಎಸ್‌ಐಟಿ ರಚಿಸುತ್ತೇವೆ’ ಎಂದು ತಿಳಿಸಿದರು.

‘ಸುರತ್ಕಲ್‌ನ ಅಕ್ರಮ ಟೋಲ್‌ಗೇಟ್‌ ರದ್ದುಪಡಿಸಿದ ಬಳಿಕ  ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ಸುಂಕ ಹೆಚ್ಚಿಸುವ ಪ್ರಸ್ತಾವ ಕೇಳಿ ಬರುತ್ತಿದೆ. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್‌ ಅವರಿಗೆ ಈ ಜಿಲ್ಲೆಯ ಹಿತ ಕಾಯುವ ಕಿಂಚಿತ್‌ ಕಾಳಜಿಯೂ ಇಲ್ಲ ಎಂದು ಟೋಲ್‌ಗೇಟ್‌ ವಿಚಾರದಲ್ಲಿ ಸಾಬೀತಾಗಿದೆ’ ಎಂದರು.

ಪಕ್ಷದ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ್ ಹೆಗ್ಡೆ, ವಿಶ್ವಾಸ್ ದಾಸ್, ಅಪ್ಪಿ, ಸಿ.ಎಂ.ಮುಸ್ತಾ‌ಫ, ಪ್ರತಿಭಾ ಕುಳಾಯಿ, ನೀರಜ್ ಪಾಲ್, ಶಬೀರ್ ಎಸ್., ನಿತ್ಯಾನಂದ ಶೆಟ್ಟಿ, ಸಲೀಂ ಪಾಂಡೇಶ್ವರ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು