ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಇಪಿ: ಎಂ.ಎ, ಪಿ.ಎಚ್‌ಡಿ ಕೋರ್ಸ್‌ಗಳ ಅವಧಿ ಎಷ್ಟು?

Last Updated 10 ಆಗಸ್ಟ್ 2022, 3:09 IST
ಅಕ್ಷರ ಗಾತ್ರ

1. ನಾಲ್ಕು ವರ್ಷದ ಪದವಿಯನ್ನು (ಎನ್‌ಇಪಿ) ಮಾಡಿದರೆ, ಎಂಎ ಮತ್ತು ಪಿಎಚ್‌ಡಿ ಕೋರ್ಸುಗಳನ್ನು ಎಷ್ಟು ವರ್ಷಓದಬೇಕಾಗುತ್ತದೆ?

ಟಿ.ಎಂ.ಮಹೇಶ್, ತಿಪಟೂರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಮೂರು ವರ್ಷದ ನಂತರ ಪದವಿ ನೀಡಲಾಗುತ್ತದೆ. ನಾಲ್ಕನೇ ವರ್ಷವನ್ನು ಸಂಶೋಧನೆಗೆ ಮೀಸಲಾಗಿಟ್ಟರೆ, ಕೋರ್ಸ್ ನಂತರ ಪದವಿ (ಸಂಶೋಧನೆ) ನೀಡಲಾಗುತ್ತದೆ. ನಾಲ್ಕು ವರ್ಷದ ಪದವಿಯ ನಂತರ ಸ್ನಾತಕೋತ್ತರ ಕೋರ್ಸ್‌ಗಳು ಒಂದು ವರ್ಷದ್ದಾಗಿರುತ್ತದೆ. ಪದವಿಯ (ಸಂಶೋಧನೆ) ನಂತರ, ಸಿಜಿಪಿಎ (ಕ್ಯೂಮುಲೇಟಿವ್ ಗ್ರೇಡ್ ಪಾಯಿಂಟ್ ಆವರೇಜ್) 7.5 ಇದ್ದಲ್ಲಿ, ನೇರವಾಗಿ ಪಿಎಚ್‌ಡಿ ಮಾಡಲು ಅರ್ಹತೆ ಸಿಗುತ್ತದೆ. ಸಂಶೋಧನೆಯ ವಿಷಯವನ್ನು ಆದರಿಸಿ, ಪಿಎಚ್‌ಡಿ ಮಾಡಲು 2 ರಿಂದ 6 ವರ್ಷ ಬೇಕಾಗಬಹುದು.

2. ನಾನು ಪಿಎಸ್‌ಐ ಆಗುವ ಆಸೆ ಹೊಂದಿದ್ದೇನೆ. ನಾನು ಪಿಎಸ್‌ಐ ಆದ ಮೇಲೆ ನನ್ನ ಜೀವನ ಶೈಲಿ ಹೇಗಿರಬಹುದು ? ನನ್ನ ಕುಟುಂಬಕ್ಕೆ ಸಮಯ ಕೊಡಲಾಗುವುದೇ? ದಿನಕ್ಕೆ ಎಷ್ಟು ಸಮಯ ಕೆಲಸ ಇರುತ್ತೆ? ನಾನು ಪಿಎಸ್‌ಐ ಆಗಲು ನನ್ನಲ್ಲಿ ಏನಿರಬೇಕು? ಸರ್, ದಯವಿಟ್ಟು ಕೆಲಸದ ಬಗ್ಗೆ ಮಾಹಿತಿ ನೀಡಿ.
ಊರು, ಹೆಸರು ತಿಳಿಸಿಲ್ಲ.

ನಮ್ಮ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿಯ ಸ್ಥಾಪನೆಗಾಗಿ ಹಗಲಿರುಳೂ ಪೊಲೀಸ್ ಇಲಾಖೆ ಶ್ರಮಿಸುತ್ತದೆ. ಈ ನಿಟ್ಟಿನಲ್ಲಿ, ಇಲಾಖೆಯ ಉದ್ಯೋಗಿಗಳು ಸಂದರ್ಭಕ್ಕೆ ತಕ್ಕಂತೆ ಸ್ವಯಂ-ಪ್ರೇರಿತರಾಗಿ ಅಥವಾ ಮೇಲಧಿಕಾರಿಗಳ ಸೂಚನೆ/ಆದೇಶದಂತೆ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಹಾಗಾಗಿ, ನಿಗದಿತ ವೇಳೆಯಲ್ಲಿಯೇ ಕೆಲಸ ಮಾಡುವ ಪರಿಪಾಠ ಎಲ್ಲಾ ಸಂದರ್ಭದಲ್ಲೂ ಕಾರ್ಯಸಾಧ್ಯವಲ್ಲ. ಆದ್ದರಿಂದ, ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಮತೋಲನವನ್ನು ಸಾಧಿಸಬೇಕಾದರೆ ವೃತ್ತಿಯಲ್ಲಿ ಆಸಕ್ತಿ, ಅಭಿರುಚಿ, ಕೌಶಲಗಳ ಜೊತೆಗೆ ಕುಟುಂಬದ ಬೆಂಬಲ ಇರಬೇಕು.

3. ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ) ಆಗಲು ಯಾವುದಾದರೂ ಪದವಿಯ ಜೊತೆ ನಾಯಕತ್ವದ ಕೌಶಲ, ದಿಟ್ಟತನ, ಸಹಭಾಗಿತ್ವದ ಕೌಶಲ, ಉತ್ತಮ ಸಂವಹನ, ಪರಿಶೋಧನಾ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳ ಜೊತೆ ಸಕಾರಾತ್ಮಕ ಧೋರಣೆಯಿರಬೇಕು; ಹಾಗೂ, ಮಾನಸಿಕ ಮತ್ತು ದೈಹಿಕ ಸದೃಡತೆಯಿರಬೇಕು. ಪ್ರಮುಖವಾಗಿ, ಈ ವೃತ್ತಿ ನಿಮಗೆ ಒಪ್ಪುತ್ತದೆಯೇ ಎಂದು ಖಚಿತವಾಗಬೇಕು. ಪಿಎಸ್‌ಐ ಕೆಲಸಕ್ಕೆ ಸೇರಿದ ನಂತರ, ನಿಮ್ಮ ಕಾರ್ಯಕ್ಷಮತೆ ಮತ್ತು ಸೇವಾ ಜೇಷ್ಠತೆಯನ್ನು ಪರಿಗಣಿಸಿ, ಮುಂದಿನ ಹುದ್ದೆಗೆ ಬಡ್ತಿಯನ್ನು ನಿರೀಕ್ಷಿಸಬಹುದು.

ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ ಮತ್ತು ವಿಷಯಸೂಚಿಗೆ ಗಮನಿಸಿ: https://prepp.in/karnataka-police-exam

4. ನಾನು ಬಿಎ (ಅರ್ಥಶಾಸ್ತ್ರ) ಓದುತ್ತಿದ್ದು, ಯುಪಿಎಸ್‌ಸಿ ಪರೀಕ್ಷೆ ಬರೆಯುವ ಆಸೆ ಇದೆ. ಕಠಿಣವಾದ ಈ ಪರೀಕ್ಷೆಯ ತಯಾರಿಗೆ, ಹೆಚ್ಚಿನ ಸಮಯ ಬೇಕಾಗುವುದರಿಂದ, ಎಂಎ (ಅರ್ಥಶಾಸ್ತ್ರ) ಮಾಡಬೇಕೆಂದಿದ್ದೇನೆ. ಅರ್ಥಶಾಸ್ತ್ರ ಕ್ಷೇತ್ರದ ಉದ್ಯೋಗಾವಕಾಶಗಳೇನು? ಈ ವಿಷಯದಲ್ಲಿ ಡಾಕ್ಟರೇಟ್ ಮಾಡಿದರೆ ಯಾವ ರೀತಿಯ ಉದ್ಯೋಗಾವಕಾಶಗಳಿವೆ?

ವಿಕಾಸ್ ಮಂತ್ರೋಡಿ, ಹೂವಿನಹಡಗಲಿ.

ಎಂಎ (ಅರ್ಥಶಾಸ್ತ್ರ) ಕೋರ್ಸ್ ನಂತರ ಬೇಡಿಕೆಯಲ್ಲಿರುವ ಈ ಕ್ಷೇತ್ರದಲ್ಲಿ, ನಿಮ್ಮ ಆಸಕ್ತಿಯ ಅನುಸಾರ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಶಿಕ್ಷಣ, ಬ್ಯಾಂಕಿಂಗ್, ಹಣಕಾಸು, ಸಂಶೋಧನೆ ಮತ್ತು ವಿಶ್ಲೇಷಣೆ, ಬಂಡವಾಳ ಹೂಡಿಕೆ, ಮಾಧ್ಯಮ, ವಿಷಯಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿವೆ. ಜೊತೆಗೆ, ಯುಪಿಎಸ್‌ಸಿ/ಕೆಪಿಎಸ್‌ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದಲ್ಲೂ ವೃತ್ತಿಯನ್ನು ಅರಸಬಹುದು. ಡಾಕ್ಟರೇಟ್ ಮಾಡಿದರೆ, ಶಿಕ್ಷಕ ವೃತ್ತಿಯಲ್ಲಿ ಅವಕಾಶಗಳಿವೆ.

ಪ್ರಮುಖವಾಗಿ, ನೀವು ಸ್ವಯಂ-ಮೌಲ್ಯಮಾಪನ ಮಾಡಿಕೊಂಡು ಯಾವ ವೃತ್ತಿ ನಿಮಗೆ ಸರಿಹೊಂದುತ್ತದೆ ಎಂದು ನಿರ್ಧರಿಸಿ, ವೃತ್ತಿಯೋಜನೆಯನ್ನು ಮಾಡಿದರೆ, ಅದರಂತೆ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

5. ನಾನು ಪದವಿಯಲ್ಲಿ ಪತ್ರಿಕೋದ್ಯಮ ಮತ್ತು ಕನ್ನಡವನ್ನು ಐಚ್ಛಿಕ ವಿಷಯವಗಳನ್ನಾಗಿ ತೆಗೆದುಕೊಂಡಿದ್ದೇನೆ. ಮುಂದೆ ಏನು ಮಾಡಬಹುದು? ಯಾವ ಕೆಲಸ ಸೂಕ್ತ ಎಂದು ತಿಳಿಸಿ.

ಅಲಿ, ದಾವಣಗೆರೆ.

ಪದವಿ ಕೋರ್ಸ್‌ನಲ್ಲಿ ಪತ್ರಿಕೋದ್ಯಮ ಓದುತ್ತಿರುವುದರಿಂದ ನಿಮಗೆ ಈ ವಲಯದಲ್ಲಿ ಆಸಕ್ತಿ, ಅಭಿರುಚಿ ಇದೆ ಎಂದು ಭಾವಿಸಿದ್ದೇನೆ.

ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಪದವಿಯನ್ನು ಮಾಡುವುದರ ಜೊತೆಗೆ ವೃತ್ತಿ ಸಂಬಂಧಿತ ಕೌಶಲಗಳಾದ ಸಂವಹನ (ಓದುವಿಕೆ, ಬರವಣಿಗೆ, ಮಾತುಗಾರಿಕೆ, ನಿರೂಪಣೆ ಇತ್ಯಾದಿ), ಭಾಷಾ ಪರಿಣತಿ, ವಿಶ್ಲೇಷಾತ್ಮಕ ಕೌಶಲ, ದಿಟ್ಟತನ, ಸಮಯದ ನಿರ್ವಹಣೆ ಇತ್ಯಾದಿಗಳನ್ನೂ ಬೆಳೆಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಒಪ್ಪಿಕೊಳ್ಳುವ ಮುನ್ನ ತನಿಖೆ ಅಥವಾ ಪರಿಶೋಧನೆ ಮಾಡುವ ಮನಸ್ಥಿತಿ ಇರಬೇಕು. ಇದಲ್ಲದೆ, ಬೇರೆ ವೃತ್ತಿಗಳಿಗೆ ಹೋಲಿಸಿದರೆ ಪತ್ರಕರ್ತರಿಗೆ ಹೆಚ್ಚಿನ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಯಿರುವುದು ಸಹಜ; ಹಾಗಾಗಿ, ಪ್ರಾಮಾಣಿಕತೆ, ನಿಷ್ಠೆ, ಬದ್ದತೆಯನ್ನು ನಿಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು.

ಅತ್ಯಂತ ವಿಸ್ತಾರವಾದ ಈ ಕ್ಷೇತ್ರದಲ್ಲಿ ಮುದ್ರಣ ಮಾಧ್ಯಮ (ದಿನ ಪತ್ರಿಕೆಗಳು, ನಿಯತಕಾಲಿಕೆಗಳು ಇತ್ಯಾದಿ), ಟೆಲಿವಿಷನ್, ರೇಡಿಯೊ, ಸಾಮಾಜಿಕ ಮಾಧ್ಯಮ, ವೆಬ್‌ಸೈಟ್ಸ್, ಬ್ಲಾಗ್ಸ್, ವಿಡಿಯೊ, ಪಾಡ್‌ಕಾಸ್ಟ್ ಇತ್ಯಾದಿ ವಲಯಗಳಲ್ಲಿ ಉದ್ಯೋಗಾವಕಾಶಗಳಿವೆ. ನಿಮ್ಮ ಆಸಕ್ತಿ, ಅಭಿರುಚಿಯಂತೆ ವೃತ್ತಿ ಜೀವನವನ್ನು ರೂಪಿಸಿ ಕೊಳ್ಳಬಹುದು. ಹೆಚ್ಚಿನ ತಜ್ಞತೆಗಾಗಿ, ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ/ಸ್ನಾತಕೋತ್ತರ ಕೋರ್ಸ್ ಮಾಡಬಹುದು.

6. ಡಿ.ಫಾರ್ಮಾ ಕೋರ್ಸ್ ಮುಗಿಸಿದ್ದೇನೆ. ಬಿ.ಫಾರ್ಮಾ ಮಾಡುವ ಮನಸ್ಸಿದೆ. ಆದರೆ, ಅದನ್ನು ಮಾಡಿದರೆ ಕೆಲಸ ಸಿಗುತ್ತದೆಯೇ ತಿಳಿಸಿ.

ಊರು ಹೆಸರು ತಿಳಿಸಿಲ್ಲ.

ಡಿ.ಫಾರ್ಮಾ ನಂತರ ನಾಲ್ಕು ವರ್ಷದ ಬಿ.ಫಾರ್ಮಾ ಕೋರ್ಸಿನ ಎರಡನೇ ವರ್ಷಕ್ಕೆ (ಲ್ಯಾಟರಲ್ ಎಂಟ್ರಿ) ಸೇರಬಹುದು.

ಬಿ.ಫಾರ್ಮಾ ಕೋರ್ಸ್ ರಾಸಾಯನಿಕ ವಿಜ್ಞಾನ, ಆರೋಗ್ಯ, ಔಷದೋಪಚಾರ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳು, ಫಾರ್ಮಾ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಆರೋಗ್ಯ ಮತ್ತು ಡ್ರಗ್ ಕಂಟ್ರೋಲ್ ಇಲಾಖೆಗಳು, ಲ್ಯಾಬೋರೇಟರಿಗಳು, ಕಾಲೇಜುಗಳು, ಮೆಡಿಕಲ್ ಟ್ರಾನ್ಸ್ಕ್ರಿಪ್ಷನ್ ಸಂಸ್ಥೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯ ಅವಕಾಶಗಳಿವೆ. ಡಿ.ಫಾರ್ಮಾ/ಬಿ.ಫಾರ್ಮಾ ನಂತರ ಲೈಸೆನ್ಸ್ ಪಡೆದು ಸ್ವಂತ ಔಷದ ಮಳಿಗೆ ತೆರೆಯುವ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT