ಬುಧವಾರ, ಏಪ್ರಿಲ್ 14, 2021
31 °C
ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ!

ಸಾರಿಗೆ ಬಸ್ ಸಮಸ್ಯೆ; ಶಾಲೆಗಾಗಿ ನಿತ್ಯ 7 ಕಿ.ಮೀ ‘ಪಾದಯಾತ್ರೆ’

ಬಸವರಾಜ ಭೋಗಾವತಿ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ಕಪಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಾಳ ಗ್ರಾಮದ ಮಕ್ಕಳು ಶಾಲೆಗಾಗಿ ನಿತ್ಯ 7 ಕಿ.ಮೀ ನಡೆದೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬೊಮ್ಮನಾಳ ಗ್ರಾಮದ 30ಕ್ಕೂ ಅಧಿಕ ಮಕ್ಕಳು ಪಕ್ಕದ ಮಾಚನೂರು ಗ್ರಾಮದ ಸರ್ಕಾರಿ ಹಿರಿಯ
ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮಾಚನೂರು ಗ್ರಾಮದಲ್ಲಿ ಶಾಲೆ ಆರಂಭವಾಗುವ ವೇಳೆ ಮತ್ತು ಶಾಲೆ ಬಿಡುವ ಸಮಯಕ್ಕೆ ಸಾರಿಗೆ ಬಸ್
ವ್ಯವಸ್ಥೆ ಇಲ್ಲ. ಹೀಗಾಗಿ ಬೊಮ್ಮನಾಳ ಗ್ರಾಮದ ಎಲ್ಲಾ ವಿದ್ಯಾರ್ಥಿಗಳು ನಿತ್ಯ ನಡೆದು ಹೋಗಿ ಬರಬೇಕಾಗಿದೆ.

ಬೊಮ್ಮನಾಳ, ಮಾಚನೂರು, ಬೇವಿನೂರು, ತುಪ್ಪದೂರು ಗ್ರಾಮಗಳ ಕಾಲೇಜು ವಿದ್ಯಾರ್ಥಿಗಳು ಮಾಚನೂರು ಗ್ರಾಮದಿಂದ ಮಾನ್ವಿ ಪಟ್ಟಣಕ್ಕೆ ತೆರಳಲು ಬೆಳಿಗ್ಗೆ ಒಂದು ಬಸ್ ಸಂಚರಿಸುತ್ತಿದೆ. ಆದರೆ, ಬೊಮ್ಮನಾಳ ಸೇರಿ ಈ ಭಾಗದ ಇತರ ಗ್ರಾಮಗಳ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರಕ್ಕೆ ತೆರಳಲು ನಿಗದಿತ ಸಮಯಕ್ಕೆ ಬಸ್ ಸಂಚಾರ ಇಲ್ಲ.

ಮಾನ್ವಿ-ರಾಯಚೂರು ಮಾರ್ಗದಲ್ಲಿ ಬರುವ ಬೊಮ್ಮನಾಳ ಕ್ರಾಸ್ ಹತ್ತಿರ ಸಾರಿಗೆ ಬಸ್‍ಗಳನ್ನು ನಿಲ್ಲಿಸುವುದಿಲ್ಲ. ನೇರ ಬಸ್ ಸೌಲಭ್ಯ ಇಲ್ಲದ ಕಾರಣ ಬೊಮ್ಮನಾಳ ಗ್ರಾಮದ ಕಾಲೇಜು ವಿದ್ಯಾರ್ಥಿಗಳಿಗೆ ರಾಯಚೂರಿನಿಂದ ಕುರ್ಡಿ ಕ್ರಾಸ್‍ನವರೆಗೆ ಬಸ್ ಪಾಸ್ ನೀಡಲಾಗಿದೆ. ವಿದ್ಯಾರ್ಥಿಗಳು ಪ್ರತಿ ದಿನ ಬೊಮ್ಮನಾಳ ಕ್ರಾಸ್‍ನಿಂದ ಕುರ್ಡಿ ಕ್ರಾಸ್‍ವರೆಗೆ ನಡೆದು ಹೋಗಬೇಕು ಅಥವಾ ಆಟೊ, ಟಂಟಂ ವಾಹನಗಳಲ್ಲಿ ಹಣ ಕೊಟ್ಟು ಸಂಚರಿಸಬೇಕಾದ ಪರಿಸ್ಥಿತಿ ಇದೆ.

ಪ್ರತಿ ದಿನ ಬೆಳಿಗ್ಗೆ 10ಗಂಟೆಯ ನಂತರ ಮಾನ್ವಿಯಿಂದ ಬೊಮ್ಮನಾಳ ಮಾರ್ಗವಾಗಿ ಒಂದು ಬಸ್ ಸಂಚರಿ
ಸುತ್ತದೆ. ಶಾಲಾ ಸಮಯಕ್ಕೆ ಸರಿಯಾಗಿ ಈ ಬಸ್ ಬಂದರೆ ವಿದ್ಯಾರ್ಥಿಗಳಿಗೆ ಅನುಕೂಲ ಎನ್ನುತ್ತಾರೆ ಗ್ರಾಮಸ್ಥರು.

‘ಸಾರಿಗೆ ಬಸ್ ಕೊರತೆಯಿಂದ ಬೊಮ್ಮನಾಳ-ಮಾಚನೂರು ಭಾಗದ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ನಿತ್ಯ ತೊಂದರೆಯಾಗುತ್ತಿದೆ. ಈ ಭಾಗಕ್ಕೆ ಹೆಚ್ಚುವರಿ ಬಸ್‍ಗಳ ಸೌಲಭ್ಯ ಕಲ್ಪಿಸಬೇಕು’ ಎಂದು ಮಾಚನೂರು ಗ್ರಾ.ಪಂ ಸದಸ್ಯ ಅಂಬಣ್ಣ ಕಡದೊಡ್ಡಿ ಒತ್ತಾಯಿಸಿದ್ದಾರೆ.

***

ಗ್ರಾಮೀಣ ಭಾಗದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮರ್ಪಕ ಬಸ್ ಸೌಲಭ್ಯ ಒದಗಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

- ನಾಗನಗೌಡ ಬೊಮ್ಮನಾಳ, ಅಧ್ಯಕ್ಷ, ಗ್ರಾಮ ಪಂಚಾಯಿತಿ ಕಪಗಲ್

***

ಬೊಮ್ಮನಾಳ-ಮಾಚನೂರು ಭಾಗದಲ್ಲಿ ಹೆಚ್ಚಿನ ಬಸ್‍ಗಳ ಸೌಲಭ್ಯ ಕಲ್ಪಿಸಲು ಸಾರಿಗೆ ಸಂಸ್ಥೆಯ ಮೇಲಧಿಕಾರಿಗಳ ಜತೆ ಚರ್ಚಿಸಲಾಗುವುದು.

- ಹನುಮಂತ್ರಾಯ, ಸಾರಿಗೆ ನಿರೀಕ್ಷಕ, ಮಾನ್ವಿ ಘಟಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು