ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆ ವಿದ್ಯಾರ್ಥಿಗಳಿಂದ ಉತ್ಪನ್ನಗಳ ತಯಾರಿ–ಮಾರಾಟ: ಕಲಿಕೆ ಜತೆ ಗಳಿಕೆ

Last Updated 7 ಡಿಸೆಂಬರ್ 2021, 16:09 IST
ಅಕ್ಷರ ಗಾತ್ರ

ಬೆಂಗಳೂರು: ಕಲಿಕೆಯ ಹಂತದಲ್ಲೇ ವಿದ್ಯಾರ್ಥಿಗಳನ್ನು ಉದ್ಯಮಿಗಳನ್ನಾಗಿ ಸಜ್ಜುಗೊಳಿಸುವ ಆಶಯದೊಂದಿಗೆಹೆಬ್ಬಾಳದ ಹೈನು ವಿಜ್ಞಾನ ಮಹಾವಿದ್ಯಾಲಯದ ‘ಡೈರಿ ಎಂಜಿನಿಯರಿಂಗ್‌’ ವಿಭಾಗದಲ್ಲಿ 4ನೇ ವರ್ಷದ ಬಿ.ಟೆಕ್‌ (ಡಿ.ಟೆಕ್) ವಿದ್ಯಾರ್ಥಿಗಳಿಗೆ ಡೈರಿ ಮತ್ತು ಆಹಾರ ಉತ್ಪನ್ನಗಳ ತಯಾರಿಯಿಂದ ಮಾರಾಟದವರೆಗಿನ ತರಬೇತಿಯನ್ನು ನೀಡಲಾಗುತ್ತಿದೆ.

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (ಕೆವಿಎಎಫ್‌ಎಸ್‌ಯು) ಅಧೀನದಲ್ಲಿರುವ ಹೈನುವಿಜ್ಞಾನ ಮಹಾವಿದ್ಯಾಲಯದಲ್ಲಿ ‘ಗ್ರಾಮೀಣ ಉದ್ಯಮಶೀಲತೆ ಜಾಗೃತಿ ಅಭಿವೃದ್ಧಿ ಯೋಜನೆ’ (ರೆಡಿ) ಕಾರ್ಯಕ್ರಮದಡಿ ‘ಡೈರಿ ಎಂಜಿನಿಯರಿಂಗ್’ ವಿಭಾಗದ ಏಳನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ‘ಉತ್ಕೃಷ್ಟ’ ಶೀರ್ಷಿಕೆಯಲ್ಲಿ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟವೂ ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳು ತಯಾರಿಸುವ ಶುದ್ಧ ಹಸುವಿನ ತುಪ್ಪ, ಲಸ್ಸೀ, ಯೋಗರ್ಟ್‌, ಪನ್ನೀರ್, ತೆಂಗಿನ ಎಣ್ಣೆ ಉತ್ಪನ್ನಗಳನ್ನು ನಗರದ ನಿವಾಸಿಗಳು ಪ್ರತಿನಿತ್ಯ ಖರೀದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ಹಂತದಲ್ಲಿ ಬೇರೆ ಉತ್ಪನ್ನಗಳನ್ನು ಸಿದ್ಧಪಡಿಸಲು ವಿದ್ಯಾರ್ಥಿಗಳು ಯೋಜನೆ ರೂಪಿಸಿದ್ದಾರೆ.

‘ಕಲಿಕೆ ಹಂತದಲ್ಲೇ ಗಳಿಕೆ’ ಘೋಷವಾಕ್ಯಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡಲಾಗುತ್ತಿದೆ. ಪದವಿ ಪಡೆದು ಉದ್ಯೋಗಗಳನ್ನು ಪಡೆಯುವ ಬದಲಿಗೆ, ಉದ್ಯಮಿಗಳಾಗಿ ಉದ್ಯೋಗಗಳನ್ನು ಸೃಷ್ಟಿಸುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ’ ಎಂದುಹೈನುವಿಜ್ಞಾನ ಮಹಾವಿದ್ಯಾಲಯದ ಡೀನ್‌ ಎ.ಸಚೀಂದ್ರ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಡೈರಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಹಾಗೂ ಕಾರ್ಯಕ್ರಮದ ಸಂಯೋಜಕ ಜಿ.ಮಹೇಶ್‌ ಕುಮಾರ್,‘ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್‌ಇಪಿ) ಈ ಉಪಕ್ರಮವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ನಮ್ಮಲ್ಲಿ ಅನುಷ್ಠಾನಗೊಳಿಸಿದ್ದೇವೆ. ಹಾಲಿನಿಂದ ರೈತರಿಗೆ ಸಿಗುವ ಲಾಭ ಸೀಮಿತ. ಆದರೆ, ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳಿಂದ ಅವರ ಆದಾಯ ದ್ವಿಗುಣಗೊಳ್ಳುತ್ತದೆ. ಅದಕ್ಕೆ ಉದ್ಯಮದ ರೂಪ ನೀಡಲು ವಿದ್ಯಾರ್ಥಿಗಳು ತಯಾರಾಗಿದ್ದು, ಸ್ವಂತ ನವೋದ್ಯಮಗಳ ಮೂಲಕ ಯುವ ಉದ್ಯಮಿಗಳಾಗಿ ಹೊರಹೊಮ್ಮಲಿದ್ದಾರೆ’ ಎಂದರು.

‘ವಿದ್ಯಾರ್ಥಿಗಳು ಪ್ರತಿದಿನ 30 ಕೆ.ಜಿ ಪನ್ನೀರ್‌, 100 ಕಪ್‌ ಯೋಗರ್ಟ್‌, 100 ಕೆ.ಜಿ ತುಪ್ಪ ಹಾಗೂ 30 ಲೀಟರ್‌ಗಳಷ್ಟು ಲಸ್ಸೀ ತಯಾರಿಸುತ್ತಿದ್ದಾರೆ. ತೆಂಗಿನ ಎಣ್ಣೆಗೆ ಸ್ಥಳೀಯ ಗ್ರಾಹಕರಿಂದ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಬೀದರ್‌ನಿಂದಲೂ ಕೆಲವರು ಉತ್ಪನ್ನಗಳಿಗೆ ಬೇಡಿಕೆ ಇಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ರಾಜು ನಾಯಕ್, ‘40 ವಿದ್ಯಾರ್ಥಿಗಳನ್ನು 6 ತಂಡಗಳನ್ನಾಗಿ ವಿಂಗಡಿಸಿ, ಉತ್ಪನ್ನಗಳ ತಯಾರಿ, ಸಂಸ್ಕರಣೆ ಹಾಗೂ ಮಾರಾಟದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿಗಳನ್ನು ನೀಡಲಾಗುತ್ತಿದೆ. ತಾವೇ ಸಿದ್ಧಪಡಿಸಿದ ಉತ್ಪನ್ನಕ್ಕೆ ಮಾರುಕಟ್ಟೆ ಸೃಷ್ಟಿಸುವುದು ಹೇಗೆ ಎನ್ನುವ ಪ್ರಶ್ನೆಗೆ ವಿದ್ಯಾರ್ಥಿಗಳೇ ಉತ್ತರ ಕಂಡುಕೊಳ್ಳುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT