ಭಾನುವಾರ, ಜೂನ್ 20, 2021
20 °C

ಸೆ.21 ರಿಂದ 30 ರವರೆಗೆ ಅಧಿವೇಶನ ನಡೆಸಲು ಸಂಪುಟ ಸಭೆಯಲ್ಲಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನವನ್ನು ಸೆ.21 ರಿಂದ ಸೆ.30 ರವರೆಗೆ ನಡೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಮುಂಗಾರು ಅಧಿವೇಶನವನ್ನು ಸೆಪ್ಟೆಂಬರ್‌‌ 23 ಕ್ಕೂ ಮೊದಲೇ ಆರಂಭಿಸಬೇಕಿತ್ತು. ಆದ್ದರಿಂದ ಸೆ.21 ರಿಂದ ಪ್ರಾರಂಭಿಸಲು ದಿನಾಂಕ ನಿಗದಿ ಮಾಡಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ಅಧಿವೇಶನವನ್ನು ಬೆಂಗಳೂರಿನಲ್ಲೇ ನಡೆಸಲಾಗುವುದು. ಅಧಿವೇಶನದ ಸ್ಥಳ ಇತ್ಯಾದಿ ವಿಷಯಗಳ ಬಗ್ಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿಧಾನಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರ ಜತೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಅಗತ್ಯ ಎನಿಸಿದರೆ ಒಂದೆರಡು ದಿನಗಳು ಕಲಾಪ ವಿಸ್ತರಿಸಲಾಗುವುದು ಎಂದೂ ಮಾಧುಸ್ವಾಮಿ ತಿಳಿಸಿದರು. ಮಾರ್ಚ್‌ನಲ್ಲಿ ಅಧಿವೇಶನ ನಡೆಸುವಾಗ ಕೊರೊನಾ ಸೋಂಕು ವ್ಯಾಪಕಗೊಂಡ ಕಾರಣ, ಅಧಿವೇಶನವನ್ನು ಮೊಟಕುಗೊಳಿಸಲಾಗಿತ್ತು.

ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ವಿಧಾನಸಭೆ ಸಭಾಂಗಣದಲ್ಲಿ ಅಧಿವೇಶನ ನಡೆಸಲು ಅಧಿಕಾರಿಗಳು ಸಭಾಧ್ಯಕ್ಷ ಕಾಗೇರಿಯವರಿಗೆ ಸಲಹೆ ನೀಡಿದ್ದು, ಅದರಂತೆ ಅಧಿವೇಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ನಿರ್ಣಯಗಳು

* ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಪರಿಶಿಷ್ಟ ಪಂಗಡದ ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳು ಮತ್ತು ಆಶ್ರಮ ಶಾಲೆಗಳ ವಿದ್ಯಾರ್ಥಿಗಳಿಗೆ ಊಟೋಪಚಾರ ಸೌಲಭ್ಯ, ಶುಚಿ ಸಂಭ್ರಮ ಕಿಟ್‌ ಹಾಗೂ ಶೂ ಮತ್ತು ಸಾಕ್ಸ್ ಒದಗಿಸಲು ₹65.48 ಕೋಟಿಗೆ ಅನುಮೋದನೆ

* ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸುವ ಕುರಿತು ಮಾರ್ಗಸೂಚಿ ಪರಿಷ್ಕರಿಸಲು ಒಪ್ಪಿಗೆ

* ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ ಷೇರು ಬಂಡವಾಳವನ್ನು ₹1,000 ಕೋಟಿಯಿಂದ ₹1,250 ಕೋಟಿಗೆ ಹೆಚ್ಚಿಸಲು ಸಮ್ಮತಿ 

* ಎಸ್‌ಸಿಪಿ ಟಿಎಸ್‌ಪಿ ಕಾರ್ಯಕ್ರಮದಡಿ 14 ಸಂಚಾರಿ ಆರೋಗ್ಯ ಘಟಕಗಳು ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ 64 ಸಂಚಾರಿ ಆರೋಗ್ಯ ಘಟಕಗಳು ಸೇರಿ ಒಟ್ಟು 78 ಸಂಚಾರಿ ಆರೋಗ್ಯ ಘಟಕಗಳನ್ನು 5 ವರ್ಷಗಳ ಅವಧಿಗೆ ಮುಂದುವರೆಸಲು ಅರ್ಹ ಸೇವಾದಾರರ ಆಯ್ಕೆಗೆ ಟೆಂಡರ್‌ ಕರೆಯಲು ಒಪ್ಪಿಗೆ

* ಕರ್ನಾಟಕ ಕಲ್ಲು ಪುಡಿ ಮಾಡುವ ಘಟಕಗಳ (ಕ್ರಷರ್ಸ್‌) ನಿಯಂತ್ರಣ ತಿದ್ದುಪಡಿ ಮಸೂದೆ 2020 ಕ್ಕೆ ಅನುಮೋದನೆ

* ಕರ್ನಾಟಕ ಕೈಗಾರಿಕಾ ಸೌಲಭ್ಯ ತಿದ್ದುಪಡಿ, ಮಸೂದೆ 2020 ಕ್ಕೆ ಅನುಮತಿ

* ಎಲ್ಲ ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳು ಮತ್ತು ಸೌಹಾರ್ದ ಸಹಕಾರಿಗಳ ಚುನಾವಣೆಯನ್ನು ಡಿಸೆಂಬರ್‌ವರೆಗೆ ಮುಂದೂಡಿ, ಆಡಳಿತಾಧಿಕಾರಿಗಳನ್ನು ನೇಮಿಸಲು ಹೊರಡಿಸಿರುವ ಆದೇಶಗಳಿಗೆ ಅನುಮೋದನೆ

* ರಾಜ್ಯಾದ್ಯಂತ ಸರ್ಕಾರಿ ಮಾಲಿಕತ್ವದಲ್ಲಿ ಇರುವ ಘೋಷಿತ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಅನುಮತಿ

* ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ 50 ಕೆರೆಗಳನ್ನು ತುಂಬಿಸಲು ₹265.20 ಕೋಟಿ ನೀಡಲು ಅನುಮೋದನೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು