ಶುಕ್ರವಾರ, ಆಗಸ್ಟ್ 19, 2022
25 °C
11 ದಿನಗಳ ನಂತರ ಭೇಟಿ ನೀಡಿದ ಕೃಷಿ ಸಚಿವ

ಉಪವಾಸ ಸತ್ಯಾಗ್ರಹ ಮುಂದುವರಿಸಲು ತೀರ್ಮಾನ; ರೈತರೊಂದಿಗೆ ಚರ್ಚೆ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ಶಿಕಾರಿಪುರ ಏತ ನೀರಾವರಿ ಯೋಜನೆಗೆ ತಾಲ್ಲೂಕಿನ ರೈತರ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಹೋರಾಟ ಸಮಿತಿ 11 ದಿನಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಭಾನುವಾರ ಭೇಟಿ ನೀಡಿ ನಡೆ
ಸಿದ ಚರ್ಚೆ ವಿಫಲವಾಗಿದ್ದು ರೈತರು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ, ‘ರೈತರ ನ್ಯಾಯಸಮ್ಮತ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ. ಈ ಹಿಂದೆ ರೈತರ ಜಮೀನಿನಲ್ಲಿ 10 ಮೀಟರ್‌ ಭೂಸ್ವಾಧೀನಪಡಿಸಿಕೊಂಡು ಸರ್ವಿಸ್ ರಸ್ತೆ ಮಾಡಲು ನಿರ್ಧರಿಸಲಾಗಿತ್ತು. ಸರ್ವಿಸ್ ರಸ್ತೆಯನ್ನು ಮಾಡದೇ ಕೇವಲ 4 ಮೀಟರ್ ಪೈಪಲೈನ್ ಮಾಡಲು ಜೆ.ಎಂ.ಸಿ. ಮಾಡಿ ಭೂಸ್ವಾಧೀನಪಡಿಸಿಕೊಂಡು ಹೆಚ್ಚಿನ ಮೊತ್ತದ ಪರಿಹಾರ ಧನವನ್ನು 15 ದಿನಗಳಲ್ಲಿ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಹೋರಾಟದ ನೇತೃತ್ವ ವಹಿಸಿದ್ದ ಬಿ.ಡಿ. ಹಿರೇಮಠ, ‘ಈ ಹಿಂದೆ ತುಂಗಾ ಮೇಲ್ದಂಡೆ ಯೋಜನೆಯಡಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ 20 ವರ್ಷಗಳಿಂದ ರೈತರಿಗೆ ಬರಬೇಕಾಗಿರುವ ₹150 ಕೋಟಿ ಬಾಕಿ ಹಣ ನೀಡುವ ಬಗ್ಗೆ ಆದೇಶ ನೀಡಬೇಕು’ ಎಂದು ಒತ್ತಾಯಿಸಿದರು.

‘ಈ ಬಗ್ಗೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ನೀರಾವರಿ ಸಚಿವ ರಮೇಶ ಜಾರಕಿಹೊಳಿಯೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. ತಕ್ಷಣಕ್ಕೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ ಎಂದು ಸಚಿವರು ತಿಳಿಸಿದರು. ಇದನ್ನು ಒಪ್ಪದ ರೈತರು ಉಪವಾಸ ಸತ್ಯಾಗ್ರಹ ಮುಂದುವರಿಸಲು ತೀರ್ಮಾನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು