ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿ ಮೀಸಲಾತಿ ಹೆಚ್ಚಿಸಲು ಶೀಘ್ರದಲ್ಲೇ ನಿರ್ಧಾರ: ಸಿಎಂ

ಆಮರಣ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ ಪ್ರಸನ್ನಾನಂದ ಸ್ವಾಮೀಜಿ
Last Updated 9 ಫೆಬ್ರುವರಿ 2021, 18:37 IST
ಅಕ್ಷರ ಗಾತ್ರ

ದಾವಣಗೆರೆ: ‘ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಮಾರ್ಚ್‌ 9ರೊಳಗೆ ಶೇ 7.5ಕ್ಕೆ ಹೆಚ್ಚಿಸದಿದ್ದರೆ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ನಾನೇನಾದರೂ ಸತ್ತರೆನೀವೆಲ್ಲ...’ ಎಂದು ಹೇಳುವ ಮೂಲಕ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ರಾಜ್ಯ ಸರ್ಕಾರದ ಮೇಲೆ ಮಂಗಳವಾರ ಒತ್ತಡ ಹಾಕಿದರು. ತಕ್ಷಣವೇಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಸಚಿವ ಸಂಪುಟದಲ್ಲಿ ಚರ್ಚಿಸಿಈ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಹರಿಹರ ತಾಲ್ಲೂಕಿನ ರಾಜನಹಳ್ಳಿ ಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಪ್ರಸನ್ನಾನಂದ ಸ್ವಾಮೀಜಿ ತಮ್ಮ ನೋವನ್ನು ಮುಖ್ಯಮಂತ್ರಿ ಎದುರು ತೋಡಿಕೊಂಡರು. ಪಕ್ಕದಲ್ಲೇ ಕುಳಿತಿದ್ದ ಯಡಿಯೂರಪ್ಪ, ‘ಸಾವಿನ ಮಾತು ಬೇಡ ಬುದ್ಧಿ, ಆದಷ್ಟು ಬೇಗನೆ ಬೇಡಿಕೆ ಈಡೇರಿಸುತ್ತೇನೆ’ ಎಂದು ಕೈಮುಗಿದರು.

ಸಚಿವರಾದ ರಮೇಶ ಜಾರಕಿಹೊಳಿ, ಆನಂದ ಸಿಂಗ್‌, ಬಿಜೆಪಿ ಶಾಸಕರಾದ ನರಸಿಂಹನಾಯಕ (ರಾಜುಗೌಡ), ಎಸ್‌.ವಿ. ರಾಮಚಂದ್ರ, ಸಂಸದ ವೈ.ದೇವೇಂದ್ರಪ್ಪ ಅವರೂ ಸ್ವಾಮೀಜಿಯನ್ನು ಸಮಾಧಾನಪಡಿಸಲು ಯತ್ನಿಸಿದರು.

‘ಮುಖ್ಯಮಂತ್ರಿ ನಮಗೆ ತಂದೆ ಇದ್ದಂತೆ. ನಮ್ಮ ನೋವನ್ನು ಅವರ ಬಳಿ ಹೇಳಿಕೊಳ್ಳುತ್ತಿದ್ದೇವೆ. ಮುಖ್ಯಮಂತ್ರಿಗೆ ಬೇಸರವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ಮುಖ್ಯಮಂತ್ರಿ ಭರವಸೆ ನೀಡಿದ್ದರಿಂದ ನನ್ನ ನಿರ್ಧಾರವನ್ನು ವಾಪಸ್‌ ಪಡೆಯುತ್ತೇನೆ’ ಎಂದು ಸ್ವಾಮೀಜಿ ಪ್ರಕಟಿಸಿದರು.

ಇದಕ್ಕೂ ಮೊದಲು ಮಾತನಾಡಿದ ಸ್ವಾಮೀಜಿ, ‘ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ನೀಡುವ ಬಗ್ಗೆ ಕೇಂದ್ರ ಸರ್ಕಾರ ಮೂರು ದಿನಗಳಲ್ಲೇ ನಿರ್ಧಾರ ತೆಗೆದುಕೊಂಡಾಗ ಸುಪ್ರೀಂ ಕೋರ್ಟ್‌ ಆದೇಶ ಅಡ್ಡಿ ಬರಲಿಲ್ಲವೇ? ಎಸ್‌ಸಿ, ಎಸ್‌ಟಿಗೆ ಮೀಸಲಾತಿ ನೀಡುವಾಗ ಮಾತ್ರ ಸಮಿತಿಗಳನ್ನು ರಚಿಸಲಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಾಗಮೋಹನದಾಸ್‌ ಸಮಿತಿ ವರದಿ ಅಧ್ಯಯನಕ್ಕೆ ಸಚಿವ ಸಂಪುಟದ ಉಪ ಸಮಿತಿ ರಚಿಸುವ ಅಗತ್ಯವೇ ಇರಲಿಲ್ಲ. ಮುಖ್ಯಮಂತ್ರಿ ಕಡತಕ್ಕೆ ಸಹಿ ಹಾಕಿದ್ದರೆ ಮೀಸಲಾತಿ ಪ್ರಮಾಣ ಹೆಚ್ಚಾಗುತ್ತಿತ್ತು’ ಎಂದು ಹೇಳಿದರು.

ನಂತರ ಮಾತನಾಡಿದ ಯಡಿಯೂರಪ್ಪ, ‘ವಾಲ್ಮೀಕಿ ಸಮು ದಾಯದ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಸಚಿವ ಸಂಪುಟದಲ್ಲಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಸುದೀಪ್‌ಗೆ ‘ವಾಲ್ಮೀಕಿ ರತ್ನ’ ಪ್ರಶಸ್ತಿ ಪ್ರದಾನ

ವಾಲ್ಮೀಕಿ ಜಾತ್ರೆಯಲ್ಲಿ ಚಿತ್ರನಟ ಕಿಚ್ಚ ಸುದೀಪ್‌ ಅವರಿಗೆ ‘ವಾಲ್ಮೀಕಿ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿದ್ದ ಅಭಿಮಾನಿಗಳು ಸುದೀಪ್‌ ಬರುತ್ತಿದ್ದಂತೆ ಕೇಕೆ ಹಾಕಿ ಸಂಭ್ರಮಿಸಿದರು. ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT