ಶುಕ್ರವಾರ, ಮೇ 20, 2022
26 °C

ಸೋಂಕು ಇಳಿಮುಖ ಸಕಾರಾತ್ಮಕ ಬೆಳವಣಿಗೆ: ಸಚಿವ ಡಾ.ಕೆ. ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೊರೊನಾ ಸೋಂಕು ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಇಳಿಮುಖ ಆಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಆದರೆ, ಬೆಂಗಳೂರು ಹೊರತುಪಡಿಸಿದರೆ ಇತರ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗಗಳಲ್ಲಿ ಸೋಂಕು ಹರಡುವಿಕೆ ಹೆಚ್ಚಾಗುತ್ತಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ಸೋಂಕು ಕಡಿಮೆಯಾಗುವ ಸಾಧ್ಯತೆ ಇದೆ. ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದರು.

‘ಬೆಂಗಳೂರಿನಲ್ಲಿ ಕೋವಿಡ್‌ ದೃಢ ಪ್ರಮಾಣ ಇದೇ 19ರಂದು ಅತಿ ಹೆಚ್ಚು ಇತ್ತು. ಈಗ ಕಡಿಮೆಯಾಗುತ್ತಿದೆ. ಈಗ ಬೇರೆ ಬೇರೆ ನಗರಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದು ಸ್ವಾಭಾವಿಕ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಇದೀಗ ಕಡಿಮೆಯಾಗುತ್ತಿದೆ. ನಮ್ಮಲ್ಲೂ ಕೂಡ ಎರಡು, ಮೂರು ವಾರದಲ್ಲಿ ಕಡಿಮೆಯಾಗುವ ಸಂಭವವಿದೆ’ ಎಂದರು.

‘ಕೋವಿಡ್‌ ದೃಢಪಟ್ಟವರನ್ನು ಮನೆಯಿಂದ ಹೊರಗೆ ಬರಬೇಡಿ ಎಂದು ಪದೇ ಪದೇ ಮನವಿ ಮಾಡಿದರೂ ಕೆಲವರು ಅನಗತ್ಯವಾಗಿ ತಿರುಗಾಡುತ್ತಿದ್ದಾರೆ. ಇದರಿಂದ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಅಲ್ಲದೆ, ಕರ್ನಾಟಕ ಐದಾರು ರಾಜ್ಯಗಳ ಜತೆ ಗಡಿಯನ್ನು ಹಂಚಿಕೊಂಡಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಚಾರ ಮಾಡುವುದರಿಂದಲೂ ಸೋಂಕು ಹಬ್ಬುತ್ತದೆ’ ಎಂದು ಸಚಿವರು ಅಭಿಪ್ರಾಯಪಟ್ಟರು.

‘ಜನ ಸಾಮಾನ್ಯರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ವಾರಾಂತ್ಯದ ಲಾಕ್‍ಡೌನ್‍ ಹಿಂಪಡೆಯಲಾಗಿದೆ. ಕೇವಲ ಕಾನೂನಿನಿಂದ ಮಾತ್ರ ಕೋವಿಡ್‌ ಕಟ್ಟಿಹಾಕಲು ಸಾಧ್ಯವಿಲ್ಲ. ಜನರ ಸಹಕಾರವೂ ಅಷ್ಟೇ ಮುಖ್ಯ. ನಾವು ಜನರಿಗೆ ಜವಾಬ್ದಾರಿ ನೀಡಿದ್ದೇವೆ. ಸಾರ್ವಜನಿಕರು ಸರ್ಕಾರಕ್ಕೆ ಸಹಕಾರ ಕೊಡಬೇಕು’ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು