ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧಕ್ಕೆ ಆಗ್ರಹ: ಜಾಲತಾಣಗಳಲ್ಲಿ ಚರ್ಚೆ

ಡಿಜಿಪಿ ಪತ್ರ ಉಲ್ಲೇಖಿಸಿ ಜಾಲತಾಣಗಳಲ್ಲಿ ಚರ್ಚೆ
Last Updated 5 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಸೀದಿಗಳಲ್ಲಿ ಧ್ವನಿ ವರ್ಧಕಗಳ ಬಳಕೆ ನಿಷೇಧಿಸಬೇಕು’ ಎಂದು ವಕೀಲರೊಬ್ಬರು ಪೊಲೀಸ್‌ ಮಹಾನಿರ್ದೇಶಕರ ಕಚೇರಿಗೆ ನೀಡಿದ್ದ ದೂರನ್ನು ಆಧರಿಸಿ ‘ಸೂಕ್ತ ಕ್ರಮ’ ತೆಗೆದುಕೊಳ್ಳುವಂತೆ ಎಲ್ಲ ಎಸ್ಪಿಗಳು ಮತ್ತು ಪೊಲೀಸ್ ಆಯಕ್ತರಿಗೆ ಪತ್ರ ರವಾನೆಯಾಗಿರುವುದು ಚರ್ಚೆಗೆ ಕಾರಣವಾಗಿದೆ.

‘ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಧ್ವನಿ ವರ್ಧಕಗಳ ಮೂಲಕ ನಮಾಜ್‌ಗೆ ಕರೆ ನೀಡುವುದರಿಂದ ಸುತ್ತಮುತ್ತಲಿನ ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ತೊಂದರೆ ಆಗುತ್ತಿದೆ. ಧ್ವನಿ ವರ್ಧಕಗಳನ್ನು ನಿಷೇಧಿಸಬೇಕು’ ಎಂದು ವಕೀಲ ಹರ್ಷ ಮುತಾಲಿಕ್‌ ಎಂಬುವವರು ದೂರು ನೀಡಿದ್ದರು.

ಈ ದೂರನ್ನು ಆಧರಿಸಿ, ‘ಮಸೀದಿಗಳಲ್ಲಿನ ಧ್ವನಿ ವರ್ಧಕಗಳಿಗೆ ನಿರ್ಬಂಧ ಹೇರಿ ಅವುಗಳನ್ನು ತೆರವುಗೊಳಿಸಬೇಕು ಎಂಬ ಆಕ್ಷೇಪ ವ್ಯಕ್ತಪಡಿಸಿ ದೂರು ಬಂದಿರುವುದರಿಂದ ಈ ಬಗ್ಗೆ ಮಾಹಿತಿ– ನಿಯಮಾನುಸಾರ ಸೂಕ್ತ ಕ್ರಮ ತೆಗೆದುಕೊಳ್ಳಬಹುದು’ ಎಂಬ ಒಕ್ಕಣೆ ಯೊಂದಿಗೆ ಡಿಜಿಪಿ ಕಚೇರಿಯಿಂದ ಪತ್ರ ರವಾನೆಯಾಗಿದೆ.

ಈ ಪತ್ರವು ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುತ್ತಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ‘ಧ್ವನಿ ವರ್ಧಕಗಳ ನಿಷೇಧಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಸಾಮಾನ್ಯವಾಗಿ ಡಿಜಿಪಿ ಕಚೇರಿಗೆ ದೂರುಗಳು ಬಂದಾಗ, ಅದನ್ನು ಸ್ವೀಕರಿಸುವ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಕಡತ ಮಂಡಿಸುತ್ತಾರೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದು ಎಂಬ ಒಕ್ಕಣೆ ಬರೆದು ಅಧಿಕಾರಿಗಳಿಗೆ ಬರೆದು ಕಳಿಸುವುದುಂಟು. ಆದರೆ, ಅದು ಆದೇಶವಾಗಿರುವುದಿಲ್ಲ. ಮುತಾಲಿಕ್‌ ಅವರ ದೂರಿನ ಕಡತ ಡಿಜಿಪಿಯ ವರಿಗೂ ತಲುಪಿಲ್ಲ’ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ.

‘ಮಸೀದಿಗಳಲ್ಲಿ ಧ್ವನಿ ವರ್ಧಕಗಳನ್ನು ಬಳಸಬಾರದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರೂ ಸರ್ಕಾರ ವಾಗಲಿ, ಪೊಲೀಸ್‌ ಇಲಾಖೆಯಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಲಹಾಬಾದ್‌ ಹೈಕೋರ್ಟ್‌ ಕೂಡ ಧ್ವನಿ ವರ್ಧಕಗಳನ್ನು ತೆಗೆಯದಿದ್ದರೆ ಅಗತ್ಯ ಕ್ರಮ ತೆಗೆದುಕೊಳ್ಳಬಹುದು ಎಂದು ಆದೇಶಿಸಿದೆ. ಮಸೀದಿಗಳಲ್ಲಿ ಮಿತಿ ಮೀರಿದ ಶಬ್ದದ ಮೂಲಕ ಧ್ವನಿವರ್ಧಕ ಬಳಸಲಾಗುತ್ತಿದೆ. ಇದರಿಂದ ತೊಂದರೆ ಆಗುತ್ತಿದೆ’ ಎಂದು ಹರ್ಷ ಮುತಾಲಿಕ್‌ ದೂರಿನಲ್ಲಿ ತಿಳಿಸಿದ್ದರು.

ಈ ಎರಡೂ ಪತ್ರಗಳನ್ನು ಲಗತ್ತಿಸಿರುವ ಕೆಲವರು ಧ್ವನಿವರ್ಧಕ ನಿರ್ಬಂಧಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರು ಮಾಡಿದ್ದಾರೆ.

‘ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧಿಸುವುದರಿಂದ ಧಾರ್ಮಿಕ ಸ್ವಾತಂತ್ರ್ಯ ಮೊಟಕುಗೊಳಿಸಿದಂತೆ ಆಗುತ್ತದೆ. ಇದಕ್ಕೆ ಸರ್ಕಾರ ಅವಕಾಶ ನೀಡ
ಬಾರದು’ ಎಂಬ ಚರ್ಚೆಯೂ ಜಾಲತಾಣಗಳಲ್ಲಿ ನಡೆಯುತ್ತಿದೆ.

***

ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧಕ್ಕೆ ಸಂಬಂಧಿಸಿದಂತೆ ಡಿಜಿಪಿ ಕಚೇರಿ ಯಾವುದೇ ಆದೇಶವನ್ನು ಹೊರಡಿಸಿಲ್ಲ

- ಬಸವರಾಜ ಬೊಮ್ಮಾಯಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT