ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೆಸ್ಸೆಸ್‌ ಆಳ ಅಗಲ: ದೇವನೂರ ಮಹಾದೇವರ ಕೃತಿಗೆ ಭಾರಿ ಬೇಡಿಕೆ

Last Updated 6 ಜುಲೈ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇವನೂರ ಮಹಾದೇವ ಬರೆದಿರುವ ‘ಆರ್‌ಎಸ್‌ಎಸ್‌: ಆಳ ಮತ್ತು ಅಗಲ’ ಕೃತಿಯ 9 ಸಾವಿರ ಪ್ರತಿಗಳು ಅದು ಬಿಡುಗಡೆಗೊಂಡ ಮೂರೇ ದಿನಗಳಲ್ಲಿ ಮಾರಾಟವಾಗಿದ್ದು, ಇನ್ನಷ್ಟು ಪ್ರತಿಗಳನ್ನು ಮುದ್ರಿಸುವ ಪ್ರಕ್ರಿಯೆ ಭರದಿಂದ ಸಾಗಿದೆ.

ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್‌, ಸರಸಂಘ ಚಾಲಕರಾಗಿದ್ದ ಗೋಳ್ವಾಲ್ಕರ್‌, ವಿನಾಯಕ ದಾಮೋದರ ಸಾವರ್ಕರ್‌ ಅವರೆಲ್ಲ ಸಂವಿಧಾನದ ಮೌಲ್ಯಗಳನ್ನು ಮೀರಿ ಹೇಗೆ ಸಿದ್ಧಾಂತ ಕಟ್ಟಿದ್ದಾರೆ ಎನ್ನುವುದನ್ನು ಸೋದಾಹರಣೆಗಳೊಂದಿಗೆ ದೇವನೂರರು ವಿವರಿಸಿದ್ದಾರೆ. ಇತಿಹಾಸದ ಸಂಗತಿಗಳನ್ನು ಹೇಗೆಲ್ಲ ಬದಲಿಸಲಾಗಿದೆ ಎನ್ನುವುದನ್ನು ಅವರು ತಮ್ಮ ಅಧ್ಯಯನದ ಮಾಹಿತಿಯೊಂದಿಗೆ ಕಟ್ಟಿಕೊಟ್ಟಿದ್ದಾರೆ. 72 ಪುಟಗಳ ಕೃತಿ ಪ್ರಕಟಣೆಯ ಹಕ್ಕುಸ್ವಾಮ್ಯವನ್ನು ಮುಕ್ತವಾಗಿಡಲಾಗಿದೆ.

ಮೊದಲಿಗೆ ಅಭಿರುಚಿ ಪ್ರಕಾಶನ, ಗೌರಿ ಮಿಡಿಯಾ ಟ್ರಸ್ಟ್, ಚಿಕ್ಕನಾಯಕನಹಳ್ಳಿಯ ನಡೆ–ನುಡಿ, ತಿಪಟೂರಿನ ಜನಸ್ಪಂದನ ಟ್ರಸ್ಟ್‌, ಮಾನವ ಬಂಧುತ್ವ ವೇದಿಕೆ ಹಾಗೂ ಭಾರತೀಯ ಪರಿವರ್ತನ ಸಂಘ– ಇವುಗಳಿಗೆ ಒಟ್ಟು 9000 ಪ್ರತಿಗಳನ್ನು ಮುದ್ರಿಸುವ ಅವಕಾಶ ನೀಡಲಾಗಿತ್ತು. ಗೌರಿ ಮೀಡಿಯಾ ಟ್ರಸ್ಟ್‌ ಎರಡೇ ದಿನಗಳಲ್ಲಿ 2000 ಪ್ರತಿಗಳನ್ನು ಮಾರಾಟ ಮಾಡಿದ್ದು. ಇನ್ನೂ 3000 ಪ್ರತಿಗಳನ್ನು ಮುದ್ರಿಸುವ ಹಾದಿಯಲ್ಲಿದೆ.

‘ಆಕೃತಿ ಪುಸ್ತಕ ಇದುವರೆಗೆ ದೇವನೂರರ ಕೃತಿಯ 800 ಪ್ರತಿಗಳನ್ನು ಮಾರಾಟ ಮಾಡಿದೆ. ಇನ್ನೂ 400–500ಕ್ಕೆ ಆರ್ಡರ್ ಇದೆ. ನಿರಂತರವಾಗಿ ಪುಸ್ತಕ ಕೊಳ್ಳುವವರಲ್ಲದೆ ಆಪ್ತೇಷ್ಟರಿಗೆ ಹಂಚಲೆಂದೇ ಕೆಲವರು ಕೊಳ್ಳುತ್ತಿದ್ದಾರೆ. ದೇವನೂರರು ಕೃತಿಯ ಮುದ್ರಣವನ್ನು ರಾಜ್ಯದ ವಿವಿಧೆಡೆಗೆ ತಲುಪಿಸುವಂತೆ ಯೋಜಿಸಿರುವುದು ಆಸಕ್ತಿಕರ’ ಎಂದು ಆಕೃತಿ ಪುಸ್ತಕದ ಗುರುಪ್ರಸಾದ್ ಡಿ.ಎನ್. ಹೇಳಿದರು.

‘ದೇವನೂರರ ಸಮಕಾಲೀನ ವಸ್ತುವಿಷಯಗಳ ಪುಸ್ತಕಕ್ಕೆ ಬೇಡಿಕೆ ಬಂದಿರುವುದು ಇದೇ ಮೊದಲೇನಲ್ಲ. 2020ರ ಮಾರ್ಚ್‌ನಲ್ಲಿ ಸಿಎಎ–ಎನ್‌ಆರ್‌ಸಿ ಕುರಿತು ‘ಈಗ ಭಾರತ ಮಾತನಾಡುತ್ತಿದೆ’ ಎಂಬ ಪುಸ್ತಕವನ್ನು ಅವರು ಬರೆದಿದ್ದರು. ಮಾರ್ಚ್‌ 6ರಂದು ಪ್ರಕಟವಾಗಿದ್ದ ₹ 50 ಬೆಲೆಯ ಆ ಪುಸ್ತಕವನ್ನು ಮಾರ್ಚ್ 9ರಂದೇ ಮರುಮುದ್ರಣ ಮಾಡಲಾಗಿತ್ತು. ಒಂದು ವಾರದೊಳಗೆ ಆರು ಸಾವಿರ ಪ್ರತಿಗಳು ಮಾರಾಟವಾಗಿದ್ದವು. ಇದುವರೆಗೆ ಏನಿಲ್ಲವೆಂದರೂ ಆ ಪುಸ್ತಕದ 15 ಸಾವಿರ ಪ್ರತಿಗಳು ಮಾರಾಟವಾಗಿರಬಹುದು. ‘ಆರ್‌ಎಸ್‌ಎಸ್‌: ಆಳ ಮತ್ತು ಅಗಲ’ ಕೂಡ ಸಕಾಲಿಕ ವಸ್ತುವನ್ನು ಒಳಗೊಂಡಿರುವುದರಿಂದ ಇಷ್ಟು ಬೇಡಿಕೆ ಇದೆ’ ಎನ್ನುತ್ತಾರೆ ಅಭಿರುಚಿ ಪ್ರಕಾಶನದ ಗಣೇಶ್.

ಇದುವರೆಗೆ ತಮ್ಮ ಸಂಸ್ಥೆಗೆ ದೇವನೂರರ ಹೊಸ ಕೃತಿಯ 350 ಪ್ರತಿಗಳು ಮಾತ್ರ ಸಿಕ್ಕಿದೆ. ಇನ್ನೂ ಸಾವಿರ ಪ್ರತಿಗಳಿಗೆ ಬೇಡಿಕೆ ಇದೆ ಎಂದು ನವ ಕರ್ನಾಟಕ ಪ್ರಕಾಶನದ ರಮೇಶ ಉಡುಪ ಹೇಳಿದರು.

****

ಇಷ್ಟು ಬೇಗ ಇಷ್ಟೊಂದು ಪ್ರತಿಗಳು ಖರ್ಚಾಗುತ್ತವೆ ಎಂದು ನಿರೀಕ್ಷಿಸಿರಲಿಲ್ಲ. ಪ್ರತಿ ತಾಲ್ಲೂಕಿನಲ್ಲೂ ಒಂದೋ ಎರಡೋ ಸಾವಿರ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಬಾರದೇಕೆ? ತಿಪಟೂರು, ಚಿಕ್ಕನಾಯಕನಹಳ್ಳಿಯವರು ಅದನ್ನು ಮಾಡಿದ್ದಾರೆ. ವಿಕೇಂದ್ರೀಕೃತ ರೀತಿಯಲ್ಲಿ ಕೃತಿ ಮುದ್ರಿಸುವ ಆಲೋಚನೆ ಇದು.

–ದೇವನೂರ ಮಹಾದೇವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT