ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಪೋರ್ಟಲ್ ಹ್ಯಾಕಿಂಗ್‌: ತನಿಖೆಗೆ ಸಿಸಿಬಿ ಅಡ್ಡಿ?

*ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ * ಪಾಸ್‌ವರ್ಡ್ ಮುಚ್ಚಿಟ್ಟ ತನಿಖಾ ಸಂಸ್ಥೆ
Last Updated 27 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ವಿರುದ್ಧ ದಾಖಲಾಗಿದ್ದ ಪ್ರಕರಣ ತನಿಖೆಯಲ್ಲಿ ನಗರದ ಸಿಸಿಬಿ ಪೊಲೀಸರು ಸಿಐಡಿಯ ಸೈಬರ್‌ ಅಪರಾಧ ಪೊಲೀಸ್‌ ಠಾಣೆಯ (ಸಿಸಿಪಿಎಸ್‌) ಅಧಿಕಾರಿಗಳಿಗೆ ಅಸಹಕಾರ ತೋರಿದ್ದರು ಎಂಬ ಸಂಗತಿ ಆರೋಪಪಟ್ಟಿಯಲ್ಲೇ ಬಹಿರಂಗವಾಗಿದೆ.

ರಾಜ್ಯ ಸರ್ಕಾರದ ಇ–ಸಂಗ್ರಹಣಾ ವ್ಯವಸ್ಥೆಯ ಪೋರ್ಟಲ್‌ ಅನ್ನು ಹ್ಯಾಕ್‌ ಮಾಡಿದ್ದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಿಸಿಪಿಎಸ್‌ ಪೊಲೀಸರು ಸಲ್ಲಿರುವ ಆರೋಪಪಟ್ಟಿ ಜತೆಗೆ ಒದಗಿಸಿರುವ ದಾಖಲೆಗಳು ಸಿಸಿಬಿ ಪೊಲೀಸರ ನಡೆಯ ಕುರಿತು ಸಂಶಯಕ್ಕೆ ಕಾರಣವಾಗಿವೆ.

ಹ್ಯಾಕರ್‌ ಶ್ರೀಕೃಷ್ಣನಿಂದ ವಶಕ್ಕೆ ಪಡೆದಿದ್ದ ಹಾರ್ಡ್‌ ಡಿಸ್ಕ್‌ ಮತ್ತು ಇತರ ಉಪಕರಣಗಳಿಂದ ಸಂಗ್ರಹಿಸಿದ್ದ ಮಾಹಿತಿಯನ್ನು ಹಂಚಿಕೊಳ್ಳುವಂತೆ ಸಿಐಡಿ ಅಧಿಕಾರಿಗಳು ಸಿಸಿಬಿ ಪೊಲೀಸರಿಗೆ 2021ರ ಜನವರಿ 12ರಂದು ಪತ್ರ ಬರೆದಿದ್ದರು. ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲೂ ತಿರುಚಿರದ ಹಾಗೂ ನಮ್ಮ ತನಿಖೆಗೆ ಅಡ್ಡಿಯಾಗದ ರೀತಿಯಲ್ಲಿ ನಾವು ಕೋರಿರುವ ಮಾಹಿತಿಗಳನ್ನು ಒದಗಿಸಬೇಕು’ ಎಂದು ಸಿಐಡಿ ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದರು.

ಇ–ಸಂಗ್ರಹಣಾ ಪೋರ್ಟಲ್‌ ಹ್ಯಾಕ್‌ ಮಾಡಿ ₹ 11.55 ಕೋಟಿ ದೋಚಿದ್ದ ಪ್ರಕರಣದಲ್ಲಿ ಶ್ರೀಕಿ ಮೊದಲನೇ ಆರೋಪಿ. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಒದಗಿಸಿದ್ದ ಶ್ರೀಕಿಯ ಹಾರ್ಡ್‌ ಡಿಸ್ಕ್‌ಗಳ ಫೊರೆನ್ಸಿಕ್‌ ಇಮೇಜ್‌ ಪ್ರತಿಗಳಲ್ಲಿದ್ದ ಮಾಹಿತಿಯನ್ನು ನಿಗೂಢ ಲಿಪಿಗೆ ಪರಿವರ್ತಿಸಲಾಗಿತ್ತು (ಎನ್‌ಕ್ರಿಪ್ಟೆಡ್‌) ಮತ್ತು ತಪ್ಪಾದ ಪಾಸ್‌ವರ್ಡ್‌ಗಳನ್ನು ಒದಗಿಸಿದ್ದರು ಎಂಬುದೂ ಆರೋಪಪಟ್ಟಿಯಲ್ಲಿದೆ.

2020ರ ಜನವರಿಯಲ್ಲೇ ಸಿಐಡಿ ಅಧಿಕಾರಿಗಳು ಮಾಹಿತಿ ಕೋರಿದ್ದರು. ಅದೇ ತಿಂಗಳಿನಲ್ಲಿ ಸಿಸಿಬಿ ಅಧಿಕಾರಿಗಳು ಮಾಹಿತಿ ಒದಗಿಸಿದ್ದರು. HARDDISK_SRIKI.001 ಎಂಬ ಹೆಸರಿನ ಇ–ಕಡತದಲ್ಲಿದ್ದ ಮಾಹಿತಿಯನ್ನು ಎನ್‌ಕ್ರಿಪ್ಟ್‌ ಮಾಡಲಾಗಿತ್ತು ಮತ್ತು ಸಿಸಿಬಿ ಸಿಬ್ಬಂದಿ ಸರಿಯಾದ ಪಾಸ್‌ವರ್ಡ್‌ಗಳನ್ನೂ ಒದಗಿಸಿರಲಿಲ್ಲ. ಈ ಕಾರಣಕ್ಕಾಗಿ ಸಿಐಡಿ ಅಧಿಕಾರಿಗಳು ಪತ್ರ ಬರೆದು ಆಕ್ಷೇಪಿಸಿದ್ದರು ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

Sriki MacJ, sriki-Damaged and MacBook Silver - ಎಂಬ ಹೆಸರಿನಲ್ಲಿ ಪ್ರತ್ಯೇಕವಾಗಿ ಒದಗಿಸಿದ್ದ ಮೂರು ಹಾರ್ಡ್‌ ಡಿಸ್ಕ್‌ಗಳಲ್ಲಿನ ಮಾಹಿತಿಯನ್ನೂ ಎನ್‌ಕ್ರಿಪ್ಟ್‌ ಮಾಡಲಾಗಿತ್ತು. ಆ ಬಳಿಕವೇ ಸಿಐಡಿ ಅಧಿಕಾರಿಗಳು, ‘ಯಾವುದೇ ರೀತಿಯಲ್ಲೂ ತಿರುಚಿರದ ಮತ್ತು ತನಿಖೆಗೆ ಅಡ್ಡಿಯಾಗದ ರೀತಿಯಲ್ಲಿ ಮಾಹಿತಿ ಒದಗಿಸಬೇಕು’ ಎಂಬುದಾಗಿ ಪತ್ರ ಬರೆದಿದ್ದರು ಎಂಬ ಉಲ್ಲೇಖ ಆರೋಪಪಟ್ಟಿಯಲ್ಲಿದೆ.

ಪತ್ರಕ್ಕೆ ಪ್ರತಿಕ್ರಿಯಿಸಿದ್ದ ಸಿಸಿಬಿ ಅಧಿಕಾರಿಗಳು, ತಮ್ಮ ತಾಂತ್ರಿಕ ಕೇಂದ್ರದ ಅಧಿಕಾರಿಯೊಬ್ಬರನ್ನು ಸಿಸಿಪಿಎಸ್‌ ಠಾಣೆಗೆ ನಿಯೋಜಿಸುವುದಾಗಿ ತಿಳಿಸಿದ್ದರು. ಅವರ ನೆರವಿನಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಸೂಚಿಸಿದ್ದರು. ಮಾಹಿತಿ ಸಂಗ್ರಹ ಮತ್ತು ಶ್ರೀಕೃಷ್ಣನನ್ನು ವಶಕ್ಕೆ ಪಡೆಯುವ ವಿಚಾರದಲ್ಲಿ ಸಿಸಿಪಿಎಸ್‌ ಪೊಲೀಸರು ಸಿಸಿಬಿ ವಿರುದ್ಧ ಎರಡು ಬಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂಬ ಮಾಹಿತಿಯೂ ದಾಖಲೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT