ಭಾನುವಾರ, ಮಾರ್ಚ್ 7, 2021
32 °C
ಪ್ರತಿ ತಿಂಗಳ ಮೂರನೇ ಶನಿವಾರ ಅಧಿಕಾರಿಗಳು ಹಳ್ಳಿಗೆ: ಸಚಿವ ಆರ್‌. ಅಶೋಕ

ಜಿಲ್ಲಾಧಿಕಾರಿಗಳಿಗೆ ಗ್ರಾಮ ವಾಸ್ತವ್ಯ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇನ್ನು ಮುಂದೆ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ ನೀಡಲೇಬೇಕು. ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ’ ಎಂಬ ಕಾರ್ಯಕ್ರಮ ಫೆಬ್ರುವರಿ ಮೂರನೇ ಶನಿವಾರದಿಂದ ರಾಜ್ಯದಾದ್ಯಂತ ಜಾರಿಗೆ ಬರಲಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಸಹಾಯಕ ಆಯುಕ್ತರು, ಭೂ ದಾಖಲೆಗಳ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು ಅಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು’ ಎಂದರು.

‘ಈ ಭೇಟಿಯ ವೇಳೆ ಯಾವುದೇ ಗಣ್ಯ ವ್ಯಕ್ತಿಗಳ ಮನೆಯಲ್ಲಿ ಅಧಿಕಾರಿಗಳು ಊಟ ಸೇವಿಸಬಾರದು. ಸರ್ಕಾರಿ ಶಾಲೆ ಅಥವಾ ಅಂಗನವಾಡಿ ಕೇಂದ್ರ ಇಲ್ಲವೇ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ನಿಲಯಗಳಲ್ಲಿ ಊಟ ಮಾಡಬೇಕು. ಅಲ್ಲಿನ ಸ್ಥಿತಿಗತಿ ಕುರಿತು ಸರ್ಕಾರಕ್ಕೆ ವರದಿ ನೀಡಬೇಕು’ ಎಂದೂ ಹೇಳಿದರು.

‘ಗ್ರಾಮ ವಾಸ್ತವ್ಯ ವೇಳೆ ಫಲಾನುಭವಿಗಳಿಂದ ಅಧಿಕಾರಿಗಳು ಅರ್ಜಿಗಳನ್ನು ಸಂಗ್ರಹಿಸಬೇಕು. ಪಿಂಚಣಿ, ವಿಧವಾ ವೇತನ, ಬಿಪಿಎಲ್ ಕಾರ್ಡ್, ಆಶ್ರಯ ಮನೆ, ಸರ್ಕಾರಿ ಜಮೀನು ಒತ್ತುವರಿ, ಆಧಾರ್ ಕಾರ್ಡ್ ಪರಿಶೀಲನೆ, ಮತದಾರರ ಪಟ್ಟಿ, ಅತಿವೃಷ್ಟಿ, ಅನಾವೃಷ್ಟಿ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದೂ ಸೂಚಿಸಿದರು.

‘ಪಿಂಚಣಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ಪಡೆಯುವವರು ದಾಖಲೆಗಳನ್ನು ಮಾಡಿಸಿಕೊಳ್ಳಲು ಒಂದರಿಂದ ಮತ್ತೊಂದು ಇಲಾಖೆಗೆ ಅಲೆಯಬೇಕು. ಅಧಿಕಾರಿಗಳು ಮನೆ ಬಾಗಿಲಿಗೆ ಬರುವುದರಿಂದ ಈ ಸಮಸ್ಯೆ ಇನ್ನು ಮುಂದೆ ನಿವಾರಣೆ ಆಗಲಿದೆ. ನಾನೂ ಕೂಡ ಹಳ್ಳಿಗಳಿಗೆ ಹೋಗುತ್ತೇನೆ. ಅಲ್ಲಿನ ಜನರ ಸಂಕಷ್ಟಗಳನ್ನು ಆಲಿಸಿ, ಪರಿಹರಿಸುತ್ತೇನೆ ಎಂದರು.

ಸರ್ವೆಯರ್‌ಗಳ ನೇಮಕ: ‘ಸರ್ಕಾರಿ ಭೂಮಿ ಒತ್ತುವರಿ ಜಾಗದಲ್ಲಿ ತಂತಿ ಬೇಲಿ ನಿರ್ಮಿಸಲಾಗುವುದು. ಅಲ್ಲದೆ, ಪರವಾನಗಿ ಹೊಂದಿದ 2,074 ಸರ್ವೆಯರ್‌ಗಳನ್ನು ಭರ್ತಿ ಮಾಡಿಕೊಳ್ಳಲು ಆದೇಶ ಹೊರಡಿಸಲಾಗಿದೆ’ ಎಂದೂ ಸಚಿವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು