ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಪರ್ಸಂಟೇಜ್‌ ಸದ್ದು: ಸಲೀಂ ಉಚ್ಚಾಟನೆ; ಉಗ್ರಪ್ಪಗೆ ಕಾಂಗ್ರೆಸ್ ನೋಟಿಸ್‌

Last Updated 14 ಅಕ್ಟೋಬರ್ 2021, 6:42 IST
ಅಕ್ಷರ ಗಾತ್ರ

ಬೆಂಗಳೂರು: ‘ನೀರಾವರಿ ಇಲಾಖೆಯಲ್ಲಿ ಶೇ 6ರಿಂದ 8ರಷ್ಟಿದ್ದ ‘ಪರ್ಸಂಟೇಜ್‌’ ಡಿ.ಕೆ. ಶಿವಕುಮಾರ್ ಸಚಿವರಾಗಿದ್ದ ಅವಧಿಯಲ್ಲಿ ಶೇ 10ರಿಂದ 12ಕ್ಕೆ ಏರಿದ್ದು, ಅಡ್ಜಸ್ಟ್‌ಮೆಂಟ್‌ ಡಿಕೆದ್ದೂ ಇದೆ’ ಎಂದು ಕಾಂಗ್ರೆಸ್‌ನ ಮಾಧ್ಯಮ ಸಮನ್ವಯಕಾರ ಎಂ.ಎ. ಸಲೀಂ, ಮತ್ತೊಬ್ಬ ಮುಖಂಡ ವಿ.ಎಸ್. ಉಗ್ರಪ್ಪ ಜೊತೆ ಆಡಿದ ಮಾತುಕತೆಯ ತುಣುಕು ರಾಜ್ಯ ರಾಜಕೀಯದಲ್ಲಿ ದೊಡ್ಡ ಸದ್ದು ಮಾಡಿದೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಗೂ ಮೊದಲು ವೇದಿಕೆಯಲ್ಲಿದ್ದ ಸಲೀಂ ಮತ್ತು ಉಗ್ರಪ್ಪ ಮೆಲುದನಿಯಲ್ಲಿ ಆಡಿಕೊಂಡ ಮಾತುಕತೆಯನ್ನು ಸುದ್ದಿವಾಹಿನಿಗಳ ಕ್ಯಾಮೆರಾಗಳು ದಾಖಲಿಸಿಕೊಂಡಿದ್ದವು. ಸಂಭಾಷಣೆಯ ವಿಡಿಯೊ ತುಣುಕು ಬುಧವಾರ ಬಿತ್ತರಗೊಂಡಿತು. ಈ ಬೆನ್ನಲ್ಲೇ, ಆರೋಪ –ಸಮರ್ಥನೆಗಳು ಶುರುವಾಗಿವೆ. ‘ಪರ್ಸೆಂಟೇಜ್‌’ ವಿಷಯ ರಾಜಕೀಯ ಪಕ್ಷಗಳ ನಾಯಕರ ಮಧ್ಯೆ ಕೆಸರೆರಚಾಟಕ್ಕೆ ಕಾರಣವಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೀಗೆ ಅನೇಕರು ಸಲೀಂ ಮತ್ತು ಉಗ್ರಪ್ಪ ನಡುವಿನ ಸಂಭಾಷಣೆಗೆ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಬಗ್ಗೆ ಆಡಿದ ಮಾತಿಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್‌, ‘ಮಾಧ್ಯಮಗಳಲ್ಲಿ ತೋರಿಸುತ್ತಿರುವ ಸಂಭಾಷಣೆಗೂ ನನಗೂ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲ. ಆದರೆ, ಈ ಮಾತುಕತೆಯಿಂದ ಪಕ್ಷಕ್ಕೆ ಖಂಡಿತ ಮುಜುಗರ ಆಗಿದೆ. ನಾನು ಯಾವುದೇ ಪರ್ಸಂಟೇಜ್ ವಿಚಾರದಲ್ಲಿ ಭಾಗಿಯಾಗಿಲ್ಲ. ಪಕ್ಷದ ಶಿಸ್ತು ಸಮಿತಿ ಯಾವ ತೀರ್ಮಾನ ತೆಗೆದುಕೊಳ್ಳುತ್ತೊ ಅದಕ್ಕೆ ಬದ್ಧ’ ಎಂದಿದ್ದಾರೆ.

ಸಲೀಂ ಅವರನ್ನು ಕೆ. ರಹಮಾನ್‌ ಖಾನ್‌ ನೇತೃತ್ವದ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷದ ಅವಧಿಗೆ ಉಚ್ಚಾಟಿಸಿದೆ. ಅಶಿಸ್ತಿನ ನಡವಳಿಕೆ ತೋರಿಸಿದ್ದೀರೆಂದು ಉಗ್ರಪ್ಪ ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಿರುವ ಸಮಿತಿ, ಮೂರು ದಿನಗಳ ಒಳಗೆ ಉತ್ತರಿಸುವಂತೆ ಸೂಚಿಸಿದೆ.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಉಗ್ರಪ್ಪ, ‘ನಾನು ಪತ್ರಿಕಾಗೋಷ್ಠಿಗೆ ಬಂದಾಗ ಸಲೀಂ ನನ್ನ ಕಿವಿಯಲ್ಲಿ, ನೀರಾವರಿ ಇಲಾಖೆಯ ಹಗರಣ ವಿಚಾರವಾಗಿ ನಮ್ಮ ಪಕ್ಷದ ನಾಯಕರ ವಿರುದ್ಧ ಗೂಬೆ ಕೂರಿಸಲು ಬಿಜೆಪಿಯವರು ಈ ರೀತಿ ಆರೋಪ ಮಾಡಿದ್ದಾರೆ ಎಂದರು. ನಾನು ಅದನ್ನು ಅಲ್ಲಿಗೆ ನಿಲ್ಲಿಸಿ ಪತ್ರಿಕಾಗೋಷ್ಠಿ ನಡೆಸಿದೆ. ಆದರೆ, ಮಾಧ್ಯಮಗಳು ಅದನ್ನು ಬೇರೆ ರೀತಿ ಬಿಂಬಿಸುತ್ತಿವೆ’ ಎಂದರು.

‘ಕಮಿಷನ್, ಭ್ರಷ್ಟಾಚಾರದಿಂದ ಕಾಂಗ್ರೆಸ್‌ ದೂರ. ಅದರಲ್ಲೂ ಪಕ್ಷದ ಅಧ್ಯಕ್ಷರು ಇನ್ನೂ ದೂರ. ಅವರು ಅಧಿಕಾರದಲ್ಲಿದ್ದಾಗ ಪರ್ಸೆಂಟೇಜ್ ಪಡೆಯುವ ಸಂಸ್ಕೃತಿ ಬೆಳೆಸಿಲ್ಲ. ಹೀಗಾಗಿ, ನಮ್ಮ ಮಾತನ್ನು ವೈಭವೀಕರಿಸಿ ಬಿಂಬಿಸುವ ಕೆಲಸ ಮಾಧ್ಯಮ ಮೌಲ್ಯಗಳಿಗೆ ಸಮಂಜಸವಲ್ಲ’ ಎಂದರು.

ಕಲೆಕ್ಷನ್ ಗಿರಾಕಿ–ಸಲೀಂ: ಅವ್ನ ತಕ್ಕಡಿ ಏಳುತ್ತಿಲ್ಲ–ಉಗ್ರಪ್ಪ

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಆರಂಭಕ್ಕೆ ಮುನ್ನ ಉಗ್ರಪ್ಪ ಅವರ ಬಳಿ ಬಂದು ಕುಳಿತು ಸಲೀಂ ಮಾತನಾಡಿದ್ದು, ಅದಕ್ಕೆ ಉಗ್ರಪ್ಪ ಪ‍್ರತಿಕ್ರಿಯಿಸಿದ್ದು ಇಲ್ಲಿದೆ.

ಸಲೀಂ – ಏನಾಯಿತು ಸಾರ್‌... 6ರಿಂದ 8 ಪರ್ಸೆಂಟ್‌ ಇತ್ತು. 10ರಿಂದ 12 ಪರ್ಸೆಂಟ್‌ ಮಾಡಿದ್ರು. ಅಡ್ಜಸ್ಟ್‌ಮೆಂಟ್‌ ಡಿಕೆದ್ದೂ ಇದೆ..

ಸಲೀಂ– ಜಾಸ್ತಿ ಉಪ್ಪಾರ್, ಜಿ. ಶಂಕರ್, ಹನುಮಂತಪ್ಪ. ಹನುಮಂತಪ್ಪ ಬಳ್ಳಾರಿಯವನು ಗೊತ್ತಾ ಸರ್‌... ಹನುಮಂತಪ್ಪ ಹೊಸಪೇಟೆ. ಇವನು ಉಪ್ಪಾರ್‌, ಬೆಂಗಳೂರು. ಜಿ. ಶಂಕರ್ ಉಡುಪಿ.

ಉಗ್ರಪ್ಪ: ಉಪ್ಪಾರ್‌ ಬಿಜಾಪುರ್

ಸಲೀಂ: ಬಿಜಾಪುರ್‌.. ಮತ್ತೆ ಅವನ ಮನೆ ಎಸ್‌.ಎಂ. ಕೃಷ್ಣ ಮನೆ ಎದುರುಗಡೆ

ಉಗ್ರಪ್ಪ: ಇದು ಇದೆಯಲ್ಲ...

ಸಲೀಂ: ದೊಡ್ಡ ಸ್ಕ್ಯಾಂಡಲ್‌... ಕೆದಕುತ್ತಾ ಹೋದರೆ ಇವರದ್ದೂ ಬರುತ್ತೆ.

ಉಗ್ರಪ್ಪ: ನಾನು ನಿಮಗೆ ಹೇಳಲಾ. ಕಣ್ಣು ಮುಚ್ಚಿ...

ಸಲೀಂ: ನಮ್ಮ ಮುಳಗುಂದ 50ರಿಂದ 100 ಕೋಟಿ ಮಾಡಿದ್ದಾನೆ. ಮುಳಗುಂದ... ಅವನು 50, 100 ಮಾಡಿದ್ದಾನೆ ಅಂದ್ರೆ ಇವನ ಹತ್ರ ಎಷ್ಟು ಇರಬಹುದು. ಡಿಕೆ ಹತ್ರ. ಲೆಕ್ಕ ಹಾಕಿ.‌ ಅವನು ಬರೀ ಕಲೆಕ್ಷನ್ ಗಿರಾಕಿ.

ಉಗ್ರಪ್ಪ– ನಿಮಗೆಲ್ಲ ಗೊತ್ತಿಲ್ಲ... ನಾವೆಲ್ಲಾ ಪಟ್ಟುಹಿಡಿದು ಅಧ್ಯಕ್ಷನನ್ನಾಗಿ ಮಾಡಿಸಿದ್ದು ಅವನಿಗೆ. ನಮ್‌ ದೌರ್ಭಾಗ್ಯ. ಅವನ ತಕ್ಕಡಿ ಏಳುತ್ತಿಲ್ಲ... ಇವೆಲ್ಲ ಕಾರಣಗಳಿಂದ.

ಸಲೀಂ– ಇಲ್ಲಾ ಸಾರ್‌. ಇಲ್ಲ ಸಾರ್ ಭಾರಿ ಆಯಿತು. ಮತ್ತೆ ನೀವು ನೋಡ್ತೀರಲ್ಲ. ಮಾತನಾಡುವಾಗ ತೊದಲಿಸುತ್ತಾರೆ. ಏನೊ ಲೋ ಬಿಪಿನೊ.. ನೋಡಿ.. ಕುಡುಕರೂ..

ಉಗ್ರಪ್ಪ: ಅದನ್ನೇ ಹೇಳಿದ್ದು ಈಗ.

ಸಲೀಂ; ಸಾರ್‌... ಅರ್ಥ ಆಗಿಲ್ಲ ಅವರಿಗೆ... ಡ್ರಿಂಕ್ಸ್‌ ಮಾಡಿದ್ದಾರಾ ಅಂತಾರೆ. ಡ್ರಿಕ್ಸ್‌ ಮಾಡಲಿಲ್ಲ. ಅದು ಆ್ಯಕ್ಚುವಲಿ.. (ಇಬ್ಬರೂ ನಗು)

ಸಲೀಂ (ನಗುತ್ತಲೇ): ಮಾತಾಡುವ ಶೈಲಿ... (ಮತ್ತೆ ಇಬ್ಬರೂ ಜೋರು ನಗು)

ಸಲೀಂ– ಲೋ ಬಿಪಿ... ಎಮೋಷನ್‌ನಲಿ ಹೋಗ್ತಾರೆ... ಇನ್ನೊಂದು, ಬಾಡಿ ಲಾಂಗ್ವೇಜ್‌ ಇವರದ್ದು ಹೆಂಗಿದೆ ಸಾರ್‌... ಸಿದ್ದರಾಮಯ್ಯನವರದ್ದು. ಖಡಕ್ ಅಂದ್ರೆ ಖಡಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT