ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಸ್ಯತ್ವ ನೋಂದಣಿಗೆ ನಿರಾಸಕ್ತಿ: ಡಿಕೆಶಿ ಅಸಮಾಧಾನ

Last Updated 12 ಮಾರ್ಚ್ 2022, 15:38 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಸದಸ್ಯತ್ವ ನೋಂದಣಿಗೆ ಯುವ ಕಾಂಗ್ರೆಸ್‌ ಮುಖಂಡರು ನಿರಾಸಕ್ತಿ ತೋರುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘2,000 ಸದಸ್ಯರನ್ನು ನೋಂದಾಯಿಸಿದ್ದೇವೆ ಎಂದು ಹೇಳುವುದು ನಿಮ್ಮ ಸಾಮರ್ಥ್ಯಕ್ಕೆ ನಾಚಿಕೆ ತರುವಂತಹದ್ದು’ ಎಂದರು.

ನಗರದಲ್ಲಿ ಶನಿವಾರ ನಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ‘ನೀವು ಯುವ ಕಾಂಗ್ರೆಸ್‌ ಅಧ್ಯಕ್ಷರಾಗಲು 80ಸಾವಿರದಿಂದ ಒಂದು ಲಕ್ಷದವರೆಗೆ ಸದಸ್ಯತ್ವ ನೋಂದಣಿ ಮಾಡಿಸುತ್ತೀರಿ. ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಅದರ ಅರ್ಧದಷ್ಟನ್ನಾದರೂ ಮಾಡಲು ಸಾಧ್ಯವಿಲ್ಲವೆ’ ಎಂದು ಪ್ರಶ್ನಿಸಿದರು.

‘ಇದು ನೀವು ಪಕ್ಷಕ್ಕಾಗಿ ಮಾಡುವ ಕೆಲಸ. ಬರಿ ಮಾತನಾಡಿದರೆ ನಾನು ಒಪ್ಪುವುದಿಲ್ಲ. ಸದಸ್ಯತ್ವ ನೋಂದಣಿ ಮೂಲಕ ನಿಮ್ಮ ನಾಯಕತ್ವ ಗುಣವನ್ನು ಸಾಬೀತುಪಡಿಸಿ. ಕಾಂಗ್ರೆಸ್‌ ಪಕ್ಷಕ್ಕೆ 50ಸಾವಿರ ಸದಸ್ಯರನ್ನು ನೋಂದಣಿ ಮಾಡಿಸುವ ಯುವ ಕಾಂಗ್ರೆಸ್‌ ಸಮಿತಿಯ ಸದಸ್ಯರೊಬ್ಬರಿಗೆ ಕೆಪಿಸಿಸಿ ಕಾರ್ಯದರ್ಶಿ ಹುದ್ದೆ ನೀಡಲಾಗುವುದು’ ಎಂದು ಪ್ರಕಟಿಸಿದರು.

ಸದಸ್ಯತ್ವ ನೋಂದಣಿಯ ಜತೆಯಲ್ಲೇ ಮತದಾರರ ನೋಂದಣಿಯಲ್ಲೂ ಪಕ್ಷದ ಸದಸ್ಯರು ಸಕ್ರಿಯರಾಗಬೇಕು. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳನ್ನು ಸಂಪರ್ಕಿಸಿ ಸರ್ಕಾರದ ಪರಿಹಾರಕ್ಕೆ ಅರ್ಜಿ ಹಾಕಿಸಬೇಕು. ಈ ವಿಚಾರದಲ್ಲಿ ಸಕ್ರಿಯರಾಗದೇ ಇದ್ದರೆ ಕ್ರಮ ನಿಶ್ಚಿತ. ಪಕ್ಷದ ಸಂಘಟನೆಯಲ್ಲಿ ಚುನಾಯಿತ ಪ್ರತಿನಿಧಿಗಳಿದ್ದರೂ ಕಿತ್ತು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಿರುದ್ಯೋಗಿಗಳ ಪರ ಹೋರಾಟ: ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಿದೆ. ಅದರ ವಿರುದ್ಧೇ ನಿರುದ್ಯೋಗಿಗಳನ್ನೇ ಸಂಘಟಿಸಿ ಹೋರಾಟ ನಡೆಸಬೇಕು. ಇನ್ನು ಒಂದು ತಿಂಗಳ ಕಾಲ ಎಲ್ಲ ಕ್ಷೇತ್ರಗಳಲ್ಲೂ ನಿರುದ್ಯೋಗಿಗಳ ಮಾಹಿತಿಯನ್ನು ಸಂಗ್ರಹಿಸಿ, ದಾಖಲಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಶಿವಕುಮಾರ್‌ ಸೂಚಿಸಿದರು.

‘ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ 5,000 ನಿರುದ್ಯೋಗಿಗಳನ್ನು ಸಂಘಟಿಸಿ ಹೋರಾಟ ನಡೆಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು. 200 ಕ್ಷೇತ್ರಗಳಲ್ಲಿ ಹೋರಾಟ ಮಾಡಿದರೂ 10 ಲಕ್ಷ ಮಂದಿ ನಿರುದ್ಯೋಗಿಗಳನ್ನು ತಲುಪಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್‌ ಪಕ್ಷ ಅಂತ್ಯವಾಯಿತು ಎಂದು ಕೆಲವರು ಮಾತನಾಡಬಹುದು. ಅದಕ್ಕೆ ಯಾರೂ ಎದೆಗುಂದಬೇಡಿ. ಜನರಿಗೆ ವಾಸ್ತವದ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಶಾಸಕಿ ಸೌಮ್ಯಾ ರೆಡ್ಡಿ, ರಾಷ್ಟ್ರೀಯ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌, ರಾಜ್ಯ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮೊಹಮ್ಮದ್ ನಲಪ್ಪಾಡ್ ಹ್ಯಾರಿಸ್‌, ಮುಖಂಡ ನಿಕೇತ್‌ ರಾಜ್‌ ಮೌರ್ಯ ಇದ್ದರು.

ಮಾತನಾಡುವವರ ನಾಲಗೆ ಹಿಡಿಯಲು ಸಾಧ್ಯವೆ?

‘ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಿ ಎಂದು ಪಕ್ಷದ ಕೇಂದ್ರ ವರಿಷ್ಠರು ಹೇಳಿರುವುದಕ್ಕೆ ನಾವು ಜೆಡಿಎಸ್‌ ಜತೆ ಸೇರಿ ಸರ್ಕಾರ ಮಾಡಿದೆವು. ಅಪ್ಪ ಪ್ರಧಾನಿಯಾಗಲು, ಮಗ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ ಬೆಂಬಲ ನೀಡಿತ್ತು. ಅದನ್ನು ಈಗ ನಾಟಕ ಎನ್ನುತ್ತಿದ್ದಾರೆ. ಹೊಡೆಯಲು ಬಂದವರ ಕೈ ಹಿಡಿಯಬಹುದು. ಆದರೆ, ಮಾತನಾಡುವವರ ನಾಲಗೆ ಹಿಡಿಯಲು ಸಾಧ್ಯವೆ’ ಎಂದು ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT