ಮಂಗಳವಾರ, ಏಪ್ರಿಲ್ 20, 2021
28 °C
ಜನರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ

ರೈತರನ್ನು ದೇಶದ್ರೋಹಿಗಳು ಎನ್ನಬೇಡಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಸ್ವಾರ್ಥಕ್ಕಾಗಿ ಹೋರಾಡುತ್ತಿಲ್ಲ. ದೇಶದ ಎಲ್ಲರಿಗಾಗಿ ಹೋರಾಡುತ್ತಿರುವ ರೈತರನ್ನು ದೇಶದ್ರೋಹಿಗಳು ಎಂಬುದಾಗಿ ಕರೆಯಬೇಡಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದ ಜನರಿಗೆ ಬರೆದಿರುವ ಸುದೀರ್ಘವಾದ ಪತ್ರವೊಂದನ್ನು ಭಾನುವಾರ ಹಂಚಿಕೊಂಡಿರುವ ಅವರು, ‘ಕೇಂದ್ರ ಸರ್ಕಾರ ತಂದಿರುವ ಮೂರು ಕಾಯ್ದೆಗಳು ಕೃಷಿ ಮತ್ತು ಕೃಷಿಕರ ನಾಶಕ್ಕೆ ದಾರಿಯಾಗಲಿವೆ. ಅವುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಬೀದಿಯಲ್ಲಿರುವ ರೈತರಿಗೆ ದೇಶದ್ರೋಹಿಗಳ ಪಟ್ಟ ಕಟ್ಟಿ, ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸ ಕಾಯ್ದೆಗಳಿಂದ ರೈತರು ತಮ್ಮ ಉತ್ಪನ್ನಗಳನ್ನು ಒಳ್ಳೆಯ ದರಕ್ಕೆ ಮಾರುವ ಹಕ್ಕು ಕಳೆದುಕೊಳ್ಳುತ್ತಾರೆ. ಬೆಂಬಲ ಬೆಲೆ ವ್ಯವಸ್ಥೆ ಪೂರ್ಣವಾಗಿ ನಾಶವಾಗಲಿದೆ. ಕೃಷಿ ಕ್ಷೇತ್ರದ ಮೇಲೆ ಬಂಡವಾಳಶಾಹಿಗಳ ಹಿಡಿತ ಹೆಚ್ಚಾಗಲಿದೆ. ಕೃಷಿಕರಿಗೆ ನೀಡುವ ನೆರವಿನ ಮೊತ್ತ ಕ್ಷೀಣಿಸಲಿದೆ. ಆದರೆ, ಈ ಕಾಯ್ದೆಗಳು ಕೃಷಿಗೆ ಪೂರಕವಾಗಿವೆ ಎಂದು ಕೇಂದ್ರ ಸರ್ಕಾರ ರಾಷ್ಟ್ರಪತಿಯವರ ಮೂಲಕವೂ ಸುಳ್ಳು ಹೇಳಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಹಲವು ದಿನಗಳಿಂದ ರೈತರು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ. ಜನವರಿ 26ರಂದು ಕಿಡಿಗೇಡಿಗಳು ದೆಹಲಿಯ ಕೆಂಪು ಕೋಟೆ ಬಳಿ ಬಾವುಟ ಹಾರಿಸಿದ್ದಾರೆ. ಅಲ್ಲಿಗೆ ಹೋದವರು ಬೆರಳೆಣಿಕೆ ಮಂದಿ. ತಪ್ಪೆಸಗಿದವರ ವಿರುದ್ಧ ಕ್ರಮ ಜರುಗಿಸಲಿ. ಆದರೆ, ನ್ಯಾಯ ಕೇಳಿ ಬೀದಿಯಲ್ಲಿ ನಿಂತಿರುವ ಹತ್ತು ಲಕ್ಷ ರೈತರನ್ನು ದೇಶದ್ರೋಹಿಗಳು ಎಬ ಆರೋಪ ಮಾಡಿ ಅವಮಾನಿಸಬಾರದು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು