ಶನಿವಾರ, ಜೂನ್ 25, 2022
25 °C

ವಿಜಯೇಂದ್ರಗೆ ಟಿಕೆಟ್ ತಪ್ಪಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ- ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಬಿಜೆಪಿ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ಟಿಕೆಟ್ ತಪ್ಪಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಭವಿಷ್ಯದಲ್ಲಿ ಅವರಿಗೆ ಹೈಕಮಾಂಡ್  ದೊಡ್ಡ ಅವಕಾಶ ಕಲ್ಪಿಸಿಕೊಡುವ ಭರವಸೆ ನನಗಿದೆ' ಎಂದು ಶಾಸಕ ಬಿ.ಎಸ್. ಯಡಿಯೂರಪ್ಪ ಹೇಳಿದರು. 

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, 'ಈ ಬಾರಿಯ ಚುನಾವಣೆಯಲ್ಲಿ ಪಕ್ಷ ವಿಜಯೇಂದ್ರ ಅವರಿಗೆ ನಾನಾ ಕಾರಣಗಳಿಗಾಗಿ ಟಿಕೆಟ್ ನೀಡದೇ ಇರಬಹುದು. ಆದರೆ, ಸೂಕ್ತ ಸಂದರ್ಭದಲ್ಲಿ ಅವಕಾಶ ದೊರಕಿಸಿಕೊಡಲಿದೆ.‌ ಸಾಮರ್ಥ್ಯ ಮತ್ತು ಪಕ್ಷದಲ್ಲಿ ನಿಷ್ಠೆ ಇರುವವರನ್ನು ಪಕ್ಷ‌ ಯಾವತ್ತೂ ಕೈಬಿಡಲ್ಲ' ಎಂದರು. 

'2023ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನುವುದೇ ನಮ್ಮ‌ಗುರಿ. ಆ ನಿಟ್ಟಿನಲ್ಲಿ  ಏನೆಲ್ಲ ಪ್ರಯತ್ನಗಳನ್ನು ಮಾಡಬೇಕೋ ಅದನ್ನು ಈಗಿನಿಂದಲೇ ಮಾಡುತ್ತೇವೆ. ಮುಂದಿನ‌ ಚುನಾವಣೆಯಲ್ಲಿ ಬಿಜೆಪಿ‌ ಮತ್ತೆ ಅಧಿಕಾರ ಹಿಡಿಯುವ ವಿಶ್ವಾಸ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ  ಬರುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು. 

 ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಲು ಕಾರಣ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿದ ಅವರು, 'ಅದೆಲ್ಲ ಮಾಧ್ಯಮಗಳು ಸೃಷ್ಟಿಸಿದ ಊಹಾಪೋಹ. ಇದಕ್ಕೂ ಅವರಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ' ಎಂದರು.

ಮುಂದಿನ‌ ವಿಧಾಸಭೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಸಿಗುತ್ತಾ ಎಂಬ ಪ್ರಶ್ನೆಗೆ, 'ಈಗಲೇ ಅದರ ಬಗ್ಗೆ ಯಾಕೆ ಚರ್ಚೆ. ಸಮಯ‌ ಬಂದಾಗ ಅದರ ಬಗ್ಗೆ ನೋಡೋಣ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು