ಮಂಗಳವಾರ, ಮಾರ್ಚ್ 21, 2023
29 °C
ಉತ್ಸವಕ್ಕಿದೆ ದುಡ್ಡು – ಸರ್ಕಾರಕ್ಕೆ ನಾಚಿಕೆಯಾಗಬೇಕು: ಹೈಕೋರ್ಟ್‌ ತರಾಟೆ

ಸಮವಸ್ತ್ರಕ್ಕೆ ಕಾಸಿಲ್ಲವೇ? ಹೈಕೋರ್ಟ್‌ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸರ್ಕಾರಿ ಶಾಲೆಗಳ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಮತ್ತು ಶೂ ಒದಗಿಸಲು ಆಗದ ರಾಜ್ಯ ಸರ್ಕಾರಕ್ಕೆ ಉತ್ಸವಗಳನ್ನು ನಡೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಮನಸ್ಸಿದೆ. ಆದರೆ, ಮಕ್ಕಳ ಹಕ್ಕು, ಶಿಕ್ಷಣಗಳ ವಿಚಾರದಲ್ಲಿ ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿರ್ವಹಿಸಲು ಮಾತ್ರ ಆಗುತ್ತಿಲ್ಲ. ಅಧಿಕಾರಿಗಳಿಗಂತೂ ಮಾನ ಮರ್ಯಾದೆ, ಆತ್ಮಸಾಕ್ಷಿ ಯಾವುದೂ ಇಲ್ಲವಾಗಿದೆ. ಸರ್ಕಾರಿ ಶಾಲೆಗಳ ಮಕ್ಕಳ ಬಗ್ಗೆ ಅವರಲ್ಲಿ ಕಿಂಚಿತ್‌ ಮಾನವೀಯತೆಯೂ ಉಳಿದಿಲ್ಲ. ಈಗಲಾದರೂ ಕಣ್ಣು ತೆರೆದು ಸಮವಸ್ತ್ರ ಒದಗಿಸಲಿ...’ 

‘ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲುಚೀಲಗಳನ್ನು ನೀಡಬೇಕು ಎಂದು 2018ರ ಆಗಸ್ಟ್‌ನಲ್ಲಿ ಹೈಕೋರ್ಟ್ ಹೊರಡಿಸಿರುವ ಆದೇಶ ಪಾಲನೆಯಾಗಿಲ್ಲ’ ಎಂದು ಆರೋಪಿಸಿ ಕೊಪ್ಪಳ ಜಿಲ್ಲೆಯ ಮಾಸ್ಟರ್ ಮಂಜುನಾಥ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಕಿಡಿಕಾರಿದ ಪರಿಯಿದು.

ವಿಚಾರಣೆ ವೇಳೆ ಸರ್ಕಾರ ಸಲ್ಲಿಸಿದ ಪ್ರಮಾಣ ಪತ್ರದಲ್ಲಿನ ಲೋಪವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ‘ಸರಿಯಾದ ರೀತಿಯಲ್ಲಿ ಸಮವಸ್ತ್ರವನ್ನು ಯಾಕೆ ನೀಡಿಲ್ಲ? ಸಮವಸ್ತ್ರ, ಶೂ, ಕಾಲುಚೀಲ ವಿತರಣೆ ಹೊಣೆ ಹೊತ್ತಿರುವ ಅಧಿಕಾರಿ ಯಾರು ಎಂಬುದನ್ನು ತಿಳಿಸಿ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪನಿಗದಿ ಮಾಡಲಾಗುತ್ತದೆ’ ಎಂದು ಸರ್ಕಾರಿ ವಕೀಲರಿಗೆ ತಾಕೀತು ಮಾಡಿದರು.

‘ಎರಡು ಜೊತೆ ಸಮವಸ್ತ್ರಕ್ಕೆ ಹಣ ಕಳುಹಿಸಿರುವುದಾಗಿ ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ. ಆದರೆ, ದಾಖಲೆಗಳನ್ನು ನೋಡಿದರೆ ಒಂದು ಜೊತೆಗೆ ಮಾತ್ರವೇ ಹಣ ಒದಗಿಸಿರುವುದು ಕಾಣುತ್ತಿದೆ. ಕೊಟ್ಟಿರುವ ಸಮವಸ್ತ್ರದಲ್ಲೂ ಮೇಲಿನದು ಇದ್ದರೆ ಕೆಳಗಿನದು ಇರುವುದಿಲ್ಲ. ಒಂದು ಕಾಲುಚೀಲ ಮತ್ತು ಒಂದು ಶೂಗಷ್ಟೇ ಹಣ ಕಳುಹಿಸಿರಬೇಕು! ಫಲಾನುಭವಿ ಮಕ್ಕಳಿಗೆ ದಕ್ಕಬೇಕಾದ ಸಮವಸ್ತ್ರ, ಶೂ-ಕಾಲುಚೀಲಗಳು ದಕ್ಕಿವೆಯೇ ಎಂಬುದು ಆ ದೇವರಿಗೆ ಮಾತ್ರವೇ ಗೊತ್ತು’ ಎಂದು
ವ್ಯಂಗ್ಯವಾಡಿದರು.

‘ಮಕ್ಕಳ ಶೈಕ್ಷಣಿಕ ಬದುಕನ್ನು ಹೀಗೆ ಮಾಡಿದರೆ ಏನು ಕತೆ? ಸಮವಸ್ತ್ರ ಕೊಡುವುದಾದರೆ ಸೂಕ್ತ ರೀತಿಯಲ್ಲಿ ಕೊಡಿ. ಇಲ್ಲವಾದರೆ ಬೇಡವೇ ಬೇಡ. ಪೂರ್ತಿಯಾಗಿ ಸಾಯಿಸಿಬಿಡಿ. ಅರ್ಧಂಬರ್ಧ ಸಾಯಿಸಬೇಡಿ. ಮಕ್ಕಳ ಮನಸ್ಸು ಒಮ್ಮೆ ಹಾಳಾದರೆ ಜೀವನಪೂರ್ತಿ ಆ ನೋವು ಅವರನ್ನು ಕಾಡುವುದಿಲ್ಲವೇ? ಅಧಿಕಾರಿಗಳಿಗೆ ಸರ್ಕಾರಿ ಶಾಲಾ ಮಕ್ಕಳ ಬಗ್ಗೆ ಮಾನವೀಯತೆಯೇ ಇಲ್ಲ’ ಎಂದು ವಾಗ್ದಾಳಿ
ನಡೆಸಿದರು.

‘ಇತ್ತೀಚೆಗೆ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಕಲಿಯುವ ಒಟ್ಟು 520 ಮಕ್ಕಳಿಗೆ ಒಂದೇ ಒಂದು ಶೌಚಾಲಯ ಇತ್ತು. ಆ ಶೌಚಾಲಯದಲ್ಲೂ ಗಿಡಗಂಟಿಗಳು ಬೆಳೆದಿದ್ದವು. ಮಕ್ಕಳು ಅದನ್ನು ಬಳಸಲು ಹೆದರುತ್ತಿದ್ದರು, ಹಾವು ಬರುತ್ತದೆ ಎನ್ನುತ್ತಿದ್ದರು. ಕಡೆಗೆ ನಾವೇ ಅದನ್ನು ಸ್ವಚ್ಛಗೊಳಿಸಿದೆವು. ಇದು ದುರದೃಷ್ಟಕರ. ಇಂತಹ ಪರಿಸ್ಥಿತಿಯಿದ್ದರೆ ಸರ್ಕಾರಕ್ಕೆ ನಾಚಿಕೆ ಆಗುವುದಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಅಂತಿಮವಾಗಿ ಎರಡು ವಾರಗಳ ಕಾಲಾವಕಾಶ ನೀಡಲಾಗುವುದು. ಅಷ್ಟರಲ್ಲಿ ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಯ ವಿರುದ್ಧ ನ್ಯಾಯಾಂಗ ನಿಂದನೆಯ ಆರೋಪ ನಿಗದಿ ಮಾಡಲಾಗುತ್ತದೆ. ಅಂದು ಅವರು ನ್ಯಾಯಾಲಯದ ಮುಂದೆ ಹಾಜರಿರಬೇಕು’ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದರು.

ಖಾತೆಗೆ ಅಗತ್ಯ ಹಣ ವರ್ಗಾವಣೆ

ವಿಚಾರಣೆ ವೇಳೆ ಕರ್ನಾಟಕ ಸಮಗ್ರ ಶಿಕ್ಷಣ ಯೋಜನೆಯ ನಿರ್ದೇಶಕಿ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು.

‘ರಾಜ್ಯ ಸರ್ಕಾರ 2021ರ ಆಗಸ್ಟ್‌ 28ರಂದು ಹೊರಡಿಸಿರುವ ಆದೇಶದ ಅನುಸಾರ 2021–2022ರ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಒಂದು ಜೊತೆ ಸಮವಸ್ತ್ರ ನೀಡಲಾಗಿದೆ. ಇದರಲ್ಲಿ ಎರಡನೇ ಜೊತೆ ಸಮವಸ್ತ್ರ ಖರೀದಿಸಲು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಂಬಂಧಿಸಿದ ಎಸ್‌ಡಿಎಂಸಿಯ ಖಾತೆಗೆ ಹಣ ವರ್ಗಾಯಿಸಲಾಗಿದೆ. 2019–20ನೇ ಸಾಲಿನಲ್ಲಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲುಚೀಲಗಳನ್ನು ಖರೀದಿಸಲು ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿಯ ಜಂಟಿ ಖಾತೆಗೆ ಅಗತ್ಯ ಹಣ ವರ್ಗಾಯಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು