ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಬಲ್ ಎಂಜಿನ್‘ನಿಂದ ರಾಜ್ಯಕ್ಕೆ ದುಸ್ಥಿತಿ: ಎಚ್.ಡಿ. ಕುಮಾರಸ್ವಾಮಿ

ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕೆ
Last Updated 18 ಜನವರಿ 2021, 13:06 IST
ಅಕ್ಷರ ಗಾತ್ರ

ಬೆಂಗಳೂರು: ‘ಡಬಲ್‌ ಎಂಜಿನ್ ಸರ್ಕಾರಗಳಿಂದ ರಾಜ್ಯಕ್ಕೆ ದುಸ್ಥಿತಿ ಬಂದಿದೆ. ಪ್ರವಾಹ, ಕೋವಿಡ್‌ ಅವಧಿಯಲ್ಲಿ ಏನಾಗಿದೆ ಎಂಬುದು ಜನರಿಗೆ ಗೊತ್ತಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

‘ರಾಜ್ಯದ ಅಭಿವೃದ್ಧಿಗೆ ಡಬಲ್‌ ಎಂಜಿನ್‌ ಸರ್ಕಾರವಿದೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಗೆ ಸೋಮವಾರ ಜೆಡಿಎಸ್‌ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಸಂಪೂರ್ಣ ಸ್ವತಂತ್ರವಾದ ಸರ್ಕಾರವನ್ನು ರಚಿಸುವುದು ಜೆಡಿಎಸ್‌ ಗುರಿ. ‘ಪಂಚರತ್ನ’ ಸೂತ್ರದ ಆಧಾರದಲ್ಲಿ ಎಲ್ಲ ಕಡೆಯಲ್ಲೂ ಪಕ್ಷ ಸಂಘಟನೆ ಮಾಡುತ್ತೇನೆ’ ಎಂದರು.

ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ ತಮ್ಮ ಸರ್ಕಾರದ ಯೋಜನೆಯ ಪ್ರತಿರೂಪ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌ ಸ್ಥಾಪನೆಗೆ ತಮ್ಮ ಸರ್ಕಾರ ಕೈಗೊಂಡಿದ್ದ ಕ್ರಮಗಳ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ. ‘ಕಿಸಾನ್‌ ಸಮ್ಮಾನ್‌’ ಯೋಜನೆ ನೆರೆಯ ತೆಲಂಗಾಣ ಸರ್ಕಾರದ್ದು. ಬೇರೆಯವರ ಕಾರ್ಯಕ್ರಮಗಳನ್ನು ಕದ್ದು, ಮೆಚ್ಚುಗೆ ಪಡೆಯಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ದೂರಿದರು.

ಎಲ್ಲ ಕುಟುಂಬಗಳಿಗೂ ಸ್ವಂತ ವಸತಿ, 12ನೇ ತರಗತಿವರೆಗೆ ಸಂಪೂರ್ಣ ಉಚಿತ ಶಿಕ್ಷಣ, ಉತ್ತಮವಾದ ಆರೋಗ್ಯ ಸೇವೆ, ರೈತರನ್ನು ಸಾಲ ಮುಕ್ತರನ್ನಾಗಿಸುವುದು ಮತ್ತು ರಾಜ್ಯದ ಎಲ್ಲ ಯುವಕರಿಗೂ ಉದ್ಯೋಗ ಒದಗಿಸುವ ಐದು ಸೂತ್ರಗಳನ್ನು ಮುಂದಿಟ್ಟುಕೊಂಡು ಜೆಡಿಎಸ್‌ ಕೆಲಸ ಮಾಡಲಿದೆ. ರಾಜ್ಯದ ಜನರು ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡುವ ವಿಶ್ವಾಸವಿದೆ ಎಂದು ಹೇಳಿದರು.

ಆತ್ಮಹತ್ಯೆಯತ್ತ ಬಿಜೆಪಿ: 2008ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ತಾನೇ ಮಾಡಿದ್ದ ತಪ್ಪುಗಳಿಂದ ಅಧಿಕಾರ ಕಳೆದುಕೊಂಡಿತ್ತು. ಈಗಲೂ ಬಿಜೆಪಿ ಸರ್ಕಾರ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಆತ್ಮಹತ್ಯೆಯತ್ತ ಸಾಗುತ್ತಿದೆ ಎಂದರು.

ಜೆಡಿಎಸ್‌ ತೊರೆಯಲು ಸಿದ್ಧವಾಗಿರುವವರ ಕುರಿತು ಚಿಂತಿಸುವುದಿಲ್ಲ. ಲಕ್ಷಾಂತರ ಮಂದಿ ನಿಷ್ಠಾವಂತ ಕಾರ್ಯಕರ್ತರ ಮೇಲೆ ಪಕ್ಷ ನಿಂತಿದೆ. ಅವರ ಬೆಂಬಲದಲ್ಲೇ ಪಕ್ಷ ಸಂಘಟನೆ ಮಾಡಲಾಗುವುದು. ಹಿಂದೆಯೂ ಹಲವರು ಪಕ್ಷ ತೊರೆದಿದ್ದರು. ಜೆಡಿಎಸ್‌ನಿಂದ ಹೊರಹೋದ ಬಳಿಕ ಅವರ ಸ್ಥಿತಿ ಏನಾಗಿತ್ತು ಎಂಬುದು ತಿಳಿದಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಮತ್ತು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ಉದಾಹರಣೆ ನೀಡಿದರು.

ಇಬ್ರಾಹಿಂ ಶೀಘ್ರದಲ್ಲಿ ಜೆಡಿಎಸ್‌ಗೆ: ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ ಅವರು ರಾಜ್ಯ ಪ್ರವಾಸದಲ್ಲಿದ್ದಾರೆ. ಅವರು ಶೀಘ್ರದಲ್ಲಿ ಜೆಡಿಎಸ್‌ ಸೇರಲಿದ್ದಾರೆ. ಪಕ್ಷಕ್ಕೆ ಬಂದ ಬಳಿಕ ಸೂಕ್ತ ಹುದ್ದೆ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿ.ಎಂ. ಲಿಂಗಪ್ಪ ಕೈವಾಡ

‘ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನು ಕಬಳಿಸಿದ್ದೇನೆಂದು ಎಸ್‌.ಆರ್. ಹಿರೇಮಠ ಮತ್ತು ಕೆಲವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅದು 1985ರಲ್ಲಿ ಖರೀದಿ ಮಾಡಿದ್ದ ಜಮೀನು. ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಆಗಲೇ ಮುಖ್ಯಮಂತ್ರಿಗೆ ದೂರು ಕೊಡಿಸಿದ್ದರು. ಈಗಲೂ ಆರೋಪ ಮಾಡುತ್ತಿರುವವರ ಹಿಂದೆ ಅವರೇ ಇದ್ದಾರೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT