ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ಸರ್ಕಾರದಿಂದ ವಿಳಂಬ ದ್ರೋಹ: ಸಿದ್ದರಾಮಯ್ಯ

Last Updated 1 ಮಾರ್ಚ್ 2022, 7:29 IST
ಅಕ್ಷರ ಗಾತ್ರ

ಬೆಂಗಳೂರು:ಮೇಕೆದಾಟು ಯೋಜನೆಗೆ ಅನುಮತಿ ಪಡೆಯುವ ವಿಚಾರದಲ್ಲಿ ಬಿಜೆಪಿ ಸರ್ಕಾರ ವಿಳಂಬ ದ್ರೋಹ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪಕ್ಷ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅವರು ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಗಳವಾರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿತ್ತು. ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ಪರಿಷ್ಕೃತ ಡಿಪಿಆರ್‌ ಸಲ್ಲಿಸಿದ್ದರು. ಬಿಜೆಪಿ ಸರ್ಕಾರ ಬಂದು ಮೂರು ವರ್ಷ ಸಮೀಪಿಸುತ್ತಿದೆ. ಯೋಜನೆ ಅನುಷ್ಠಾನಕ್ಕೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದರು.

ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲೂ ಬಿಜೆಪಿಯೇ ಆಡಳಿತ ನಡೆಸುತ್ತಿದೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪರಿಸರ ಇಲಾಖೆಯ ಅನುಮತಿ ಪಡೆಯಲು ಸಾಧ್ಯವಾಗಿಲ್ಲ. ಇದರಿಂದಾಗಿ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ. ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ವಿಳಂಬ ದ್ರೋಹ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ಬಿಜೆಪಿಯವರು ಡಬಲ್ ಎಂಜಿನ್‌ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಸರ್ಕಾರದಲ್ಲಿ ಸಿಂಗಲ್‌ ಎಂಜಿನ್‌ ಕೂಡ ಕೆಲಸ ಮಾಡುತ್ತಿಲ್ಲ. ಎಂಜಿನ್‌ ನಿಂತಲ್ಲೇ ನಿಂತಿದೆ. ಹೀಗಾಗಿ ಮೇಕೆದಾಟು ಯೋಜನೆ ಆರಂಭಕ್ಕೆ ಅವಕಾಶ ಸಿಕ್ಕಿಲ್ಲ ಎಂದರು.

ಬಿಜೆಪಿ ಸರ್ಕಾರ ಜನರ ಪರವಾಗಿ ಕೆಲಸ ಮಾಡುವುದಿಲ್ಲ. ಬೆಂಗಳೂರಿನ ಜನರ ಸಮಸ್ಯೆ ಪರಿಹರಿಸುವ ಆಸಕ್ತಿ ಸರ್ಕಾರಕ್ಕೆ ಇಲ್ಲ. ಮುಂದೆ ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಮೇಕೆದಾಟು ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಗುರುವಾರ ಈ ಪಾದಯಾತ್ರೆ ಸಮಾರೋಪಗೊಳ್ಳಲಿದೆ. ವಿಜಯನಗರ ಮತ್ತು ಸುತ್ತಮುತ್ತಲಿನ ಜನರು ಮೆಟ್ರೊ ರೈಲು ಬಳಸಿಕೊಂಡೇ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಕರೆ ನೀಡಿದರು.

ಸಂಸದ ಡಿ.ಕೆ. ಸುರೇಶ್‌, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಪ್ರಿಯಾ ಕೃಷ್ಣ, ಮುಖಂಡರಾದ ಎಂ. ನಾರಾಯಣಸ್ವಾಮಿ, ಕುಸುಮಾ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT