ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲ್ಯಾಟ್‌ನಲ್ಲಿ ಡ್ರಗ್ಸ್ ಪಾರ್ಟಿ; ಉದ್ಯಮಿ ಸೇರಿ ಇಬ್ಬರ ಬಂಧನ

Last Updated 3 ಅಕ್ಟೋಬರ್ 2020, 18:06 IST
ಅಕ್ಷರ ಗಾತ್ರ

ಬೆಂಗಳೂರು: ಡಾಲರ್ಸ್ ಕಾಲೊನಿಯಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದಡಿ ಉದ್ಯಮಿ ಸೇರಿ ಇಬ್ಬರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಉದ್ಯಮಿ ವರುಣ್ (36) ಮತ್ತು ವಿನೋದ್ (23) ಬಂಧಿತರು. ಶುಕ್ರವಾರ ರಾತ್ರಿ ಡಾಲರ್ಸ್ ಕಾಲೊನಿ ರಸ್ತೆ ಬದಿಯಲ್ಲಿ ಆರೋಪಿ ವರುಣ್, ಕಾರು ನಿಲ್ಲಿಸಿಕೊಂಡು ನಿಂತಿದ್ದ. ಆತನ ಬಗ್ಗೆ ಅನುಮಾನಗೊಂಡಿದ್ದ ಗಸ್ತಿನಲ್ಲಿದ್ದ ಸಿಬ್ಬಂದಿ, ಕಾರು ಪರಿಶೀಲನೆ ನಡೆಸಿದಾಗ ಗಾಂಜಾ ಸಿಕ್ಕಿತ್ತು’ ಎಂದು ಪೊಲೀಸರು ಹೇಳಿದರು.

‘ಫ್ಲ್ಯಾಟ್‌ನಲ್ಲಿ ಪಾರ್ಟಿ ಆಯೋಜಿಸಿದ್ದ ವರುಣ್, ಗಾಂಜಾ ತರಲು ಹೊರಗೆ ಬಂದಿದ್ದಾಗಲೇ ನಮ್ಮ ಕೈಗೆ ಸಿಕ್ಕಿಬಿದ್ದಿದ್ದ. ಆತ ನೀಡಿದ್ದ ಮಾಹಿತಿ ಆಧರಿಸಿ ಫ್ಲ್ಯಾಟ್‌ ಮೇಲೂ ದಾಳಿ ಮಾಡಲಾಯಿತು. ಅಲ್ಲಿಯೇ ವಿನೋದ್‌ನನ್ನು ಬಂಧಿಸಿ, 150 ಗ್ರಾಂ ಗಾಂಜಾ ಜಪ್ತಿ ಮಾಡಲಾಯಿತು’ ಎಂದೂ ತಿಳಿಸಿದರು.

‘ಆರೋಪಿಗಳು, ಈ ಹಿಂದೆ ಹೋಟೆಲ್ ಹಾಗೂ ಪಬ್‌ಗಳಿಗೆ ಹೋಗಿ ಬರುತ್ತಿದ್ದರು. ಅಲ್ಲಿಯೇ ಡ್ರಗ್ಸ್ ಸೇವಿಸುತ್ತಿದ್ದರೆಂಬ ಮಾಹಿತಿ ಇದೆ. ಲಾಕ್‌ಡೌನ್‌ನಿಂದಾಗಿ ಪಬ್‌ ಹಾಗೂ ಹೋಟೆಲ್‌ಗಳು ಬಂದ್ ಆಗಿದ್ದರಿಂದ ಮನೆಯಲ್ಲೇ ಆರೋಪಿಗಳು ಪಾರ್ಟಿ ಮಾಡಲಾರಂಭಿಸಿದ್ದರು’ ಎಂದೂ ಪೊಲೀಸರು ಹೇಳಿದರು.

ಆಫ್ರಿಕಾದ ‘ಡಾನ್’ ವಿಚಾರಣೆ

ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿರುವ ನಗರದ ಸಿಸಿಬಿ ಪೊಲೀಸರು, ಆಫ್ರಿಕಾ ಪ್ರಜೆ ಉಡುವಾಕಾ ಡಾನ್ ಎಂಬಾತನನ್ನು ಶನಿವಾರ ವಿಚಾರಣೆಗೆ ಒಳಪಡಿಸಿದರು. ಕೆಲ ತಿಂಗಳ ಹಿಂದಷ್ಟೇ ಡ್ರಗ್ಸ್ ಪ್ರಕರಣದಲ್ಲಿ ಉಡುವಾಕಾನನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರಬಂದಿದ್ದ ಆತ, ಕೆಲ ಪೆಡ್ಲರ್‌ಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಅನುಮಾನ ಸಿಸಿಬಿಗೆ ಬಂದಿತ್ತು. ಅದೇ ಕಾರಣಕ್ಕೆ ಆತನನ್ನು ಚಾಮರಾಜಪೇಟೆಯಲ್ಲಿರುವ ಕಚೇರಿಗೆ ಕರೆಸಿ ಅಧಿಕಾರಿಗಳು ವಿಚಾರಣೆ ನಡೆಸಿದರು.

‘ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿರುವ ಪೆಡ್ಲರ್ ಲೋಮ್ ಪೆಪ್ಪರ್ ಸೇರಿದಂತೆ ಹಲವರ ಜೊತೆ ಉಡುವಾಕಾ ಒಡನಾಟವಿಟ್ಟುಕೊಂಡಿದ್ದಕ್ಕೆ ಪುರಾವೆಗಳು ಸಿಕ್ಕಿದ್ದವು. ಹೀಗಾಗಿ, ಆತನ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಲಾಗಿದೆ. ಆತನ ಹೇಳಿಕೆ ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT