ಗುರುವಾರ , ಸೆಪ್ಟೆಂಬರ್ 16, 2021
25 °C
ಬೀದರ್‌ನಲ್ಲಿ ಎನ್‌ಸಿಬಿ ಕಾರ್ಯಾಚರಣೆ; ಆರೋಪಿ ಮನೆಯಲ್ಲಿ ₹ 62 ಲಕ್ಷ ನಗದು ಪತ್ತೆ

ಅಕ್ರಮ ಉತ್ಪಾದನೆ: ₹ 2 ಕೋಟಿ ಮೌಲ್ಯದ ‘ಡ್ರಗ್ಸ್’ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೀದರ್‌ ಹೊರವಲಯದ ಕೊಳಾರ ಕೈಗಾರಿಕೆ ಪ್ರದೇಶದಲ್ಲಿರುವ ‘ಇಂದು ಡ್ರಗ್ಸ್’ ಕಂಪನಿಯ ಕಾರ್ಖಾನೆ ಮೇಲೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ಅಧಿಕಾರಿಗಳು ದಾಳಿ ಮಾಡಿದ್ದು, ₹ 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

'ಬೀದರ್‌ ವಿಳಾಸ ನೀಡಿ ಕಂಪನಿ ನೋಂದಣಿ ಆಗಿತ್ತು. ಆಲ್ಫ್ರಝೋಲಮ್ ಮಾದಕ ವಸ್ತುವನ್ನು ಅಕ್ರಮವಾಗಿ ಉತ್ಪಾದಿಸಿ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 91 ಕೆ.ಜಿ 500 ಗ್ರಾಂ ಆಲ್ಫ್ರಝೋಲಮ್ ಹಾಗೂ ₹ 62 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಎನ್‌ಸಿಬಿ ಬೆಂಗಳೂರು ವಲಯದ ನಿರ್ದೇಶಕ ಅಮಿತ್ ಗಾವಟೆ ‘ಪ್ರಜಾವಾಣಿ’ಗೆ ತಿಳಿಸಿದರು.

’ತೆಲಂಗಾಣದ ಎಸ್‌.ಭಾಸ್ಕರ್ ಹಾಗೂ ರಾಸಾಯನಿಕ ತಜ್ಞ ವೈ.ವಿ. ರೆಡ್ಡಿ ಸೇರಿಕೊಂಡು ಕಂಪನಿ ನಡೆಸುತ್ತಿದ್ದರು. ಅವರ ಕೃತ್ಯಕ್ಕೆ ಎಸ್‌. ಮೆನನ್, ಅಮೃತ್ ಹಾಗೂ ಎನ್‌.ವಿ. ರೆಡ್ಡಿ ಸಹಕಾರ ನೀಡಿದ್ದರು. ಇದೀಗ
ಐವರನ್ನು ಬಂಧಿಸಲಾಗಿದೆ’ ಎಂದೂ ಹೇಳಿದರು.

‘ಹಲವು ವರ್ಷಗಳಿಂದ ಕಾರ್ಖಾನೆ ಕಾರ್ಯನಿರ್ವಹಿಸುತ್ತಿತ್ತು. ಸರ್ಕಾರ ನಿಷೇಧ ಮಾಡಿರುವ ಆಲ್ಫ್ರಝೋಲಮ್ ತಯಾರಿಸಿ, ಮಿನಿ ಟ್ರಕ್‌ನಲ್ಲಿ ತೆಲಂಗಾಣ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಿಗೆ ಕಳುಹಿಸಲಾಗುತ್ತಿತ್ತು. ಇದರಿಂದ ಆರೋಪಿಗಳು, ಕೋಟ್ಯಂತರ ರೂಪಾಯಿ ಸಂಪಾದಿಸಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಗಳು, ಬ್ಯಾರಲ್‌ಗಳಲ್ಲಿ ಆಲ್ಫ್ರಝೋಲಮ್ ತುಂಬಿಟ್ಟಿದ್ದರು’ ಎಂದೂ ಗಾವಟೆ ವಿವರಿಸಿದರು.

ಮನೆ ಮೇಲೂ ದಾಳಿ: ‘ಕಂಪನಿ ಪಾಲುದಾರರಲ್ಲಿ ಒಬ್ಬನಾದ ಎನ್‌.ವಿ. ರೆಡ್ಡಿಯ ಹೈದರಾಬಾದ್‌ನಲ್ಲಿರುವ ಮನೆ ಮೇಲೂ ದಾಳಿ ಮಾಡಲಾಗಿದೆ. ಆತನ ಮನೆಯಲ್ಲೇ ನಗದು ಸಿಕ್ಕಿದೆ. ಡ್ರಗ್‌ ಜಾಲದಲ್ಲಿ ಹಲವರು ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದೂ ಎನ್‌ಸಿಬಿ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು