ಭಾನುವಾರ, ಫೆಬ್ರವರಿ 28, 2021
21 °C
ದಯಾನಂದ ಸಾಗರ್‌ ವಿಶ್ವವಿದ್ಯಾಲಯ

1,030 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು:‘ನೂತನ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೆ ಅವಶ್ಯವಿರುವ ಆಡಳಿತಾತ್ಮಕ ಸುಧಾರಣೆಗಳು ಮತ್ತು ತಿದ್ದುಪಡಿಗಳನ್ನು ತರುವತ್ತ ರಾಜ್ಯ ಸರ್ಕಾರದ ಗಮನ  ಕೇಂದ್ರೀಕರಿಸಿದೆ. ರಾಜ್ಯದಲ್ಲಿ ಎನ್‌ಇಪಿ ಅನುಷ್ಠಾನವು ಯುವ ಪೀಳಿಗೆಗೆ ವಿಫುಲ ಅವಕಾಶಗಳನ್ನು ಪೂರೈಸಲಿದೆ’ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ದಯಾನಂದ ಸಾಗರ್ ವಿಶ್ವವಿದ್ಯಾಲಯವು (ಡಿಎಸ್‌ಯು) ಶುಕ್ರವಾರ ಹಮ್ಮಿಕೊಂಡಿದ್ದ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ಗ್ರಾಸ್‌ರೂಟ್ ರೀಸರ್ಚ್‌ ಆ್ಯಂಡ್ ಅಡ್ವೊಕೆಸಿ ಮೂಮೆಂಟ್‌ನ (ಗ್ರಾಮ್) ಸ್ಥಾಪಕ ಅಧ್ಯಕ್ಷ ಆರ್.ಬಾಲಸುಬ್ರಮಣಿಯಂ,‘ಕೋವಿಡ್ ಬಿಕ್ಕಟ್ಟು ನಮ್ಮ ಜೀವನಗಳಿಗೆ ಅಡೆತಡೆಗಳನ್ನು ಉಂಟುಮಾಡಿದೆ. ದಶಕಗಳಿಂದ ಪಡೆದುಕೊಂಡಿದ್ದ ಕೌಶಲ, ಜ್ಞಾನ ಹಾಗೂ ಅನುಭವಗಳು ಇದರ ಮುಂದೆ ಅಪ್ರಸ್ತುತವಾಗಿವೆ. ಕೇವಲ ನೂತನ ಕೌಶಲಗಳನ್ನು ಬೇಡುವ ಜಗತ್ತಿಗೆ ಸಿದ್ಧರಾಗುವ ಪ್ರಶ್ನೆ ವಿದ್ಯಾರ್ಥಿಗಳಿಗೆ ಎದುರು ಇದೆ. ಸಂಪೂರ್ಣ ನೂತನ ಮನಸ್ಥಿತಿಯ ಅಗತ್ಯವಿದೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ದಯಾನಂದ ಸಾಗರ್ ವಿಶ್ವವಿದ್ಯಾಲಯದ ಕುಲಪತಿ ಡಿ.ಪ್ರೇಮಚಂದ್ರ ಸಾಗರ್,‘ ತಂತ್ರಜ್ಞಾನದಿಂದ ಚಾಲಿತವಾದ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆ. ಭವಿಷ್ಯದ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಸತತ ಕಲಿಕೆಯತ್ತ ಗಮನಹರಿಸುವುದು ಮುಖ್ಯ’ ಎಂದರು.

ಕುಲಾಧಿಪತಿ ಡಿ.ಹೇಮಚಂದ್ರ ಸಾಗರ್, ‘ನಮ್ಮ ಸಂಪೂರ್ಣ ಜೀವನ ಒಂದು ಕಲಿಕಾ ಪ್ರಕ್ರಿಯೆ. ಎಲ್ಲರಿಂದಲೂ ನಾವು ಕಲಿಯಬೇಕು. ವಿಶ್ವವಿದ್ಯಾಲಯದಿಂದ ನಾವು ಪಡೆಯುವ ಶಿಕ್ಷಣ ಅತ್ಯಂತ ಸಣ್ಣ ಪ್ರಮಾಣದ್ದು.ಇದು, ನಮ್ಮ ವೃತ್ತಿಜೀವನಕ್ಕೆ ಅಡಿಪಾಯ’ ಎಂದರು.

ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಒಟ್ಟು 1,030 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ತತ್ವಶಾಸ್ತ್ರದ ಡಾಕ್ಟರೇಟ್, ಕಲಾ ವಿಭಾಗಗಳು, ಅನ್ವಯಿಕ ವಿಜ್ಞಾನಗಳು, ವಾಣಿಜ್ಯ ಮತ್ತು ನಿರ್ವಹಣೆ, ಎಂಜಿನಿಯರಿಂಗ್, ಆರೋಗ್ಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಿತು.

ಈ ಬಾರಿ ವಿವಿಧ ವಿಭಾಗಗಳಿಂದ ವಿದ್ಯಾರ್ಥಿಗಳು ಒಟ್ಟು 47 ರ್‍ಯಾಂಕ್ ಪಡೆದಿದ್ದು, ಈ ಪೈಕಿ 17 ಮಂದಿ ಚಿನ್ನದ ಪದಕ ಹಾಗೂ 30 ವಿದ್ಯಾರ್ಥಿಗಳು ಬೆಳ್ಳಿ ಪದಕ ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು