ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ದುಬೈ ಎಕ್ಸ್‌ಪೋ’ಗೆ ರಾಜ್ಯದ 21 ಮಂದಿ ದಂಡು!

ಇಬ್ಬರು ಸಚಿವರು, 4 ಐಎಎಸ್‌, ‌ಐಪಿಎಸ್‌ ಸೇರಿ 21 ಮಂದಿಯ ನಿಯೋಗ
Last Updated 12 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಉನ್ನತ ಶಿಕ್ಷಣ, ಐಟಿ ಬಿಟಿ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ನಾಲ್ವರು ಐಎಎಸ್‌ ಮತ್ತು ಒಬ್ಬರು ಐಪಿಎಸ್‌ ಸೇರಿ ಒಟ್ಟು 21 ಮಂದಿಯ ದಂಡು ಸರ್ಕಾರದ ವೆಚ್ಚದಲ್ಲಿ ಇದೇ 15 ರಿಂದ ಒಂದು ವಾರ ‘ದುಬೈ ಎಕ್ಸ್‌ಪೋ – 2020’ಕ್ಕೆ ಹೊರಟಿರುವುದು ಚರ್ಚೆಗೆ ಗ್ರಾಸವಾಗಿದೆ.

ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಮಾರುಕಟ್ಟೆ ವಿಸ್ತರಿಸಿ ರಫ್ತು ಉತ್ತೇಜಿಸುವ ಉದ್ದೇಶದಿಂದ ಸಚಿವರು, ಅಧಿಕಾರಿಗಳ ತಂಡ ಈ ಎಕ್ಸ್‌ಪೋದಲ್ಲಿ ಪಾಲ್ಗೊಳ್ಳಲಿದೆ. 200ಕ್ಕೂ ಹೆಚ್ಚು ದೇಶಗಳು ಭಾಗವಹಿಸುವ ಈ ಎಕ್ಸ್‌ಪೋ ಇದೇ ಅ. 1 ರಂದು ಆರಂಭಗೊಂಡಿದ್ದು, 2022ರ ಮಾರ್ಚ್‌ 31ರವರೆಗೆ ನಡೆಯಲಿದೆ. ರಾಜ್ಯದ ತಂಡ ಇದೇ 15ರಿಂದ 21 ರವರೆಗೆ ಭಾಗವಹಿಸಲಿದೆ.

‘ಪ್ರಯಾಣದ ಅವಧಿಯೂ ಸೇರಿ ಅ. 16 ರಿಂದ 20ರವರೆಗೆ ನಾನು ದುಬೈ ತೆರಳಲಿದ್ದೇನೆ. ಈ ದಿನಗಳಲ್ಲಿ ನನ್ನ ಆಪ್ತ ಶಾಖೆಯ ಸಿಬ್ಬಂದಿಯೂ ಜೊತೆಗೆ ಇರಬೇಕಾದ ಅವಶ್ಯಕತೆ ಇರುವುದರಿಂದ ಅನುಮತಿ ನೀಡಬೇಕು‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುರುಗೇಶ್‌ ನಿರಾಣಿ ಮನವಿ ಮಾಡಿದ್ದರು. ಆದರೆ, ರಾಜ್ಯದಲ್ಲಿ ಅತಿವೃಷ್ಟಿ, ಕೋವಿಡ್‌ ಮೂರನೇ ಅಲೆ ಆತಂಕ, ಆರ್ಥಿಕ ಸಂಕಷ್ಟದ ಮಧ್ಯೆ, ದೊಡ್ಡ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ಕರೆದುಕೊಂಡು ಹೋಗುವುದಕ್ಕೆ ಮುಖ್ಯಮಂತ್ರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಗೊತ್ತಾಗಿದೆ. ಸಂಖ್ಯೆಯನ್ನು ಕಡಿಮೆ ಮಾಡುವಂತೆಯೂ ಅವರು ಸಲಹೆ ನೀಡಿದ್ದರು’ ಎಂದು ಕೈಗಾರಿಕೆ ಇಲಾಖೆ ಮೂಲಗಳು ಹೇಳಿವೆ.

ಮುರುಗೇಶ್‌ ನಿರಾಣಿ ಅವರ ನೇತೃತ್ವದ ತಂಡದಲ್ಲಿ ಅವರ ಆಪ್ತ ಕಾರ್ಯದರ್ಶಿ ಪ್ರಕಾಶ್‌ ಎಂ. ಸಬರದ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ತಾಂತ್ರಿಕ ಕೋಶದ ನಿರ್ದೇಶಕ ಆರ್. ರಮೇಶ್‌, ವಿಶ್ವೇಶ್ವರಯ್ಯ ವಾಣಿಜ್ಯ ಉತ್ತೇಜನಾ ಕೇಂದ್ರದ (ವಿಟಿಪಿಸಿ) ವ್ಯವಸ್ಥಾಪಕ ನಿರ್ದೇಶಕ (ರಫ್ತು) ಎಸ್‌.ಆರ್‌ ಸತೀಶ್‌, ಇನ್ವೆಸ್ಟ್‌ ಕರ್ನಾಟಕ ಫೋರಂನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ.ಕೆ. ಶಿವಕುಮಾರ್‌, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಎಚ್‌.ಎಂ. ರೇವಣ್ಣ ಗೌಡ, ವಿಟಿಪಿಪಿ ಜಂಟಿ ನಿರ್ದೇಶಕ ಪ್ರವೀಣ್‌ ರಾಮದುರ್ಗ, ವಿಟಿಪಿಪಿ ಉಪ ನಿರ್ದೇಶಕ ಸಂತೋಷ್‌ ಮಲಜಿ, ನಿರಾಣಿ ಅವರ ವಿಶೇಷ ಅಧಿಕಾರಿ ಭೀಮಪ್ಪ ಪರಗೊಂಡ ಅಜೂರ್‌, ವಿಟಿಪಿಸಿ ಸಹಾಯಕ ನಿರ್ದೇಶಕ ಜೈದೀಪ್‌, ಸಚಿವರ ಆಪ್ತ ಸಹಾಯಕ ಪ್ರಭು ಎಂ. ನ್ಯಾಮತಿ, ಮೂಲಸೌಲಭ್ಯ ವಿಭಾಗದ ವ್ಯವಸ್ಥಾಪಕಿ ರಕ್ಷಾ ಶಾರದಾ, ‘ಉದ್ಯೋಗ ಮಿತ್ರ’ದ ಮಾಧ್ಯಮ ಸಮನ್ವಯಾಧಿಕಾರಿ ಅನಿಲ್‌ಕುಮಾರ್‌ ಇದ್ದಾರೆ.

ನಿಗಮದಿಂದ ವೆಚ್ಚ: ದುಬೈ ಪ್ರವಾಸಕ್ಕೆ ಅನುಮತಿ ಕೋರಿ ಸರ್ಕಾರದ ಕಾರ್ಯದರ್ಶಿಗೆ (ಎಂಎಸ್‌ಇ ಮತ್ತು ಮೈನ್ಸ್‌) ಪತ್ರ ಬರೆದಿರುವ ರೂಪಾ ಮೌದ್ಗಿಲ್‌, ‘ದುಬೈ ಎಕ್ಸ್‌ಪೋದಲ್ಲಿ ಹಲವು ದೇಶಗಳು ಭಾಗವಹಿಸುತ್ತಿವೆ. ಇಲ್ಲಿ ರಾಜ್ಯದ ಕೈಮಗ್ಗ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ಸಿಗುವ ನಿರೀಕ್ಷೆ ಇದೆ. ಇದರಿಂದ ನಿಗಮಕ್ಕೂ ಲಾಭ ಆಗಲಿದೆ. ಈ ಎಕ್ಸ್‌ಪೋದ ವೆಚ್ಚಕ್ಕೆ ವಿಶ್ವೇಶ್ವರಯ್ಯ ವಾಣಿಜ್ಯ ಉತ್ತೇಜನಾ ಕೇಂದ್ರ (ವಿಟಿಪಿಸಿ) ಈಗಾಗಲೇ ₹ 5 ಲಕ್ಷ ಬಿಡುಗಡೆ ಮಾಡಿದೆ. ದುಬೈಯಲ್ಲಿ ಉಚಿತವಾಗಿ ಸ್ಟಾಲ್‌ ಸಿಗಲಿದೆ.ದುಬೈಗೆ ತೆರಳಲು ಬಗ್ಗೆ ಸೆ. 27ರಂದು ನಡೆದ ನಿಗಮದ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ. ಪ್ರಯಾಣ ಸೇರಿದಂತೆ ತಗಲುವ ವೆಚ್ಚವನ್ನು ವಿಟಿಪಿಸಿ ಮತ್ತು ನಿಗಮದಿಂದ ಬರಿಸಿಕೊಳ್ಳಲಾಗುವುದು’ ಎಂದಿದ್ದಾರೆ.

ತಂಡದಲ್ಲಿರುವ ಪ್ರಮುಖರು

ದುಬೈಗೆ ತೆರಳುವ ತಂಡದಲ್ಲಿ ಐಎಎಸ್‌ ಅಧಿಕಾರಿಗಳಾದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ನಿರ್ದೇಶಕಿ ಗುಂಜಾನ್‌ ಕೃಷ್ಣ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್‌. ಶಿವಶಂಕರ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್‌ ಇದ್ದಾರೆ. ಅಲ್ಲದೆ, ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ, ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌, ಅಧ್ಯಕ್ಷ ಬೇಲೂರು ರಾಘವೇಂದ್ರ ಶೆಟ್ಟಿ ಮತ್ತು ಮಾರಾಟ ಪ್ರತಿನಿಧಿ ಬಿ.ಎಸ್‌. ಪ್ರಶಾಂತ್‌ ಕೂಡಾ ಈ ತಂಡದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT