ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಕರ್ನಾಟಕ ಭವನ ನಿರ್ವಹಣೆಗೇ ₹18 ಕೋಟಿ!

Last Updated 11 ಅಕ್ಟೋಬರ್ 2022, 16:39 IST
ಅಕ್ಷರ ಗಾತ್ರ

ನವದೆಹಲಿ: ಗಣ್ಯರು, ಅತಿ ಗಣ್ಯರು ಹಾಗೂ ಕರ್ನಾಟಕದ ಅತಿಥಿಗಳಿಗೆ ಆತಿಥ್ಯ ನೀಡುವ ಇಲ್ಲಿನ ಕರ್ನಾಟಕ ಭವನದ ನಿರ್ವಹಣೆಗೆ ಕರ್ನಾಟಕ ಸರ್ಕಾರ ವಾರ್ಷಿಕ ₹18 ಕೋಟಿಯಿಂದ ₹24 ಕೋಟಿಯಷ್ಟು ವೆಚ್ಚ ಮಾಡುತ್ತಿದೆ. ಭವನಕ್ಕೆ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಿಅನಗತ್ಯವಾಗಿ ವೆಚ್ಚ ಮಾಡಲಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಭವನದಲ್ಲಿ 131 ಮಂದಿ ಕಾಯಂ ಸಿಬ್ಬಂದಿಗಳು ಹಾಗೂ 86 ಮಂದಿ ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಈ ಭವನದ ಆಡಳಿತ ನಿರ್ವಹಣೆಗೆ ಒಬ್ಬರು ಐಎಎಸ್‌ (ಸ್ಥಾನಿಕ ಆಯುಕ್ತರು) ಹಾಗೂ ಒಬ್ಬರು ಕೆಎಎಸ್‌ ಅಧಿಕಾರಿ (ಉಪ ಸ್ಥಾನಿಕ ಆಯುಕ್ತ) ಇದ್ದರೆ ಸಾಕು. ಆದರೆ, ಭವನದಲ್ಲಿ ಮೂವರು ಐಎಎಸ್‌ ಅಧಿಕಾರಿಗಳು ಹಾಗೂ ಒಬ್ಬರು ಐಪಿಎಸ್‌ ಅಧಿಕಾರಿ ಇದ್ದಾರೆ. ಭವನಕ್ಕೆ ಅನಗತ್ಯವಾಗಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನದಲ್ಲಿ ಈ ಹಿಂದೆ ಆಗ್ರಹಿಸಿದ್ದರು.

ಇತ್ತೀಚೆಗೆ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಮುನಿರಾಜು ಗೌಡ ಪಿ.ಎಂ., ‘ಭವನದಲ್ಲಿ ಕೊಠಡಿ ನೀಡಲು ಆದ್ಯತೆ ನೀಡುತ್ತಿಲ್ಲ. ಸಿಬ್ಬಂದಿ ಸೌಜನ್ಯದಿಂದ ವರ್ತಿಸುತ್ತಿಲ್ಲ’ ಎಂದು ದೂರಿದ್ದರು. ಇದಕ್ಕೆ ಲಿಖಿತ ಉತ್ತರ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಒಂದೊಮ್ಮೆ ದೂರು ದಾಖಲಾದಲ್ಲಿ ಸಿಬ್ಬಂದಿ ವಿರುದ್ಧ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದ್ದರು.

ವರ್ಗಾವಣೆಯೇ ಇಲ್ಲ:

ಕರ್ನಾಟಕ ಭವನಕ್ಕೆ ನೇಮಕಾತಿ ಹೊಂದುವವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲು ನಿಯಮಾವಳಿಗಳಲ್ಲಿ ಅವಕಾಶ ಇಲ್ಲ. ಇದು ಸಹ ನೌಕರರ ಉಡಾಫೆ ಧೋರಣೆಗೆ ಕಾರಣ ಎಂಬ ಬಗ್ಗೆ ದೂರುಗಳು ಇವೆ.

‘30ಕ್ಕೂ ಅಧಿಕ ನೌಕರರು 25 ವರ್ಷದಿಂದ ಕರ್ನಾಟಕ ಭವನದಲ್ಲೇ ಇದ್ದಾರೆ. ಅವರು ಬಲವಾಗಿ ಬೇರೂರಿದ್ದಾರೆ. ಅವರಿಗೆ ಯಾರ ಬಗ್ಗೆಯೂ ಗೌರವ ಇಲ್ಲ. ಅಲ್ಲಿನ ಸೇವೆ ದೇವರಿಗೇ ಪ್ರೀತಿ.ಈ ಕಾರಣಕ್ಕೆ ಜನಪ್ರತಿನಿಧಿಗಳು ಸಹ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲು ಹಿಂದೇಟು ಹಾಕುತ್ತಾರೆ’ ಎಂದು ಮುನಿರಾಜು ಗೌಡ ಹೇಳಿದರು.

‘ಶಾಸಕರೊಂದಿಗೂ ದರ್ಪದ ವರ್ತನೆ’

‘ಕರ್ನಾಟಕ ಭವನದಲ್ಲಿರುವ ನೌಕರರಿಗೆ ಕಾಮನ್‌ಸೆನ್ಸ್‌ ಎಂಬುದೇ ಇಲ್ಲ. ಅವರು ಶಾಸಕರೊಂದಿಗೆ ಸಹ ದರ್ಪದ ವರ್ತನೆ ತೋರುತ್ತಾರೆ’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಮುನಿರಾಜು ಗೌಡ ಪಿ.ಎಂ. ಆಕ್ರೋಶ ವ್ಯಕ್ತಪಡಿಸಿದರು.

‘ಕೆಲವು ದಿನಗಳ ಹಿಂದೆ ಕರ್ನಾಟಕ ಭವನ–1ರಲ್ಲಿ ಕೊಠಡಿ ಕಾಯ್ದಿರಿಸಿದ್ದೆ. ಕರ್ನಾಟಕ ಭವನ–1 ಕ್ಕೆ ಹೋದಾಗ ಕರ್ನಾಟಕ ಭವನ–2ರಲ್ಲಿ ಕೊಠಡಿ ನೀಡುವುದಾಗಿ ತಿಳಿಸಿದರು. ಕರ್ನಾಟಕ ಭವನ–1ರಲ್ಲಿ ಅಧಿಕಾರಿಗಳಿಗೆ ಮಾತ್ರ ಕೊಠಡಿ ನೀಡಲಾಗುತ್ತದೆ ಎಂಬ ನೆಪವನ್ನೂ ಹೇಳಿದರು. ನನಗೆ ಕೊಟ್ಟ ಕೊಠಡಿಯಲ್ಲಿ ಸಿಕ್ಕಾಪಟ್ಟೆ ತಿಗಣೆ ಕಾಟ. ಜತೆಗೆ, ಶೌಚಾಲಯ ಅತ್ಯಂತ ಕೆಟ್ಟದಾಗಿತ್ತು. ಕೊಠಡಿ ಖಾಲಿ ಮಾಡಿ ಹೊರಟಾಗ ಅಲ್ಲಿನ ವ್ಯವಸ್ಥಾಪಕರು ಕರ್ನಾಟಕ ಭವನ–3ರಲ್ಲಿ ಕೊಠಡಿ ನೀಡುವುದಾಗಿ ತಿಳಿಸಿದರು. ‌ಸಭೆಯೊಂದರಲ್ಲಿ ಭಾಗಿಯಾಗಿ ರಾತ್ರಿ 11ಕ್ಕೆ ಕರ್ನಾಟಕ ಭವನ–3ಕ್ಕೆ ಹೋದೆ. ಅಲ್ಲಿನ ಸಿಬ್ಬಂದಿ ದರ್ಪದಿಂದ ವರ್ತಿಸಿದರು. ಕ್ರಿಕೆಟ್‌ ನೋಡುತ್ತಾ ಕಾಲಹರಣ ಮಾಡಿದ ಅವರು ಸುಮಾರು ಒಂದು ಗಂಟೆ ಕಾಯಿಸಿದರು. ಬಳಿಕ ಅನ್ಯದಾರಿ ಕಾಣದೆ ಹೋಟೆಲೊಂದರಲ್ಲಿ ರೂಮ್‌ ಮಾಡಿದೆ’ ಎಂದು ಅವರು ಹೇಳಿದರು.

ಕರ್ನಾಟಕ ಭವನದ ನಿರ್ವಹಣೆ

ವರ್ಷ; ವೆಚ್ಚ (₹ಕೋಟಿಗಳಲ್ಲಿ)

2021–22; 18.23

2020–21; 18.87

2019–20; 24.09

2018–19; 22.16

2017–18; 20.4

ಕರ್ನಾಟಕ ಭವನದಲ್ಲಿರುವ ಸಿಬ್ಬಂದಿ

ಕಾಯಂ ನೌಕರರು

–; ಕರ್ನಾಟಕ ಭವನ; ನಿವಾಸಿ ಆಯುಕ್ತರ ಕಚೇರಿ

ಗ್ರೂಪ್‌–1; 01;04

ಗ್ರೂಪ್‌–ಬಿ; –;05

ಗ್ರೂಪ್‌–ಸಿ; 60; 15

ಗ್ರೂಪ್‌–ಡಿ; 44; 2

ಒಟ್ಟು; 106; 26

ಹೊರಗುತ್ತಿಗೆ ಸಿಬ್ಬಂದಿ

ಕೌಶಲ ಹೊಂದಿರುವವರು; 04

ಅರೆಕೌಶಲ; 21

ಕೌಶಲ ಇಲ್ಲದವರು; 30

ಭದ್ರತಾ ಸಿಬ್ಬಂದಿ; 15

ಚಾಲಕರು; 16

ಒಟ್ಟು; 86

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT