ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಾಂಗ್ರೆಸ್‌ ಅಧ್ಯಕ್ಷ ಆಯ್ಕೆಗೆ ಮತದಾನ: ತೀವ್ರ ಸ್ಪರ್ಧೆ

ನನ್ನ ಹಸ್ತಕ್ಷೇಪ ಇಲ್ಲ– ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ
Last Updated 10 ಜನವರಿ 2021, 19:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಗೆ ಆನ್‌ಲೈನ್‌ ಮೂಲಕ ಭಾನುವಾರದಿಂದ (ಜ.10) ಮತದಾನ ಆರಂಭಗೊಂಡಿದ್ದು, ಮಂಗಳವಾರದವರೆಗೆ ನಡೆಯಲಿದೆ. ರಾಜ್ಯದಾದ್ಯಂತ ಒಟ್ಟು 4.26 ಲಕ್ಷ ಮತದಾರರಿದ್ದಾರೆ.

10 ಜಿಲ್ಲೆಗಳ ಯುವ ಕಾಂಗ್ರೆಸ್‌ ಕಾರ್ಯಕರ್ತರು ಭಾನುವಾರ ಮತ ಚಲಾಯಿಸಿದ್ದಾರೆ. ಈ ಜಿಲ್ಲೆಗಳಲ್ಲಿರುವ ಒಟ್ಟು 1.68 ಲಕ್ಷ ಮತದಾರರ ಪೈಕಿ 59 ಸಾವಿರ ಮಂದಿ ಮತ ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಕಣದಲ್ಲಿರುವ ಶಾಸಕ ಎನ್.ಎ. ಹ್ಯಾರಿಸ್‌ ಅವರ ಪುತ್ರ ಮೊಹ್ಮದ್ ನಲಪಾಡ್‌, ಕಾಂಗ್ರೆಸ್ಸಿನ ಹಿರಿಯ ನಾಯಕ ಎಂ.ಆರ್‌. ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಮತ್ತು ಎನ್‌ಎಸ್‌ಯುಐ ಅಧ್ಯಕ್ಷ ಎಚ್‌.ಎನ್‌. ಮಂಜುನಾಥ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಣದಲ್ಲಿದ್ದ ಮಿಥುನ್‌ ರೈ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಸಲಹೆಯಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

‘ಡಿ.ಕೆ. ಶಿವಕುಮಾರ್‌ ಅವರು ಮಂಜುನಾಥ್ ಗೌಡ ಅವರ ಬೆನ್ನಿಗೆ ನಿಂತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಕಾರಣಕ್ಕೆ ಮಿಥುನ್ ರೈ ಅವರನ್ನು ಕಣದಿಂದ ಹಿಂದೆಸರಿಯುವಂತೆ ಬಲವಂತ ಮಾಡಿರಬಹುದು ಎಂಬ ಮಾತೂ ಇದೆ. ಮುಸ್ಲಿಂ ಮತಗಳು ಮೊಹ್ಮದ್‌ ನಲಪಾಡ್‌ ಪರ ಧ್ರುವೀಕರಣಗೊಳ್ಳುವ ಸಾಧ್ಯತೆಯೂ ಇದೆ. ಅಲ್ಲದೆ, ಹಣ ಬಲವೂ ಚುನಾವಣೆಯಲ್ಲಿ ಪ್ರಭಾವ ಬೀರಬಹುದು’ ಎಂದು ಯುವ ಕಾಂಗ್ರೆಸ್‌ ಪದಾಧಿಕಾರಿಯೊಬ್ಬರು ಹೇಳಿದರು.

ನನ್ನ ಹಸ್ತಕ್ಷೇಪ ಇಲ್ಲ: ‘ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯನ್ನು ನಾವು ನಿಲ್ಲಿಸಿದ್ದೇವೆ. ಹೀಗಾಗಿ, ಯುವ ಕಾಂಗ್ರೆಸ್ ಚುನಾವಣೆ ನಡೆಯುತ್ತಿದೆ. ಪಾರದರ್ಶಕ ಹಾಗೂ ಮುಕ್ತವಾಗಿ ಚುನಾವಣೆ ನಡೆಯಬೇಕು. ಪಕ್ಷದ ಅಧ್ಯಕ್ಷನಾಗಿ ನಾನು ಯಾರ ಪರವಾಗಿಯೂ ನಿಲ್ಲುವುದಿಲ್ಲ. ಯಾರಿಗೂ ವಿರೋಧ ಮಾಡುವುದಿಲ್ಲ.‌ ಯಾರಿಗೆ ಆಸಕ್ತಿ ಇದೆಯೊ, ಯಾರು ಪಕ್ಷಕ್ಕೆ ಸಮಯ ಕೊಟ್ಟು ಸಂಘಟನೆಗೆ ಶ್ರಮಿಸುತ್ತಾರೊ ಅಂಥವರನ್ನು ಆಯ್ಕೆ ಮಾಡುವಂತೆ ಮತದಾರರಿಗೆ ಮನವಿ ಮಾಡುತ್ತೇನೆ’ ಎಂದರು.‌

ಸ್ಪರ್ಧೆಯಿಂದ ಹಿಂದೆ ಸರಿಯಲು ಸಲಹೆ ಕೊಟ್ಟೆ: ‘ಮಿಥುನ್ ರೈಗೆ ಹೆಚ್ಚಿನ ಜವಾಬ್ದಾರಿ ಇದೆ. ಅವರು ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ನಾನು ಅವರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆಸರಿಯುವಂತೆ ಸಲಹೆ ಕೊಟ್ಟೆ. ಬೇರೆಯವರಲ್ಲಿ ಸ್ಪರ್ಧಿಸುವ ಉತ್ಸಾಹ ಇತ್ತು. ಮಿಥುನ್ ನನ್ನ ಆಪ್ತ. ನನ್ನ ಹೆಸರಿಂದ ಒಬ್ಬರಿಗೆ ಅನುಕೂಲವಾಗಿ ಮತ್ತೊಬ್ಬರಿಗೆ ಹಿನ್ನಡೆಯಾಗುವುದು ಬೇಡ ಎಂದು ನಾನು ಸಲಹೆ ನೀಡಿದೆ’ ಎಂದು ಸಮರ್ಥನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT