ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿ: ಎರಡು ಆನೆಗಳ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು‌

ಕೆ.ಗುಡಿ ಸಫಾರಿ ವಲಯದಲ್ಲಿ ಘಟನೆ, ಚಾಲಕನ ಧೈರ್ಯಕ್ಕೆ ಪ್ರವಾಸಿಗರ ಮೆಚ್ಚುಗೆ, ಕೃತಜ್ಞತೆ – ವಿಡಿಯೊ ವೈರಲ್
Last Updated 15 ಮಾರ್ಚ್ 2021, 11:53 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ (ಬಿಆರ್‌ಟಿ) ಪ್ರದೇಶದ ಕೆ.ಗುಡಿ ವಲಯದಲ್ಲಿ ಸಫಾರಿ ನಡೆಸುತ್ತಿದ್ದ ಪ್ರವಾಸಿಗರು ಎರಡು ಆನೆಗಳ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಹಿಂಬದಿಯಿಂದ ಹೆಣ್ಣಾನೆಯೊಂದು ವಾಹನವನ್ನು ಬೆನ್ನಟ್ಟುತ್ತಿರುವುದು ಹಾಗೂ ಪ್ರವಾಸಿಗರು ಅದರಿಂದ ತಪ್ಪಿ‌ಸಿಕೊಂಡ ತಕ್ಷಣ ಎದುರು ಭಾಗದಲ್ಲಿ ಇನ್ನೊಂದುಹೆಣ್ಣಾನೆ ವಾಹನಕ್ಕೆ ಅಡ್ಡ ಬಂದ ವಿಡಿಯೊ ತುಣುಕು ವೈರಲ್‌ ಆಗಿದೆ. ಸಫಾರಿ ವಾಹನದಲ್ಲಿದ್ದ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ಸಫಾರಿ ವಾಹನ ಚಾಲಕ ನಾಗರಾಜು ಎಂಬುವವರು ಆತಂಕದ ಸನ್ನಿವೇಶದಲ್ಲೂ ವಾಹನದ ಎದುರಿಗೆ ಅಡ್ಡ ಬಂದ ಹೆಣ್ಣಾನೆಯನ್ನು ಬೆನ್ನಟ್ಟಲು ಯಶಸ್ವಿಯಾಗಿದ್ದಾರೆ. ಇದಕ್ಕೆ ಕೃತಜ್ಞತೆ ಅರ್ಪಿಸಿರುವ ಪ್ರವಾಸಿಗ, ಅವರನ್ನು ಮಾತನಾಡಿಸಿ ಧನ್ಯವಾದ ಸಲ್ಲಿಸುವ ವಿಡಿಯೊ ಮಾಡಿದ್ದಾರೆ. ಅದು ಕೂಡ ವೈರಲ್‌ ಆಗಿದೆ.

‘ನಮ್ಮನ್ನು ನಂಬಿ ಅತಿಥಿಗಳು ಬಂದಿರುತ್ತಾರೆ. ಅವರ ಸುರಕ್ಷಿತೆ ನಮಗೆ ಅತ್ಯಂತ ಮುಖ್ಯ. ನಮ್ಮ ಪ್ರಾಣ ಹೋದರೂ ಅವರನ್ನು ರಕ್ಷಿಸಬೇಕು ಎಂಬ ಕಾರಣಕ್ಕೆ ಆನೆಯನ್ನೇ ಬೆನ್ನಟ್ಟಿದೆ’ ಎಂದು ನಾಗರಾಜ್‌ ಅವರು ಹೇಳುತ್ತಿರುವುದು ವಿಡಿಯೊದಲ್ಲಿದೆ.

ವಿಡಿಯೊದಲ್ಲೇನಿದೆ?

ಸಫಾರಿ ವಲಯದಲ್ಲಿ ಬರುವ ಭತ್ತದಗದ್ದೆ ಕೆರೆ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. 1.10 ನಿಮಿಷದ ವಿಡಿಯೊದಲ್ಲಿ ವಾಹನದಲ್ಲಿ ಸಫಾರಿ ತೆರಳಿದ್ದವರ ಮೇಲೆ ಹೆಣ್ಣಾನೆಯೊಂದು ಘೀಳಿಡುತ್ತಾ ಅಟ್ಟಿಸಿಕೊಂಡು ಬರುತ್ತದೆ. ಒಂದಷ್ಟು ದೂರ ಹೋದ ನಂತರ ಅದು ನಿಲ್ಲುತ್ತದೆ. ವಾಹನ ನಿಧಾನವಾಗಿ ಮುಂದೆ ಸಾಗುವಾಗ ಎದುರಿಗೆ ಇನ್ನೊಂದು ಹೆಣ್ಣಾನೆ ಅಡ್ಡ ನಿಂತಿರುತ್ತದೆ. ಜೀಪಿನ ಹೆಡ್‌ಲೈಟ್‌ ಹಾಕುವ ಚಾಲಕ, ಹೆಣ್ಣಾನೆಯನ್ನು ಬೆನ್ನಟ್ಟುತ್ತಾರೆ. ಎರಡು ಬಾರಿ ತಿರುಗಿ ವಾಹನದತ್ತ ಬರುವ ಆನೆ, ವಾಹನದ ಶಬ್ದ ಹಾಗೂ ಪ್ರವಾಸಿಗರ ಕಿರುಚಾಟಕ್ಕೆ ರಸ್ತೆಯಿಂದ ಸರಿಯುತ್ತದೆ. ಅದೇ ಪ್ರದೇಶದಲ್ಲಿ ನಾಲ್ಕೈದು ಆನೆಗಳಿರುವ ಹಿಂಡು ಇರುವ ದೃಶ್ಯವೂ ವಿಡಿಯೊದಲ್ಲಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ಸಂತೋಷ್‌ ಕುಮಾರ್‌ ಅವರು, ‘ಈ ಬಗ್ಗೆ ಸಿಬ್ಬಂದಿಯನ್ನು ವಿಚಾರಿಸಿ ಮಾಹಿತಿ ನೀಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT