ಮಂಗಳವಾರ, ಮಾರ್ಚ್ 28, 2023
33 °C
ನಿರುದ್ಯೋಗದ ವಿರುದ್ಧ ಎಐಡಿವೈಒದಿಂದ ಆನ್‌ಲೈನ್‌ ಸಮಾವೇಶ –ಬರಗೂರು ಸಲಹೆ

ಜನ ಕೇಂದ್ರಿತ ಉದ್ಯೋಗಕ್ಕೆ ಹೋರಾಟ ಅವಶ್ಯ: ಬರಗೂರು ರಾಮಚಂದ್ರಪ್ಪ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಉದ್ಯಮಿ ಕೇಂದ್ರಿತ ಉದ್ಯೋಗರಹಿತ ಅಭಿವೃದ್ಧಿಯ ಬದಲು, ಜನಕೇಂದ್ರಿತ ಉದ್ಯೋಗ ಸೃಷ್ಟಿಗೆ ಪೂರಕವಾದ ಅಭಿವೃದ್ಧಿಗೆ ಒತ್ತಾಯಿಸಿ ಬೃಹತ್‌ ಹೋರಾಟ ಹಮ್ಮಿಕೊಳ್ಳಬೇಕು’ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದ್ದಾರೆ.

ನಿರುದ್ಯೋಗದ ವಿರುದ್ಧ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್‌ ಆರ್ಗನೈಸೇಷನ್ (ಎಐಡಿವೈಒ) ರಾಜ್ಯ ಸಮಿತಿಯ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಆನ್‌ಲೈನ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ದುಡಿಯುವ ಅರ್ಹತೆಯ ಪ್ರತಿಯೊಬ್ಬರಿಗೂ ಉದ್ಯೋಗ ಸೃಷ್ಟಿ ಮಾಡಬೇಕಿರುವುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ. ಆದರೆ, ನಮ್ಮ ಸರ್ಕಾರಗಳ ಆದ್ಯತೆ ಜನಸಾಮಾನ್ಯರ ಏಳಿಗೆಯಲ್ಲ. ಬದಲಿಗೆ ಕಾರ್ಪೊರೇಟ್ ಮನೆತನಗಳ ಸೇವೆಗೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ದೇಶದಲ್ಲಿ ಇಂದು 65 ಕೋಟಿ ನಿರುದ್ಯೋಗಿಗಳಿದ್ದಾರೆ. ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಷನ್ ಪ್ರಕಾರ 45 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ ನಿರುದ್ಯೋಗ ದಾಖಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 52 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರವೇ ನೀಡಿರುವ ಅಂಕಿಅಂಶದ ಪ್ರಕಾರ 2015ರಲ್ಲಿ ಸರ್ಕಾರ ನೇಮಿಸಿದ ಹುದ್ದೆಗಳ ಸಂಖ್ಯೆ ಕೇವಲ 15,670. ಇತ್ತೀಚಿನ ವರ್ಷಗಳಲ್ಲಂತೂ ಯಾವುದೇ ನೇಮಕಾತಿಯೂ ನಡೆದಿಲ್ಲ. ಕೋವಿಡ್ ಎರಡನೇ ಅಲೆಯ ನಂತರ ಸುಮಾರು 1.47 ಕೋಟಿ ಜನರು
ಉದ್ಯೋಗ ಕಳೆದುಕೊಂಡಿದ್ದಾರೆ. ಜನರ ಆದಾಯ ಪ್ರಪಾತಕ್ಕೆ ಕುಸಿದಿದೆ’ ಎಂದು ಹೇಳಿದರು.

ಮುಖ್ಯ ಭಾಷಣಕಾರರಾಗಿದ್ದ ಎಐಡಿವೈಒ ರಾಷ್ಟ್ರೀಯ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ‘ನಿರುದ್ಯೋಗದ ವಿರುದ್ಧದ ಹೋರಾಟ ಅಲ್ಪಕಾಲೀನ ಅಲ್ಲ. ಅದು ಒಂದು ಸ್ಪಷ್ಟ ವೈಚಾರಿಕತೆಯ ಆಧಾರದ ಮೇಲೆ ನಡೆಸಬೇಕಾದ ದೀರ್ಘಕಾಲೀನ ಹೋರಾಟ. ಸಮಸ್ಯೆಯ ಆಳ ಮತ್ತು ಮೂಲ ಗ್ರಹಿಸಬೇಕು. ಎಲ್ಲ ಕ್ಷೇತ್ರದಲ್ಲಿ ಗರಿಷ್ಠ ಉದ್ಯೋಗಗಳ ಸೃಷ್ಟಿಗಾಗಿ ಸರ್ಕಾರಗಳನ್ನು ಎಚ್ಚರಿಸುವಂಥ ಹೋರಾಟಗಳನ್ನು ಕಟ್ಟಬೇಕು’ ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಐಡಿವೈಓ ರಾಜ್ಯ ಕಾರ್ಯದರ್ಶಿ ಜಿ.ಎಸ್. ಕುಮಾರ್, ‘ಕೋವಿಡ್ ನಂತರದ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಯುವಜನರ ಆಕ್ರೋಶ ಸಿಡಿದೇಳುತ್ತಿದೆ. ಬಿಡಿಬಿಡಿಯಾದ ಹೋರಾಟದ ಧ್ವನಿಗಳನ್ನು ಒಂದಾಗಿಸಲು ಈ ಸಮಾವೇಶ ಭೂಮಿಕೆಯಾಗಲಿ’ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಐಡಿವೈಒ ರಾಜ್ಯ ಘಟಕದ ಅಧ್ಯಕ್ಷೆ ಎಂ. ಉಮಾದೇವಿ, ‘ಭವಿಷ್ಯದ ಕುರಿತು ಭರವಸೆಯನ್ನೇ ಕಳೆದುಕೊಂಡ ಉದ್ಯೋಗಾಕಾಂಕ್ಷಿಗಳನ್ನು ಒಗ್ಗೂಡಿಸಿ ಈ ಸಮಾವೇಶ ನಡೆಯುತ್ತಿದೆ. ಹೋರಾಟದ ಹೆಜ್ಜೆಗಳನ್ನು ನಿರ್ಧರಿಸಿ, ಮುಂದಡಿ ಇಡಬೇಕಾಗಿದೆ’ ಎಂದು ಹೇಳಿದರು.

ಎಐಡಿವೈಓ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ಧಲಿಂಗ ಬಾಗೇವಾಡಿ ನಿರ್ವಹಿಸಿದರು. ಸಮಾವೇಶದಲ್ಲಿ ನಿರುದ್ಯೋಗದ ವಿರುದ್ಧದ ಮುಖ್ಯ ಗೊತ್ತುವಳಿಯ ಜೊತೆಗೆ ಐದು
ಉಪ ಗೊತ್ತುವಳಿಗಳನ್ನು ಅಂಗೀಕರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು