ಸೋಮವಾರ, ಜನವರಿ 25, 2021
15 °C
ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿಕೆ

ಕೃಷಿ ಆಸಕ್ತಿ ಯುವಕರಿಗೆ ಉತ್ತೇಜನ: ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಈರಣ್ಣ ಕಡಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೃಷಿ ಲಾಭದಾಯಕ ಅಲ್ಲವೆಂದು ಬೇರೆ ಬೇರೆ ವೃತ್ತಿ ಅಲವಂಬಿಸಿದ್ದ ಯುವಕರು, ಮತ್ತೆ ಕೃಷಿಯತ್ತ ಆಸಕ್ತಿ ವಹಿಸುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅಭಿಪ್ರಾಯಪಟ್ಟರು.

ನಗರದ ಭಾರತೀಯ ವಿದ್ಯಾಭವನದಲ್ಲಿ ರೈತ ಮೋರ್ಚಾದಿಂದ ಆಯೋಜಿಸಿದ್ದ ರೈತ ಜಾಗೃತಿ ಅಭಿಯಾನ ಮತ್ತು ಜಿಲ್ಲಾ ಕಾರ್ಯಕಾರಿಣಿ ಅವರು ಮಾತನಾಡಿದರು.

ನಾಗರಿಕ ಸಮಾಜ ಕೃಷಿಯನ್ನೇ ನಂಬಿ ಬದುಕಿ ಕಟ್ಟಿಕೊಂಡಿದ್ದರೂ ಕೆಲವು ವರ್ಷಗಳ ಹಿಂದೆ ಕೃಷಿಯಿಂದ ವಿಮುಖರಾಗಿದ್ದರು. ಮತ್ತೆ ಕೃಷಿ ಕ್ಷೇತ್ರದತ್ತ ಮನಸ್ಸು ಮಾಡುತ್ತಿದೆ ಎಂದು ಹೇಳಿದರು.

ಕೋವಿಡ್-19 ಎಲ್ಲ ಕ್ಷೇತ್ರಗಳಿಗೆ ಪೆಟ್ಟು ನೀಡಿತ್ತು. ಹಲವರ ಉದ್ಯೋಗ ಕಸಿದುಕೊಳ್ಳುವಂತೆ ಆಗಿತ್ತು. ಆದರೆ, ಕೃಷಿ ಕ್ಷೇತ್ರವನ್ನು ಕೋವಿಡ್ ಏನು ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ, ಕೃಷಿ ಬದುಕಿನ ಕಡೆಗೆ ಆಸಕ್ತಿ ಹೊಂದಿರುವವರನ್ನು ಬೆಳೆಸುವ ಕಾರ್ಯ ಕೃಷಿ ಮೋರ್ಚಾದಿಂದ ಆಗಬೇಕಿದೆ. ಸರ್ಕಾರದ ಯೋಜನೆಗಳ ಬಗ್ಗೆ ರೈತರಿಗೆ ತಿಳಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ತಯಾರಾಗಬೇಕಿದೆ ಎಂದು ಕರೆ ನೀಡಿದರು.

ದೇಶದಲ್ಲಿ 145 ಕೋಟಿ ಜನಸಂಖ್ಯೆಯ ಪೈಕಿ 60 ಕೋಟಿ ಜನರು ಬೇಸಾಯವನ್ನೇ ನಂಬಿಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಶೇ 11ರಷ್ಟಿದ್ದ ಜಿ.ಡಿ.ಪಿಯು ಬಿಜೆಪಿ ಸರ್ಕಾರ ಅವಧಿಯಲ್ಲಿ ಶೇ 18ಕ್ಕೆ ಏರಿಕೆ ಮಾಡಲಾಗಿದೆ. ಆರ್ಥಿಕವಾಗಿ ಚೇತರಿಕೆ ಕಾಣಲು ಹಲವಾರು ಯೋಜನೆಗಳನ್ನು ತಂದಿದೆ ಎಂದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ವಾಮಿನಾಥನ್ ವರದಿಯನ್ನು ಸಲ್ಲಿಸಿ, ಅನುಮೋದನೆ ಪಡೆದಿದ್ದರೂ, ಆದು ಕಾರ್ಯರೂಪಕ್ಕೆ ಬರಿಸಲು ಸಾಧ್ಯವಾಗಿರಲಿಲ್ಲ. ನಂತರ, ಇದನ್ನು ಕಾರ್ಯರೂಪಕ್ಕೆ ತರಲು ಪ್ರಧಾನಿ ಮೋದಿ ಅವರೇ ಬರಬೇಕಾಯಿತು. ಆದಾಯವನ್ನು ದ್ವಿಗುಣಗೊಳಿಬೇಕೆನ್ನುವ ರೈತ ಪರ ನಿಲುವುಗಳನ್ನು ಬಿಜೆಪಿ ಸರ್ಕಾರ ಹೊಂದಿದ್ದು, ಆದ್ದರಿಂದ ಯುವ ಮೋರ್ಚಾದ ಪದಾಧಿಕಾರಿಗಳು ರೈತರಿಗೆ ಯೋಜನೆ ಅಥವಾ ನೂತನ ಮಸೂದೆಗಳ ಬಗ್ಗೆ ತಿಳಿ ಹೇಳಬೇಕಿದೆ ಎಂದು ಸೂಚಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೃಷಿ ಪ್ರಧಾನವಾದ ದೇಶದಲ್ಲಿ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಪ್ರತಿಯೊಬ್ಬ ಕೃಷಿಕ ಸ್ವಾವಲಂಬಿ ಹಾಗೂ ಸ್ವಾಭಿಮಾನ ಬದುಕನ್ನು ಕಟ್ಟಿಕೊಳ್ಳಬೇಕಿರುವುದರಿಂದ ಸರ್ಕಾರದ ನೀಡಿರುವ ಕೃಷಿಪರ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೃಷಿ ವಲಯದಲ್ಲಿ ಪ್ರಗತಿ ಸಾಧಿಸಲು ರೈತರಿಗೆ ಕೃಷಿ ಪ್ರಧಾನವಾದ ಬಜೆಟ್‌ಗಳನ್ನು ಘೋಷಿಸಲಾಗಿತ್ತು. ರಾಜ್ಯದಲ್ಲಿಯೂ ಕೃಷಿಗೆ ಪ್ರತ್ಯೇಕ ಬಜೆಟ್ ಆಗಿತ್ತು. ಒಟ್ಟಾರೆ ಬಿಜೆಪಿ ಸರ್ಕಾರ ಕೃಷಿಗೆ ಹೆಚ್ಚು ಒತ್ತು ನೀಡಿದೆ ಎಂದು ಹೇಳಿದರು.

ಇತ್ತೀಚೆಗೆ ಕೃಷಿ ಕ್ಷೇತ್ರ ನಷ್ಟದಲ್ಲಿದೆ. ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ಕಾಡಾನೆ ಹಾವಳಿ, ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಾರರಿಗೆ ಸರಿಯಾದ ಫಸಲು ಸಿಗುತ್ತಿಲ್ಲ. ಈ ನಡುವೆ ಕೋವಿಡ್-19, ಪ್ರಕೃತಿ ವಿಕೋಪದಂಥ ಸಮಸ್ಯೆಗಳ ಬಗ್ಗೆ ರೈತರು ಇನ್ನಷ್ಟು ಕಂಗಾಲಾಗಿದ್ದಾರೆ. ಒಟ್ಟಿನಲ್ಲಿ ರೈತರ ಈ ಎಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಶಾಸಕರು ಹೇಳಿದರು.

ರಾಜ್ಯ ಕಾರ್ಯದರ್ಶಿ ಡಾ.ಬಿ.ಸಿ. ನವೀನ್ ಕುಮಾರ್ ಮಾತನಾಡಿ, ರೈತ ಮೋರ್ಚಾಕ್ಕೆ ಸುಗ್ಗಿ ಕಾಲ ಬಂದಿದೆ. ಇದಕ್ಕೆ ಮುಖ್ಯ ಕಾರಣ, 1947ರಲ್ಲಿ ರೈತರ ಆರ್ಥಿಕತೆಯ ಬಗ್ಗೆ ಚಿಂತನೆ ನಡೆಸುತ್ತಿದ್ದರೂ, ಸುಮಾರು 73 ವರ್ಷಗಳ ಬಳಿಕ ರೈತರ ಆರ್ಥಿಕತೆಯಲ್ಲಿ ಬದಲಾವಣೆ ತರಲು ಪ್ರಯತ್ನಗಳು ನಡೆದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ಹೊಸ ಪ್ರಯೋಗಗಳು ಬಾಜಪದ ಕೃಷಿ ಮೋರ್ಚಾಗಳ ಮೂಲಕ ಆಗುತ್ತಿದೆ. 2014ರಲ್ಲಿ ಅಧಿಕಾರ ಪಡೆದ ಅವರು 2022ರ ವೇಳೆಗೆ ಪ್ರತಿ ರೈತನ ಆದಾಯ ದ್ವಿಗುಣಗೊಳಿಸುವಲ್ಲಿ ಪ್ರಯತ್ನ ಸಾಗಿದೆ. ಬೀಜಗಳ ಉತ್ಪಾದನೆ, ರಸ ಗೊಬ್ಬರ, ನೀರಾವರಿ, ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆಗಳನ್ನು ರೈತರಿಗೆ ಸಕಾಲದಲ್ಲಿ ನೀಡುವ ವ್ಯವಸ್ಥೆ ಆಗಬೇಕು ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಜಿಲ್ಲೆಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ 74 ಗ್ರಾ.ಪಂಗಳಲ್ಲಿ ಬಿಜೆಪಿ ಬೆಂಬಲಿತ ಪಕ್ಷ ಅಧಿಕಾರ ಪಡೆದಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿಯೂ ಅಧಿಕಾರ ಪಡೆಯುವ ನಿರೀಕ್ಷೆಯಿದೆ. ರೈತರ ಪರ ಕಾಳಜಿಯನ್ನು ಕೃಷಿ ಮೋರ್ಚಾ ಬೆಳೆಸಿಕೊಂಡು ರೈತರ ಏಳಿಗೆಗೆ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.

ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಜಿಲ್ಲೆಯಲ್ಲಿ ಕಾಡಾನೆ, ಹುಲಿ ಮತ್ತಿತ್ತರ ಕಾಡು ಪ್ರಾಣಿಗಳಿಂದ ಜನರ ನಿದ್ದೆ ಗೆಡಿಸಿದೆ. ಅಕಾಲಿಕ ಮಳೆಯಿಂದ ಕಾಫಿ ಬೆಳೆಯೂ ನಾಶದತ್ತ ಸಾಗಿದ್ದು, ಕೃಷಿ ಮೋರ್ಚಾದ ಪದಾಧಿಕಾರಿಗಳು ಈ ಬಗ್ಗೆ ಎಚ್ಚರಗೊಂಡು ಒಗ್ಗಟ್ಟಿನಿಂದ ಕೃಷಿಕರ ಪರ ದುಡಿಯಬೇಕಿದೆ ಎಂದರು.

ರೈತ ಮೋರ್ಚಾ ಉಪಾಧ್ಯಕ್ಷ ಲೋಕೇಶ್ ಗೌಡ, ತೀರ್ಥರಾಮ್, ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಡಾ.ನವೀನ್, ಖಜಾಂಜಿ ಲತೀಶ್ ರೆಡ್ಡಿ, ಕಾರ್ಯಕಾರಿ ಸಮಿತಿ ಸದಸ್ಯೆ ಯಮುನಾ ಚಂಗಪ್ಪ, ಪ್ರಮುಖರಾದ ದಿನೇಶ್, ಕಬೀರ್ ದಾಸ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು