ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇ, ಪ್ರಧಾನ ಎಂಜಿನಿಯರ್‌ ಬಡ್ತಿ ಅತಂತ್ರ?

ಡಿಪಿಎಆರ್‌ನಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ
Last Updated 4 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನ ಎಂಜಿನಿಯರ್‌ ಮತ್ತು ಮುಖ್ಯ ಎಂಜಿನಿಯರ್ (ಸಿಇ) ಹುದ್ದೆಗೆ ಬಡ್ತಿ ಮತ್ತು ವರ್ಗಾವಣೆ ಪ್ರಕ್ರಿಯೆಯ ನಿರ್ವಹಣೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಬದಲು ಆಯಾ ಇಲಾಖೆಗಳಿಗೆ ವಹಿಸಿರುವ ರಾಜ್ಯ ಸರ್ಕಾರ ನಡೆಗೆ ಅಧಿಕಾರಿಗಳ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಬಡ್ತಿ, ವರ್ಗಾವಣೆ ಪ್ರಕ್ರಿಯೆಯ ನಿರ್ವಹಣೆ ಹೊಣೆಯನ್ನುಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಇಲಾಖೆಗೆ ವಹಿಸಲು ‘ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು–1977’ ಕ್ಕೆ ತಿದ್ದುಪಡಿ ತರಲಾಗಿದೆ. ಇದರಿಂದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌(ಎಸ್‌ಇ) ಹುದ್ದೆಯಿಂದ ಮುಖ್ಯ ಎಂಜಿನಿಯರ್‌ ಹುದ್ದೆಗೆ ಮತ್ತು ಅಲ್ಲಿಂದ ಪ್ರಧಾನ ಎಂಜಿನಿಯರ್‌ ಹುದ್ದೆಗೆ ಬಡ್ತಿ ಸ್ಥಗಿತವಾಗುವ ಸಾಧ್ಯತೆ ಇದೆ ಎಂದು ಎಂಜಿನಿಯರ್‌ಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿರುವ ಸೂಪರಿಂಟೆಂಡಿಂಗ್‌, ಮುಖ್ಯಮತ್ತು ಪ್ರಧಾನ ಎಂಜಿನಿಯರ್‌ಗಳು, ‘ಇಲಾಖಾ ಮುಖ್ಯಸ್ಥರ ಶ್ರೇಣಿಯ ಈ ಹುದ್ದೆಗಳಿಗೆ ಬಡ್ತಿ ಮತ್ತು ವರ್ಗಾವಣೆಯನ್ನು 1977ರಿಂದಲೂ ಡಿಪಿಎಆರ್‌ ವತಿಯಿಂದಲೇ ನಡೆಸುತ್ತಿದ್ದು, ಅದೇ ವ್ಯವಸ್ಥೆ ಮುಂದುವರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ನಿಯಮ ತಿದ್ದುಪಡಿಯಾದ ಬೆನ್ನಲ್ಲೇ ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಅನ್ಯ ಇಲಾಖೆಗಳಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳು ಮತ್ತು ಮುಖ್ಯ ಎಂಜಿನಿಯರ್‌ಗಳಿಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಲೋಕೋಪಯೋಗಿ ಇಲಾಖೆಗೆ ಡಿಪಿಎಆರ್‌ ಹಸ್ತಾಂತರಿಸಿದೆ.

ಲೋಕೋಪಯೋಗಿ, ಜಲಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳನ್ನು ಪ್ರತ್ಯೇಕಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಇಲಾಖೆಗಳಲ್ಲಿ ಕಿರಿಯ ಎಂಜಿನಿಯರ್‌ಗಳಿಂದ ಪ್ರಧಾನ ಎಂಜಿನಿಯರ್‌ಗಳವರೆಗೆ ಒಟ್ಟು ಹುದ್ದೆಗಳ ಹಂಚಿಕೆ ಪೂರ್ಣಗೊಂಡಿಲ್ಲ. ಇಲಾಖೆ ಆಯ್ಕೆ ಮಾಡಿಕೊಳ್ಳಲು ಎಂಜಿನಿಯರ್‌ಗಳ ಸಹಮತ ಪಡೆಯುವ ಪ್ರಕ್ರಿಯೆ ಮುಗಿದಿಲ್ಲ. ಸದ್ಯ ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ವೃಂದಗಳ ಎಂಜಿನಿಯರ್‌ಗಳು ಹೆಚ್ಚಿನ ಪ್ರಮಾಣದಲ್ಲಿ (ಶೇ 40) ಇದ್ದು, ಶೇ 20ರಷ್ಟು ಎಂಜಿನಿಯರ್‌ಗಳು ಈ ಪ್ರಸ್ತಾವಕ್ಕೆ ಸಹಮತ ನೀಡಿಲ್ಲ. ಹೀಗಾಗಿ, ಈ ಎಂಜಿನಿಯರ್‌ಗಳು ಅತಂತ್ರರಾಗಿದ್ದು, ಸ್ಥಳ ನಿಯುಕ್ತಿಗೊಳಿಸಲು ಇಲಾಖೆಗಳು ಹಿಂಜರಿಯುತ್ತಿವೆ.

‘ನಿಯಮ ಬದಲಾದರೂ ಬಡ್ತಿ ಮತ್ತು ವರ್ಗಾವಣೆ ವಿಷಯದಲ್ಲಿ ಯಾವ ರೀತಿಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕೆಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಈವರೆಗೆ ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯ ಬಡ್ತಿ/ವರ್ಗಾವಣೆ ಪ್ರಕ್ರಿಯೆ ನಡೆಸುತ್ತಿತ್ತು. ಆದರೆ, ನಿಯಮ ತಿದ್ದುಪಡಿಯಾದರೂ ಇಲಾಖಾ ಪದೋನ್ನತಿ ಸಮಿತಿ ರಚಿಸುವ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದು ಮುಖ್ಯ ಎಂಜಿನಿಯರೊಬ್ಬರು ತಿಳಿಸಿದರು.

‘ಬಡ್ತಿ ಮೀಸಲಾತಿ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿ ಇದ್ದುದರಿಂದ 2000ರಿಂದಬಡ್ತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. 2007ರಿಂದ ನಿಯಮ 32 ಅಡಿ ಸ್ವತಂತ್ರ ಪ್ರಭಾರದ ವ್ಯವಸ್ಥೆ ಕಲ್ಪಿಸಲಾಗಿದೆ. 2018ರಿಂದ ಮತ್ತೆ ಬಡ್ತಿ ನೀಡಲಾಗುತ್ತಿದೆ. ಮತ್ತೆ,ಲೋಕೋಪಯೋಗಿ ಇಲಾಖೆಗೆ ವಹಿಸಿದ್ದರಿಂದ ಬಡ್ತಿ ಸ್ಥಗಿತಗೊಳ್ಳುವ ಅಪಾಯವಿದೆ’ ಎಂದರು.

ಬಡ್ತಿ, ವರ್ಗಾವಣೆಗೆ ಪೈಪೋಟಿ?

‘ಪ್ರಧಾನ ಎಂಜಿನಿಯರ್‌ ಮತ್ತು ಮುಖ್ಯ ಎಂಜಿನಿಯರ್‌ ಹುದ್ದೆಗಳನ್ನು ‘ಇಲಾಖಾ ಮುಖ್ಯಸ್ಥರು’ ಮತ್ತು ‘ಸರ್ಕಾರದ ಕಾರ್ಯದರ್ಶಿ’ ಹುದ್ದೆ ಎಂದು ಡಿಪಿಎಆರ್‌ ಪರಿಗಣಿಸಿತ್ತು. ಇದೀಗ ಈ ಹುದ್ದೆಗಳಿಗೆ ಆಯಾ ಇಲಾಖೆಯವರೇ ಪದೋನ್ನತಿ ನೀಡಬಹುದೆಂದು ನಿಯಮ ಬದಲಾಗಿದೆ. ಹೀಗಾಗಿ, ಈ ಹುದ್ದೆಗಳ ಮೇಲಿನ ನಿಯಂತ್ರಣವನ್ನು ಡಿಪಿಎಆರ್‌ ಕಳೆದುಕೊಳ್ಳಲಿದೆ. ಆದರೆ, ಮೂರೂ ಇಲಾಖೆಗಳಲ್ಲಿನ ಎಂಜಿನಿಯರ್‌ಗಳ ಹಂಚಿಕೆ ಪೂರ್ಣಗೊಳ್ಳದೇ ಇರುವುದರಿಂದ, ಈ ಹಂತದಲ್ಲಿ ಪ್ರಧಾನ ಎಂಜಿನಿಯರ್‌ ಮತ್ತು ಮುಖ್ಯ ಎಂಜಿನಿಯರ್‌ ಹುದ್ದೆಗಳಿಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ಈ ಮೂರು ಇಲಾಖೆಗಳ ಪೈಕಿ ಯಾರು ನಿರ್ವಹಿಸಬೇಕೆಂಬ ಬಗ್ಗೆಯೇ ಸ್ಪಷ್ಟತೆ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT