ಗುರುವಾರ , ಜನವರಿ 27, 2022
27 °C

ಎಂಜಿನಿಯರಿಂಗ್‌: 23 ಸಾವಿರ ಸೀಟು ಖಾಲಿ, ನೀಟ್ ಕೌನ್ಸೆಲಿಂಗ್ ಬಳಿಕ ಇನ್ನಷ್ಟು ಖಾಲಿ

ರಶ್ಮಿ ಬೇಲೂರು Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೂ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಈ ವರ್ಷವೂ 23 ಸಾವಿರ ಎಂಜಿನಿಯರಿಂಗ್‌ ಸೀಟುಗಳು ಖಾಲಿ ಉಳಿದಿವೆ. ಇದು ಹಿಂದಿನ ಐದು ವರ್ಷಗಳಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ.

ಕೋವಿಡ್‌ ಕಾರಣಕ್ಕೆ ಪಿಯುಸಿಯ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ್ದರಿಂದ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಕೋರ್ಸ್‌ ಪಡೆಯಲು ಅರ್ಹರಾಗಿದ್ದರು. ಹೀಗಾಗಿ, ಈ ಬಾರಿ ಖಾಲಿ ಉಳಿಯುವ ಸಾಧ್ಯತೆಗಳು ಕಡಿಮೆ ಎಂದು ನಿರೀಕ್ಷಿಸಲಾಗಿತ್ತು.

ನೀಟ್‌ ಕೌನ್ಸೆಲಿಂಗ್ ಆರಂಭವಾದ ಬಳಿಕ ವೈದ್ಯಕೀಯ ಪದವಿ ಪಡೆಯುವ ಆಕಾಂಕ್ಷಿಗಳು ಎಂಜಿನಿಯರಿಂಗ್‌ ಕೋರ್ಸ್‌ ತೊರೆಯುವ ಸಾಧ್ಯತೆ ಹೆಚ್ಚಿದ್ದು, ಆಗ ಖಾಲಿ ಉಳಿದಿರುವ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದುವರೆಗೆ ಎಂಜಿನಿಯರಿಂಗ್‌ ಸೀಟುಗಳನ್ನು ಭರ್ತಿ ಮಾಡಲು ಮೂರು ಸುತ್ತು ಕೌನ್ಸೆಲಿಂಗ್‌ ನಡೆಸಿದೆ. ಎರಡನೇ ಸುತ್ತಿನ ಬಳಿಕ, ಎಂಜಿನಿಯರಿಂಗ್‌ ಪ್ರವೇಶದ ಕೊನೆಯ ದಿನಾಂಕ ವಿಸ್ತರಿಸಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಅನುಮತಿ ಪಡೆದಿತ್ತು. ಖಾಲಿ ಉಳಿದಿರುವ ಸೀಟುಗಳನ್ನು ಭರ್ತಿ ಮಾಡಲು ಮೂರನೇ ಸುತ್ತಿನ ಕೌನ್ಸೆಲಿಂಗ್‌ ಅನ್ನು 2021ರ ಡಿಸೆಂಬರ್‌ 31ರವರೆಗೆ ನಡೆಸಿತ್ತು. ಹಾಗಿದ್ದರೂ 23,001 ಸೀಟುಗಳು ಖಾಲಿ ಉಳಿದಿವೆ.

‘ಯುಜಿ–ನೀಟ್‌ ಕೌನ್ಸೆಲಿಂಗ್‌ಗೆ ಸುಮಾರು 30 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರಲ್ಲಿ ಕನಿಷ್ಠ 25 ಸಾವಿರ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಸೀಟುಗಳನ್ನು ಕರ್ನಾಟಕದ ಕಾಲೇಜುಗಳಲ್ಲಿ ಪಡೆದಿದ್ದಾರೆ. ಇವರಿಗೆ ವೈದ್ಯಕೀಯ, ದಂತವೈದ್ಯಕೀಯ ಅಥವಾ ಇತರ ಯಾವುದಾದರೂ ಕೋರ್ಸ್‌ ಲಭ್ಯವಾದರೂ ಆ ಸೀಟುಗಳು ಭರ್ತಿಯಾಗದೆ ಖಾಲಿ ಉಳಿಯಲಿವೆ. ಹೀಗಾದಲ್ಲಿ, ಒಟ್ಟಾರೆಖಾಲಿ ಉಳಿಯುವ ಸಂಖ್ಯೆ 30 ಸಾವಿರ ದಾಟಬಹುದು ‘ ಎಂದು ಉನ್ನತ ಶಿಕ್ಷಣಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಈ ವರ್ಷ ವಿದ್ಯಾರ್ಥಿಗಳಿಗೆ 64,484 ಎಂಜಿನಿಯರಿಂಗ್‌ ಸೀಟುಗಳು ಲಭ್ಯವಿದ್ದವು. ಇವುಗಳಲ್ಲಿ 48,027 ಸೀಟುಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದರು. ಆದರೆ, ಇವರಲ್ಲಿ 41,483 ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ.

ಕರ್ನಾಟಕದಲ್ಲಿ ಸುಮಾರು 230 ಎಂಜಿನಿಯರಿಂಗ್‌ ಕಾಲೇಜುಗಳಿವೆ.  ಇವುಗಳಲ್ಲಿ 11 ಸರ್ಕಾರಿ ಕಾಲೇಜುಗಳಿವೆ. ಸಿವಿಲ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗಗಳಲ್ಲೇ ಅತಿ ಹೆಚ್ಚು ಸೀಟುಗಳು ಖಾಲಿ ಉಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು