ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ಸಿಡಿದೇಳುವುದು ಇದೇ ಮೊದಲಲ್ಲ

Last Updated 31 ಮಾರ್ಚ್ 2021, 20:52 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಅಧಿಕಾರಕ್ಕೇರುವವರೆಗೂ ಅಣ್ಣ–ತಮ್ಮರಂತೆ ಅನ್ಯೋನ್ಯವಾಗಿದ್ದ ಬಿ.ಎಸ್‌. ಯಡಿಯೂರಪ್ಪ ಮತ್ತು ಕೆ.ಎಸ್‌.ಈಶ್ವರಪ್ಪ, ಆ ಬಳಿಕ ಪರಸ್ಪರ ಪೈಪೋಟಿಗೆ ಇಳಿಯಲು ಆರಂಭಿಸಿದ್ದು ಹೊಸತಲ್ಲ.

ಅಧಿಕಾರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಯಡಿಯೂರಪ್ಪ ಆಡುವ ನಾಜೂಕಿನ ‘ಆಟ’ದ ವಿರುದ್ಧ ಈಶ್ವರಪ್ಪ ಅವರು ಬಂಡಾಯದ ಬಾವುಟ ಹಾರಿಸಿರುವುದಕ್ಕೆ ಒಂದು ದಶಕಕ್ಕಿಂತ ಹೆಚ್ಚಿನ ಇತಿಹಾಸವಿದೆ.

ಜೆಡಿಎಸ್‌–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ 20 ತಿಂಗಳ ಬಳಿಕ ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡುವ ವಿಷಯ ಚರ್ಚೆಯಲ್ಲಿತ್ತು. ಆಗ ಯಡಿಯೂರಪ್ಪ ಅವರನ್ನು ಆ ಹುದ್ದೆಗೆ ಆಯ್ಕೆ ಮಾಡುವುದು ಬೇಡ ಎಂದು ಬಿಜೆಪಿ ವರಿಷ್ಠರ ಮುಂದೆ ವಾದ ಮುಂದಿಟ್ಟ ‘ತ್ರಿಮೂರ್ತಿ’ಗಳಲ್ಲಿ ಈಶ್ವರಪ್ಪ ಕೂಡ ಒಬ್ಬರು. ಹೀಗಾಗಿಯೇ 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಒಬ್ಬರಿಗೆ ಸಭಾಧ್ಯಕ್ಷ ಪಟ್ಟ, ಮತ್ತೊಬ್ಬರಿಗೆ ಸಭಾಪತಿ ಹುದ್ದೆ ನೀಡಲಾಯಿತು. ಅಂದು ಯಡಿಯೂರಪ್ಪನವರ ಜತೆ ರಾಜಿ ಮಾಡಿಕೊಂಡ ಈಶ್ವರಪ್ಪ ಇಂಧನ ಖಾತೆ ಪಡೆದು ಸಚಿವರಾದರು.

ಯಡಿಯೂರಪ್ಪನವರ ಜತೆಗಿನ ಬಾಂಧವ್ಯ ಹೆಚ್ಚುದಿನ ಸುಖಕರವಾಗಿರಲಿಲ್ಲ. 2009ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ತಮ್ಮ ಮಗ ಬಿ.ವೈ. ರಾಘವೇಂದ್ರ ಅವರನ್ನು ಕಣಕ್ಕೆ ಇಳಿಸಲು ಯಡಿಯೂರಪ್ಪ ಮುಂದಾದಾಗ ಮೊದಲು ತಕರಾರು ತೆಗೆದವರು ಈಶ್ವರಪ್ಪ.

‘ಕುಟುಂಬ ರಾಜಕಾರಣಕ್ಕೆ ನಮ್ಮ ಪಕ್ಷದಲ್ಲಿ ಅವಕಾಶ ಇಲ್ಲ; ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು’ ಎಂದು ಬಹಿರಂಗವಾಗಿಯೇ ಆಗ್ರಹಿಸಿದ್ದರು. ಅದಕ್ಕೆ ಮಣಿಯದ ಯಡಿಯೂರಪ್ಪ ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಿಯೇ ಬಿಟ್ಟರು. ‘ಹಣ–ಹೆಂಡ ಹಂಚಿ ಚುನಾವಣೆ ಮಾಡುವುದು ನಮ್ಮ ಸಂಸ್ಕೃತಿಯಲ್ಲ, ಅದು ಬಿಜೆಪಿಗೆ ಒಗ್ಗುವುದಿಲ್ಲ’ ಎಂದು ಈಶ್ವರಪ್ಪ ಹರಿಹಾಯ್ದಿದ್ದರು. ಚುನಾವಣೆಯಲ್ಲಿ ರಾಘವೇಂದ್ರ ಗೆದ್ದರು. ಇಬ್ಬರ ಮಧ್ಯದ ವ್ಯಾಜ್ಯ ತಾರಕಕ್ಕೇರಿತು. ಇಂಧನ ಇಲಾಖೆಯಲ್ಲಿ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಆಗ ತಮ್ಮ ಆಪ್ತರ ಬಳಿ ಆಪಾದಿಸಿದ್ದುಂಟು.

ಈ ಜಗಳ ಬಿರುಸುಗೊಂಡು 2010ರ ಜನವರಿಯಲ್ಲಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದರು. ಆಗ ರೈಲು ನಿಲ್ದಾಣದಲ್ಲಿ ಮುಖಾಮುಖಿಯಾದರೂ ಒಬ್ಬರ ಮುಖವನ್ನು ಮತ್ತೊಬ್ಬರು ನೋಡದಷ್ಟು ಸಂಬಂಧ ಹಳಸಿತ್ತು.

ಗಣಿ ಹಗರಣದ ಆರೋಪಕ್ಕೆ ಗುರಿಯಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟರು. ಆಗ, ಈಶ್ವರಪ್ಪ ಅವರು ಅನಂತ್‌ ಕುಮಾರ್ ಬಣದಲ್ಲಿ ಗುರುತಿಸಿಕೊಂಡು, ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಆದರೆ, ಆಗ ನಡೆದ ರೆಸಾರ್ಟ್‌ ರಾಜಕೀಯದ ಮೇಲಾಟದಲ್ಲಿ ಯಡಿಯೂರಪ್ಪ ಗೆದ್ದು, ತಮ್ಮ ಆಪ್ತರಾಗಿದ್ದ ಡಿ.ವಿ. ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡಿದರು.

ಈ ಎಲ್ಲ ಬೆಳವಣಿಗೆಗಳ ಬಳಿಕ ಯಡಿಯೂರಪ್ಪ ಬಿಜೆಪಿಯನ್ನೇ ತೊರೆದರು. ಆಗ, ಯಡಿಯೂರಪ್ಪ ಅವರನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದವರ ಪೈಕಿ ಮುಂಚೂಣಿಯಲ್ಲಿದ್ದವರು ಈಶ್ವರಪ್ಪ. ಇದರ ಪರಿಣಾಮವಾಗಿ 2013ರ ಚುನಾವಣೆಯಲ್ಲಿ ಈಶ್ವರಪ್ಪ ಶಿವಮೊಗ್ಗದಲ್ಲಿ ಸೋಲು ಕಂಡರು.

ಕಾಲ ಹಾಗೆಯೇ ಇರಲಿಲ್ಲ; 2014ರ ಲೋಕಸಭೆ ಚುನಾವಣೆ ಹೊತ್ತಿಗೆ ಯಡಿಯೂರಪ್ಪ ತಾವೇ ಕಟ್ಟಿದ್ದ ಕೆಜೆಪಿಯನ್ನು ಕೈಬಿಟ್ಟು ಬಿಜೆಪಿಗೆ ಬಂದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಸಂಸದರೂ ಆದರು. ಬಿಜೆಪಿಯ ಅಧ್ಯಕ್ಷರೂ ಆದರು.

ಮತ್ತೆ ಈಶ್ವರಪ್ಪ ಬಂಡಾಯ ಸಾರಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ಯಡಿಯೂರಪ್ಪ ವಿರುದ್ಧ ಸೆಣೆಸಲು ನಿಂತರು. ಹಿಂದುಳಿದ ಸಮುದಾಯದ ನಾಯಕತ್ವ ವಹಿಸಿಕೊಂಡು ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯಲು ಹತ್ತಾರು ಸಮಾವೇಶಗಳನ್ನು ನಡೆಸಿದರು. ಇದೇ ಹೊತ್ತಿಗೆ ಈಶ್ವರಪ್ಪನವರ ಜತೆಗೆ ಗುರುತಿಸಿಕೊಂಡಿದ್ದ ಮೂಲ ಬಿಜೆಪಿಗರು ತಮ್ಮದೇ ಒಂದು ವೇದಿಕೆ ರಚಿಸಿ, ಯಡಿಯೂರಪ್ಪನವರ ವಿರುದ್ಧ ಸಮರವನ್ನೂ ಸಾರಿದರು. ಈಶ್ವರಪ್ಪ–ಯಡಿಯೂರಪ್ಪ ಬಣದ ಮಧ್ಯೆ ಯುದ್ಧದ ವಾತಾವರಣ ನಿರ್ಮಾಣವಾಗಿ, ಬಿಜೆಪಿ ದುರ್ಬಲವಾಗತೊಡಗಿತ್ತು.

2018ರ ಚುನಾವಣೆ ಸಮೀಪಿಸುವ ಹೊತ್ತಿಗೆ ಎಚ್ಚೆತ್ತುಕೊಂಡ ಬಿಜೆಪಿಯ ಅಂದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡು, ಒಂದಾಗಿ ಹೋಗುವಂತೆ ಇಬ್ಬರಿಗೂ ತಾಕೀತು ಮಾಡಿದರು. ರಾಯಣ್ಣ ಬ್ರಿಗೇಡ್ ಬಾಗಿಲು ಹಾಕುವಂತೆ ಈಶ್ವರಪ್ಪಗೆ ಸೂಚಿಸಿದರು. 2018ರಲ್ಲಿ ಇಬ್ಬರೂ ಜತೆ ಸೇರಿಯೇ ಚುನಾವಣೆ ಎದುರಿಸಿದರು. ಆದರೆ, ಪಕ್ಷ ಅಧಿಕಾರಕ್ಕೆ ಬರಲಿಲ್ಲ.

ಪಕ್ಷ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯುವ ಹೊತ್ತಿಗೆ ಮತ್ತೆ ಈಶ್ವರಪ್ಪ ಮತ್ತೆ ಬಂಡಾಯ ಸಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT