ಗುರುವಾರ , ಸೆಪ್ಟೆಂಬರ್ 23, 2021
24 °C
ಈಶ್ವರಪ್ಪ ಅವರಿಗೆ ಹುಚ್ಚು ಹಿಡಿದಿದೆ ಎಂದ ಹರಿಪ್ರಸಾದ್ l ಸಚಿವ ಸಂಪುಟದಿಂದ ಉಚ್ಚಾಟಿಸಲು ಆಗ್ರಹ

ಈಶ್ವರಪ್ಪ ಅವಾಚ್ಯ ಪದ ಬಳಕೆ: ತಿರುಗಿಬಿದ್ದ ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜೋಕರ್ ಎಂದು ಈಶ್ವರಪ್ಪ ಹೆಸರು ಬದಲಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌
ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವಾಚ್ಯ ಪದ ಬಳಸಿದ್ದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಾತಿನ ಭರದಲ್ಲಿ ಅವಾಚ್ಯ ಶಬ್ದ ಬಳಸಿದ ಈಶ್ವರಪ್ಪ ತಕ್ಷಣ ಎಚ್ಚೆತ್ತುಕೊಂಡು, ‘ಕೋಪದಲ್ಲಿ ಈ ಮಾತು ಬಂತು. ಆ ಮಾತು ವಾಪಸ್ ಪಡೆಯುತ್ತೇನೆ. ದಯವಿಟ್ಟು ಅದನ್ನು ಮುಂದುವರೆಸುವುದು ಬೇಡ’ ಎಂದು ಮಾಧ್ಯಮ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು.

ಹರಿಪ್ರಸಾದ್‌ ಹೇಳಿದ್ದೇನು: ‘ಸಚಿವ ಕೆ.ಎಸ್‌. ಈಶ್ವರಪ್ಪ ತಮ್ಮ ಹೆಸರನ್ನು ಮೇರಾ ನಾಮ್ ಜೋಕರ್ ಎಂದು ಬದಲಾಯಿಸಿಕೊಳ್ಳಲಿ. ದ್ವೇಷದ ಭಾಷಣ ಮಾಡುವುದು ಅವರ ತಪ್ಪಲ್ಲ. ಅವರು ಕಲಿತ ನಾಗಪುರ ಯುನಿವರ್ಸಿಟಿ ಹೇಳಿಕೊಟ್ಟ ಪಾಠ’ ಎಂದು ಬಿ.ಕೆ. ಹರಿಪ್ರಸಾದ್‌ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ಉಪ ಮುಖ್ಯಮಂತ್ರಿ ಆಗಬೇಕೆಂದು ಈಶ್ವರಪ್ಪ ಹಲವು ಕಾರ್ಯಾಚರಣೆ ನಡೆಸಿದ್ದರು. ಉಪ ಮುಖ್ಯಮಂತ್ರಿ ಆಗದೇ ಇರುವುದರಿಂದ ಅವರಿಗೆ ಹುಚ್ಚು ಹಿಡಿದಿದೆ. ಪ್ರಚೋದನಕಾರಿ ಭಾಷಣ ಮಾಡಿದ ಈಶ್ವರಪ್ಪ ವಿರುದ್ಧ ತಕ್ಷಣ ಪೊಲೀಸರು ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಬೇಕು. ಸಚಿವ ಸಂಪುಟದಿಂದ ಅವರನ್ನು ಉಚ್ಚಾಟಿಸಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ಸಂಸ್ಕೃತಿಯ ಪ್ರತಿಬಿಂಬ: ‘ಈಶ್ವರಪ್ಪ ಅವರ ಅವಾಚ್ಯ ನುಡಿಗಳು ಬಿಜೆಪಿಯ ನೀಚ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಅವರ ಹೇಳಿಕೆಗೆ ಮುಖ್ಯಮಂತ್ರಿಯಿಂದ ಉತ್ತರ ಎದುರು ನೋಡುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

‘ಈಶ್ವರಪ್ಪ ಅವರ ನಾಲಿಗೆ ಅವರ ಆಚಾರ ತೋರಿಸುತ್ತದೆ. ಬಿಜೆಪಿ ನಾಯಕರ ತಂದೆ ತಾಯಂದಿರು ಇಂಥ ಸಂಸ್ಕೃತಿ ಕಲಿಸಿದ್ದಾರೆ. ಇಂಥ ಭಾಷೆ ಬಳಸುವವರನ್ನು ಪಕ್ಷದಿಂದ ಕಿತ್ತುಹಾಕಬೇಕು. ಬಿಜೆಪಿಗೆ ನಾಚಿಕೆಗೇಡಿನ ಸಂಗತಿ, ಬಿಜೆಪಿಗೇ ಒಂದು ಕಳಂಕ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು