ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿಯ 1200 ಕೋಟಿ ಕಾಮಗಾರಿ ತಾಜ್‌ವೆಸ್ಟ್‌ಎಂಡ್‌ನದ್ದ?: ಎಚ್‌ಡಿಕೆ ಸರಣಿ ಟ್ವೀಟ್

Last Updated 19 ಡಿಸೆಂಬರ್ 2020, 7:29 IST
ಅಕ್ಷರ ಗಾತ್ರ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉರುಳಲು ಕುಮಾರಸ್ವಾಮಿಯೇ ಕಾರಣ. ಅವರು ಶಾಸಕರಿಗೆ ಸಿಗುತ್ತಿರಲಿಲ್ಲ. ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು ಎಂದು ನಿನ್ನೆ ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಚಾಮುಂಡೇಶ್ವರಿ ಸೋಲಿನ ಕುರಿತ ಆರೋಪ ಸೇರಿದಂತೆ ಸಿದ್ದರಾಮಯ್ಯನವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯನವರೇ ಎಂದೂ ರಾಜಕೀಯ ಒಳಒಪ್ಪಂದದ ಬಗ್ಗೆ ಮಾತಾಡಬೇಡಿ. ತಾವು ರಾಜಕೀಯ ಒಳಒಪ್ಪಂದಗಳ ಜನಕ. ಅದು ಯಾವಾಗಲೂ ಸಾಬೀತಾಗಿದೆ ಎಂದು ಟ್ವೀಟ್‌ನಲ್ಲಿ ತಿರುಗೇಟು ನೀಡಿದ್ದಾರೆ..

37 ಸ್ಥಾನ ಗೆದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೆ ಎಂದಿರುವ ಕುಮಾರಸ್ವಾಮಿ ಇನ್ನೆಂದು ಜೆಡಿಎಸ್‌ನ ಸ್ಥಾನ ಗಳಿಕೆ ಬಗ್ಗೆ ಲಘುವಾಗಿ ಮಾತಾಡಬೇಡಿ. ಸ್ವತಂತ್ರ ಪ್ರಾದೇಶಿಕ ಪಕ್ಷ ಕಟ್ಟಲು ಬೇಕಿರುವ ನಾಯಕತ್ವ, ಅದು ಬೇಡುವ ಶ್ರಮದ ಬಗ್ಗೆ ನಿಮಗೆ ಅರಿವಿಲ್ಲ. ನಿಮಗೆ ಅದು ಸಾಧ್ಯವೂ ಇಲ್ಲ ಎಂದು ಕುಟುಕಿದ್ದಾರೆ.

ಇದರ ಜೊತೆಗೆ ಮುಖ್ಯಮಂತ್ರಿಯಾಗಿ ಕಚೇರಿಗೆ ಬರದೆ ತಾಜ್ ವೆಸ್ಡೆಂಡ್ ಹೋಟೆಲಿನಲ್ಲಿದ್ದೆ ಎಂಬ ಮಾಜಿ ಸಿಎಂ ಆರೋಪಕ್ಕೆ ಪ್ರತಿಕ್ರಿಯಿಸಿರುವ ಎಚ್‌ಡಿಕೆ, ಸಿಎಂ ಸ್ಥಾನದಿಂದ ಇಳಿದ ನಂತರ ಸಿದ್ದರಾಮಯ್ಯ ಸರ್ಕಾರಿ ನಿವಾಸ ತೊರೆಯಲಿಲ್ಲ. ಆ ವಿಚಾರದಲ್ಲಿ ಕಿಂಚಿತ್ತೂ ನಾಚಿಕೆ ಪ್ರದರ್ಶಿಸಲಿಲ್ಲ. ತಾವು ಸಿಎಂ ಆಗಿದ್ದಾಗ 6 ಗಂಟೆಗೆ ಹೇಳದೇ ಕೇಳದೇ ಕಚೇರಿ ತೊರೆದು ಅಜ್ಞಾತರಾಗುತ್ತಿದ್ದ ಸಿದ್ದರಾಮಯ್ಯ, ರಾತ್ರಿ 12 ಗಂಟೆ ವರೆಗೆ ಕಚೇರಿಯಲ್ಲಿ ದುಡಿಯುತ್ತಿದ್ದ ನನ್ನ ಬಗ್ಗೆ ಮಾತನಾಡುವ ನೈತಿಕತೆ ಉಳ್ಳವರೇ? ಎಂದು ವಾಗ್ದಾಳಿ ನಡೆಸಿದ್ದಾರೆ

ಅಹೋರಾತ್ರಿ ಜನತಾ ದರ್ಶನ ತಾಜ್‌ವೆಸ್ಟ್‌ಎಂಡ್‌ನಲ್ಲಿ ನಡೆಯುತ್ತಿತ್ತೋ? ಸಿಎಂ ಕಚೇರಿಯಲ್ಲಿ ನಡೆಯುತ್ತಿತ್ತೋ ಸಿದ್ದರಾಮಯ್ಯನವರೇ? ಬಾದಾಮಿಯಲ್ಲಿ ಈಗ ನಡೆಯುತ್ತಿರುವ 1200 ಕೋಟಿ ಕಾಮಗಾರಿಗಳು ತಾಜ್‌ವೆಸ್ಟ್‌ಎಂಡ್‌ನದ್ದ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ಉಡಾಫೆ ಮಾತುಗಳಿಗೆ ಪ್ರತಿಕ್ರಿಯಿಸಬಾರದೆಂದು ಇಚ್ಚಿಸಿದ್ದೆ. ಆದರೆ, ಚಾಮುಂಡೇಶ್ವರಿಯಲ್ಲಿನ ಭಾಷಣದಿಂದ ಹೊಮ್ಮಿರುವ ಅವರ ದ್ವಂದ್ವ ನಿಲುವಿನ ಬಗ್ಗೆ ಮಾತಾಡಬೇಕಿದೆ. ಅಲ್ಲಿ ಅವರು ಏನಾದರೂ ಹೇಳಿರಲಿ. ಅದರೆ, ಒಳಒಪ್ಪಂದದ ಆರೋಪ, ಕುಮಾರಸ್ವಾಮಿಯನ್ನು ಸಿಎಂ ಆಗಲು ಬಿಡುತ್ತಿರಲಿಲ್ಲ ಎಂ‌ದು ಹೇಳಿದ್ದಾರೆ. 2018ರಲ್ಲಿ ಮೈತ್ರಿಯಾಗಿದ್ದು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು ಹೈಕಮಾಂಡ್‌ನ ನಿರ್ಧಾರವಾಗಿತ್ತು ಎಂದು ಸಿದ್ದರಾಮಯ್ಯ ಹಲವು ಬಾರಿ ಹೇಳಿದ್ದಾರೆ. ಆದರೆ, ಚಾಮುಂಡೇಶ್ವರಿ ಭಾಷಣದ ವೇಳೆ, ನಾನು ಒಪ್ಪದೇ ಹೋಗಿದ್ದಿದ್ದರೆ ಕುಮಾರಸ್ವಾಮಿ ಅವರನ್ನು ಸಿಎಂ ಆಗಲು ಬಿಡುತ್ತಿರಲಿಲ್ಲ ಎಂದಿದ್ದಾರೆ. ಇಲ್ಲಿ ದ್ವಂದ್ವ ಇಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮೈತ್ರಿ ಸರ್ಕಾರ ರಚನೆಯಾಗಿ ಕೆಲವೇ ತಿಂಗಳಲ್ಲಿ ಸಿದ್ದವನದಲ್ಲಿ ಕುಳಿತು ಸರ್ಕಾರ ಬೀಳಿಸುವ ಚರ್ಚೆ ನಡೆಸಿದವರು ಸಿದ್ದರಾಮಯ್ಯ ಅಲ್ಲವೇ? ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ ಶಾಸಕರಲ್ಲಿ ಬಹುತೇಕರು ಅವರ ಬೆಂಬಲಿಗರಾಗಿರಲಿಲ್ಲವೇ? ಆದರೂ, ಸರ್ಕಾರ ಬೀಳಿಸಿದ್ದರ ಅಪವಾದದಿಂದ ಪಾರಾಗಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಇದು ಅವರ ಕಪಟ ನೀತಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT