ಸೋಮವಾರ, ಡಿಸೆಂಬರ್ 6, 2021
27 °C

ಸಿಎಂ ಪುತ್ರ ವಿಜಯೇಂದ್ರ ಹೆಸರಲ್ಲಿ ನಕಲಿ ಟ್ವಿಟರ್‌ ಖಾತೆ: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಅವರ ವಿರುದ್ಧ ತಪ್ಪು ಸಂದೇಶ ರವಾನಿಸಲಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ವಿಜಯೇಂದ್ರ, ‘ದುರುದ್ದೇಶದಿಂದ ಟ್ವಿಟ್ಟರ್‌ನಲ್ಲಿ ನನ್ನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಸುಳ್ಳು ಮಾಹಿತಿ, ತಪ್ಪು ಸಂದೇಶ ರವಾನಿಸುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಇದರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದೆ. ಇಂತಹ ಕೀಳು ಪ್ರಯತ್ನಗಳ ವಿರುದ್ಧ ಎಲ್ಲರೂ ಎಚ್ಚರಿಕೆಯಿಂದಿರಬೇಕು’ ಎಂದು ಬರೆದುಕೊಂಡಿದ್ದಾರೆ. 

ಡ್ರಗ್ಸ್‌ ಬಗ್ಗೆ ಎಚ್ಚರ: ಸಮಾಜಕ್ಕೆ ಮಾರಕವಾದ, ನಮ್ಮ ಯುವಜನತೆ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮಾದಕ ವ್ಯಸನದ ಕರಿನೆರಳು ಕನ್ನಡ ಚಿತ್ರರಂಗವನ್ನೂ ಆವರಿಸಿಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿರುವುದು ದುರ್ದೈವದ ಸಂಗತಿ. ಈ ಹೆಮ್ಮಾರಿ ಡ್ರಗ್ ಪಿಡುಗು ವಿದ್ಯಾಸಂಸ್ಥೆಗಳಿಗೂ ತನ್ನ ಕೆನ್ನಾಲಿಗೆ ಚಾಚಿನಿಂತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ. 

‘ನಮ್ಮ ಯುವಶಕ್ತಿಯನ್ನು ನಿಷ್ಕ್ರಿಯಗೊಳಿಸುವ ದೇಶವಿರೋಧಿ ಷಡ್ಯಂತ್ರ, ರಾಜ್ಯಕ್ಕೆ ಕಪ್ಪುಮಸಿ ಬಳಿಯುವ ಹುನ್ನಾರ ಈ ಮಾಫಿಯಾ ಹಿಂದಿರುವ ಸಾಧ್ಯತೆಯಿದೆ. ಘಾತುಕ ಶಕ್ತಿಗಳನ್ನು ಪತ್ತೆಹಚ್ಚಿ, ಡ್ರಗ್ ವ್ಯೂಹ ಭೇದಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಈ ಪಿಡುಗನ್ನು ಬೇರುಸಮೇತ ಕಿತ್ತೊಗೆಯಲು ಜಾಗೃತ ನಾಗರಿಕರು ಪೋಲಿಸರೊಂದಿಗೆ ಕೈಜೋಡಿಸಬೇಕಿದೆ’ ಎಂದು ಮನವಿ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು