ಶನಿವಾರ, ಫೆಬ್ರವರಿ 27, 2021
30 °C
ಕರ್ನಾಟಕವನ್ನು ಶಾಶ್ವತ ಸಾಲಗಾರ ರಾಜ್ಯವನ್ನಾಗಿ ಮಾಡಲು ಬಿಜೆಪಿ ಹೊರಟಿದೆ– ಟೀಕೆ

ಸುಳ್ಳು ಅಂಕಿಅಂಶ ಮುಂದಿಟ್ಟ ಶಾ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯುಪಿಎಗಿಂತ ತಮ್ಮ ಸರ್ಕಾರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಿರುವುದಾಗಿ ಸುಳ್ಳು ಮಾಹಿತಿ ಮುಂದಿಟ್ಟಿದ್ದಾರೆ’ ಎಂದು ಟೀಕಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹೊಸ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ.

‘ಕರ್ನಾಟಕ ಪ್ರತಿವರ್ಷ ಅಂದಾಜು ₹ 2.20 ಸಾವಿರ ಕೋಟಿ ತೆರಿಗೆ-ಸುಂಕ ಮೂಲಕ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಈ ಹಣದಲ್ಲಿ ಶೇ 42ರಷ್ಟನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಹಿಂದಿರುಗಿಸಬೇಕು. ಆದರೆ, ಬಿಜೆಪಿ ಆಡಳಿತದ ಕಾಲದಲ್ಲಿ ಎಂದೂ ಶೇ 42ರಷ್ಟು ಪಾಲು ಸಿಕ್ಕಿಲ್ಲ’ ಎಂದು ಅವರು ಹೇಳಿದ್ದಾರೆ.

‘ಯುಪಿಎ ಅವಧಿಯಲ್ಲಿ (2010–14) ಹಣಕಾಸು ಆಯೋಗ ಕರ್ನಾಟಕಕ್ಕೆ ತೆರಿಗೆಗಳ ಪಾಲು ₹ 45,713 ಕೋಟಿ ನಿಗದಿಪಡಿಸಿತ್ತು. ನಾವು ಪಡೆದದ್ದು ₹ 47,036 ಕೋಟಿ. ಇದು ₹ 1.323 ಕೋಟಿ (ಶೇ 2.9ರಷ್ಟು) ಹೆಚ್ಚು. ಎನ್‌ಡಿಎ ಅವಧಿಯಲ್ಲಿ (2014–20) 13 ಮತ್ತು 14ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನಿಗದಿಪಡಿಸಿದ್ದ ತೆರಿಗೆ ಪಾಲು ₹ 2,03,039 ಕೋಟಿ, ಸಿಕ್ಕಿದ್ದು ಕೇವಲ ₹ 1,65 963 ಕೋಟಿ (ಶೇ 18.2ರಷ್ಟು)’ ಎಂದಿದ್ದಾರೆ.

‘ರಾಜ್ಯ ಬಜೆಟ್ ಪ್ರಕಾರ 2010-21ನೇ ಹಣಕಾಸು ವರ್ಷದಲ್ಲಿ ನಿರೀಕ್ಷಿತ ತೆರಿಗೆ ಪಾಲು ₹ 28,591 ಕೋಟಿ. ಪ್ರಸಕ್ತ ವರ್ಷ ₹ 15,017 ಕೋಟಿಗೆ ಇಳಿದರೂ ಅಚ್ಚರಿ ಇಲ್ಲ. ಹೀಗಾದರೆ, 2019-20ರಲ್ಲಿ ನಿರೀಕ್ಷೆಗಿಂತ ₹ 33,751 ಕೋಟಿ ಇಲ್ಲವೇ ರಾಜ್ಯ ಬಜೆಟ್ ಅಂದಾಜಿಗಿಂತ ₹ 24,789 ಕೋಟಿಯಷ್ಟು ಕಡಿಮೆಯಾಗುತ್ತದೆ. ಜಿಎಸ್‌ಟಿ ಪರಿಹಾರದಲ್ಲಿಯೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಜಿಎಸ್‌ಟಿ ಪರಿಹಾರದಲ್ಲಿ ಅಂದಾಜು ₹ 27 ಸಾವಿರ ಕೋಟಿ ಖೋತಾ ಆಗಬಹುದು. ಕೇಂದ್ರ ಸರ್ಕಾರ ಇತ್ತೀಚೆಗೆ ₹ 19 ಸಾವಿರ ಕೋಟಿಯಷ್ಟೇ ಪರಿಹಾರ ನೀಡುವುದಾಗಿ ಹೇಳಿದೆ’ ಎಂದಿದ್ದಾರೆ.

‘ರಾಜ್ಯಕ್ಕೆ ಕೇಂದ್ರ ನೀಡಲಿರುವ ಅನುದಾನ ₹ 31,570 ಕೋಟಿ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ಇದು ₹ 17,372 ಕೋಟಿ ಆಗಬಹುದು. ಇದರಿಂದ ₹ 14,198 ಕೋಟಿ ಖೋತಾ ಆಗಲಿದೆ’ ಎಂದೂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

‘ಆರ್ಥಿಕ ಸಂಕಷ್ಟದಲ್ಲಿರುವ ಕರ್ನಾಟಕಕ್ಕೆ ವಿಶೇಷ ಅನುದಾನದವಾಗಿ ₹ 5,495 ಕೋಟಿ ನೀಡಬೇಕೆಂದು ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಇದಕ್ಕೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಡ್ಡಗಾಲು ಹಾಕಿದ್ದಾರೆ. ಈ ವರ್ಷ ಸುಮಾರು ₹ 90 ಸಾವಿರ ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಬಿಜೆಪಿ ಸರ್ಕಾರ ಕರ್ನಾಟಕವನ್ನು ಶಾಶ್ವತ ಸಾಲಗಾರ ರಾಜ್ಯವನ್ನಾಗಿ ಮಾಡಲು ಹೊರಟಿದೆ. ತಿರುಚಿದ ಅಂಕಿಅಂಶಗಳನ್ನು ಮುಂದಿಟ್ಟು ಆರೋಪ ಮಾಡುವ ಮೊದಲು ಶಾ ಮತ್ತೊಮ್ಮೆ ತಮ್ಮ ಹೋಂ ವರ್ಕ್ ಸರಿಯಾಗಿ ಮಾಡಿಕೊಂಡು ಬರಲಿ’ ಎಂದೂ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು