ಸೋಮವಾರ, ಮೇ 23, 2022
30 °C
ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದವರ ಪೈಕಿ ಕುಟುಂಬದವರೇ ಹೆಚ್ಚು

ಕುಟುಂಬದ ‘ಆಸ್ತಿ’ಯಾದ ಮೇಲ್ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಂದು ಕಾಲದಲ್ಲಿ ರಾಜಕೀಯ ಮುತ್ಸದ್ದಿಗಳು, ವಿವಿಧ ಕ್ಷೇತ್ರದ ಪ್ರಾಜ್ಞರು, ಪ್ರಾತಿನಿಧ್ಯವನ್ನೇ ಕಾಣದ ತಳಸಮುದಾಯದವರಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ವೇದಿಕೆ ಕಲ್ಪಿಸಿದ್ದ ಮೇಲ್ಮನೆ ಈಗ ಕುಟುಂಬದವರ ಆಸ್ತಿಯಾಗುವತ್ತ ಹೆಜ್ಜೆ ಇಟ್ಟಿದೆ.

ಬಿಜೆಪಿ, ಕಾಂಗ್ರೆಸ್‌ ಭೇದವೆಣಿಸಿದೇ ಎಲ್ಲರೂ ಕುಟುಂಬದವರನ್ನೇ ಗೆಲ್ಲಿಸಲು ಪಣತೊಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ಸದಸ್ಯರ ಪೈಕಿ ಕುಟುಂಬದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

* ದೇವೇಗೌಡರ ಕುಟುಂಬದ ಸೂರಜ್‌ ರೇವಣ್ಣ

* ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ, ಬಿಜೆಪಿಯ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸದಸ್ಯರಾಗಿದ್ದರೆ, ಮತ್ತೊಬ್ಬ ತಮ್ಮ ಲಖನ್ ಜಾರಕಿಹೊಳಿ ಈಗ ಮೇಲ್ಮನೆ ಪ್ರವೇಶಿಸಿದ್ದಾರೆ.

* ಬಿಜೆಪಿ ಶಾಸಕ ಜಗದೀಶ ಶೆಟ್ಟರ್‌ ತಮ್ಮ ಪ್ರದೀಪ ಶೆಟ್ಟರ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.

* ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ತಮ್ಮ ಸುನಿಲ್ ಸುಬ್ರಮಣಿ ಸದ್ಯ ಮೇಲ್ಮನೆಯ ಸದಸ್ಯರಾಗಿದ್ದರೆ, ಈ ಬಾರಿ ಅವರ ಬದಲು ಮತ್ತೊಬ್ಬ ತಮ್ಮ ಸುಜಾ ಕುಶಾಲಪ್ಪ ಮೇಲ್ಮನೆಗೆ ಬಂದಿದ್ದಾರೆ.

* ಡಿ.ಕೆ. ಶಿವಕುಮಾರ್ ತಮ್ಮ ಸೋದರ ಸಂಬಂಧಿ ಎಸ್‌.ರವಿಯನ್ನು ಗೆಲ್ಲಿಸಿಕೊಂಡಿದ್ದಾರೆ.

* ಕಾಂಗ್ರೆಸ್‌ ಶಾಸಕ ಎಂ.ಬಿ. ಪಾಟೀಲರ ತಮ್ಮ ಸುನೀಲ್‌ಗೌಡ ‍ಪಾಟೀಲ ಮತ್ತೊಮ್ಮೆ ಚುನಾಯಿತರಾಗಿದ್ದಾರೆ.

* ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಅವರ ತಮ್ಮನ ಮಗ ಶರಣಗೌಡ ಪಾಟೀಲ ಬಯ್ಯಾಪುರ ಕೊಪ್ಪಳದಿಂದ ಆಯ್ಕೆಯಾಗಿದ್ದಾರೆ.

* ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಅವರ ತಮ್ಮ ಚನ್ನರಾಜ ಹಟ್ಟಿಹೊಳಿ ಬೆಳಗಾವಿಯಿಂದ ಚುನಾಯಿತರಾಗಿದ್ದಾರೆ.

* ತುಮಕೂರಿನಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್. ರಾಜಣ್ಣ ಪುತ್ರ ಆರ್. ರಾಜೇಂದ್ರ ಗೆದ್ದಿದ್ದಾರೆ.

* ವಿಧಾನಪರಿಷತ್ತನ್ನು ಬಹುಕಾಲ ಪ್ರತಿನಿಧಿಸಿ, ಸಭಾಪತಿಯಾಗಿದ್ದ ಡಿ.ಎಚ್. ಶಂಕರಮೂರ್ತಿ ಮಗ ಡಿ.ಎಸ್. ಅರುಣ್ ಶಿವಮೊಗ್ಗದಿಂದ ವಿಜೇತರಾಗಿದ್ದಾರೆ.

* ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಅವರ ಹತ್ತಿರದ ಸಂಬಂಧಿ ಉಪಸಭಾಪತಿಯಾಗಿರುವ ಎಂ.ಕೆ. ಪ್ರಾಣೇಶ್‌ ಪುನರಾಯ್ಕೆಯಾಗಿದ್ದಾರೆ.

ಆಪ್ತ ಸಹಾಯಕನಿಗೆ ಒಲಿದ ‘ಅದೃಷ್ಟ’
ಸಚಿವರು, ಶಾಸಕರಿಗೆ ಆಪ್ತಸಹಾಯಕರಾಗಿ ಕೆಲಸ ಮಾಡಿದ ದಿನೇಶ್ ಗೂಳಿಗೌಡ ಅವರಿಗೆ ಈ ಬಾರಿ ‘ಅದೃಷ್ಟ’ ಒಲಿದು ಬಂದಿದೆ.

ಮೇಲ್ಮನೆ ಚುನಾವಣೆ ಘೋಷಣೆಯಾಗುವವರೆಗೂ ಸಹಕಾರ ಸಚಿವ ಎಸ್.ಟಿ. ಸೋಮೇಶೇಖರ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ದಿನೇಶ್‌, ಹುದ್ದೆಗೆ ದಿಢೀರ್‌ ರಾಜೀನಾಮೆ ಕೊಟ್ಟು ರಾತ್ರೋರಾತ್ರಿ ಕಾಂಗ್ರೆಸ್ ಸೇರಿ ಮಂಡ್ಯದಲ್ಲಿ ಅಭ್ಯರ್ಥಿಯೂ ಆದರು. ಚುನಾವಣೆಯಲ್ಲಿ ಗೆದ್ದ ದಿನೇಶ್ ಮೇಲ್ಮನೆ ಪ್ರವೇಶಿಸಿದ್ದಾರೆ. ಕೆಪಿಸಿಸಿಯ ಮಾಧ್ಯಮ ವಿಭಾಗದಲ್ಲಿ ಅನೇಕ ವರ್ಷ ಕೆಲಸ ಮಾಡಿದ್ದ ದಿನೇಶ್, ಜಿ.ಪರಮೇಶ್ವರ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ವಿಶೇಷ ಕರ್ತವ್ಯಾಧಿಕಾರಿಯಾಗಿಯೂ ಕೆಲಸ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು