ಭಾನುವಾರ, ಅಕ್ಟೋಬರ್ 25, 2020
28 °C
ಪರಿಹಾರ ನಿಗದಿ ಕ್ರಮ ಅವೈಜ್ಞಾನಿಕ: ರೈತರ ಆಕ್ರೋಶ

ಭೂಸ್ವಾಧೀನ: ಶ್ರೀಗಂಧಕ್ಕೆ ₹283 ಪರಿಹಾರ !

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ ಭೂಸ್ವಾಧೀನದ ವೇಳೆಯಲ್ಲಿ ಸಪೋಟ ಮರಕ್ಕೆ ₹17,533, ಹಲಸಿನ ಮರಕ್ಕೆ ₹17,587 ಪರಿಹಾರ ಕೊಟ್ಟರೆ, ಐದು ವರ್ಷ ದಾಟಿದ ಶ್ರೀಗಂಧ ಮರಕ್ಕೆ ಸಿಗುವ ಪರಿಹಾರ ₹283 ಮಾತ್ರ!

‘ಶ್ರೀಗಂಧದ ಮರಕ್ಕೆ ಅರಣ್ಯ ಇಲಾಖೆ ನಿಗದಿ ಮಾಡಿರುವ ಪರಿಹಾರದ ಮೊತ್ತ ಅವೈಜ್ಞಾನಿಕ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ’ ಎಂದು ರೈತರು ದೂರಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ನೀರಾವರಿ ಯೋಜನೆಗಳ ಕಾಮಗಾರಿಗೆ ಭೂಸ್ವಾಧೀನದ ವೇಳೆಯಲ್ಲಿ ರೈತರಿಗೆ ಪರಿಹಾರ ನೀಡುವಾಗ ತಾರತಮ್ಯ ಮಾಡಲಾಗುತ್ತಿದೆ ಎಂದು ರೈತ ಸಂಘಟನೆಗಳೂ ಆಕ್ಷೇಪ ವ್ಯಕ್ತಪಡಿಸಿವೆ.

ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ತಗಲುವ ವೆಚ್ಚ, ಆದಾಯ ಮತ್ತಿತರ ಅಂಶಗಳನ್ನು ಲೆಕ್ಕಾಚಾರ ಮಾಡಿ ಮೌಲ್ಯ
ಮಾಪನ ದರ ನಿಗದಿಪಡಿಸಿ ತೋಟಗಾರಿಕಾ ಇಲಾಖೆ 2019ರ ಡಿಸೆಂಬರ್‌ನಲ್ಲಿ ಆದೇಶಿಸಿದೆ. ಹಾಸನ– ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ರೈತರಿಗೆ ಈ ಮಾನದಂಡದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಹಾರ ನೀಡಿದೆ.

ಈ ನಡುವೆ, ಶ್ರೀಗಂಧ ಮರಗಳಿಗೆ ಪರಿಹಾರ ನಿಗದಿ ಮಾಡುವ ಸಂಬಂಧ ಅರಣ್ಯ ಇಲಾಖೆಯು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ನೇತೃತ್ವದಲ್ಲಿ ಸಮಿತಿ ರಚಿಸಿತು. ಈ ಸಮಿತಿಯು 2020ರ ಜನವರಿ 21
ರಂದು ಸಭೆ ಸೇರಿ ಸಮಾಲೋಚನೆ ನಡೆಸಿತು.

‘ಒಂದು ಹೆಕ್ಟೇರ್‌ನಲ್ಲಿ ಐದು ವರ್ಷಗಳಲ್ಲಿ 200 ಶ್ರೀಗಂಧದ ಮರಗಳನ್ನು ಬೆಳೆಸಲು ₹51,290 ವೆಚ್ಚ ಆಗುತ್ತದೆ. ಆ ಪ್ರಕಾರ, ಪ್ರತಿ ಸಸಿಗೆ ₹256 ಖರ್ಚು ಆಗುತ್ತದೆ. ಶೇ 10ರಷ್ಟು ಪ್ರೋತ್ಸಾಹಧನ ಸೇರಿಸಿದರೆ ₹283 ಆಗುತ್ತದೆ’ ಎಂದು ಶಿಫಾರಸು ಮಾಡಿದೆ. ಎಲ್ಲ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಜೂನ್‌ 6ರಂದು ಪತ್ರ ಬರೆದಿರುವ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ₹283 ಪರಿಹಾರ ನೀಡಬಹುದು ಎಂದು ಸೂಚಿಸಿದ್ದಾರೆ. 

ತೀರಾ ಕಡಿಮೆ ಪ್ರಮಾಣದ ಪರಿಹಾರ ಮೊತ್ತ ನಿಗದಿ ಮಾಡಲಾಗಿದೆ ಎಂದು ಆಕ್ಷೇಪಿಸಿ ತರೀಕೆರೆಯ ಶ್ರೀಗಂಧ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎನ್‌.ವಿಶುಕುಮಾರ್ ಅವರು ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರಿಗೆ ಜೂನ್‌ನಲ್ಲಿ ಪತ್ರ ಬರೆದಿದ್ದರು. ಈ ಬಗ್ಗೆ ಚರ್ಚಿಸಲು ಸಂತ್ರಸ್ತ ರೈತರೊಂದಿಗೆ ಸಭೆ ನಿಗದಿ ಮಾಡಿ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಆನಂದ್‌ ಸಿಂಗ್ ಜೂನ್‌ 9ರಂದು ಸೂಚಿಸಿದ್ದರು.

‘ಮೂರು ತಿಂಗಳು ಕಳೆದರೂ ಸಭೆ ನಿಗದಿ ಮಾಡಿಲ್ಲ. ಈ ಮೂಲಕ ರೈತರಿಗೆ ಅವಮಾನ ಮಾಡಿದ್ದಾರೆ’ ಎಂದು ಕೃಷಿ ಅರಣ್ಯ ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಫೆಡರೇಷನ್‌ನ ಸಂಚಾಲಕ ಲಕ್ಷ್ಮಿನಾರಾಯಣ ಶಾಂತಿಗ್ರಾಮ ದೂರಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು