ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ. 7ರ ನಂತರವೂ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ: ಸಿಎಂ ಜೊತೆ ಚರ್ಚಿಸಿ ತೀರ್ಮಾನ

ಚಿತ್ರ ನಿರ್ಮಾಪಕರಿಗೆ ಆರೋಗ್ಯ ಸಚಿವ ಡಾ. ಸುಧಾಕರ್‌ ಭರವಸೆ
Last Updated 6 ಏಪ್ರಿಲ್ 2021, 6:29 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿತ್ರಮಂದಿರಗಳಲ್ಲಿ ಏ. 7ರ ನಂತರವೂ ಶೇ 100ರಷ್ಟು ಪ್ರೇಕ್ಷಕರಿಗೆ (ಆಸನಗಳ ಭರ್ತಿ) ಅವಕಾಶ ನೀಡಬೇಕೆಂಬ ಚಿತ್ರ ನಿರ್ಮಾಪಕರ ಸಂಘದ ಬೇಡಿಕೆಯ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

ಸಚಿವರನ್ನು ಸದಾಶಿವನಗರದಲ್ಲಿರುವ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿದ ಚಿತ್ರ ನಿರ್ಮಾಪಕ ಸಂಘದ ಸದಸ್ಯರು, ‘ಏ. 7ರವರೆಗೆ ಮಾತ್ರ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಚಿತ್ರ ನಿರ್ಮಾಪಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಆ ನಂತರವೂ ಪೂರ್ಣ ಪ್ರಮಾಣದಲ್ಲಿ ಆಸನಗಳ ಭರ್ತಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸುಧಾಕರ್‌, ‘ಚಿತ್ರಮಂದಿರಗಳಲ್ಲಿ ಮುಂಗಡ ಟಿಕೆಟ್‌ ಬುಕ್ಕಿಂಗ್ ಪಡೆಯಲಾಗಿರುತ್ತದೆ‌. ಬುಕ್ಕಿಂಗ್ ಹಣ ವಾಪಸು ಕೊಡಲೂ‌ ಆಗುವುದಿಲ್ಲ. ಹೀಗಾಗಿ, ಏ. 7ರವರೆಗೆ ಅವಕಾಶ ಕೊಡಿ ಎಂದು ಈ ಹಿಂದೆ ಚಿತ್ರ ನಿರ್ಮಾಪಕರು ಒತ್ತಾಯಿಸಿದ್ದರು. ಅದಕ್ಕೆ ಮುಖ್ಯಮಂತ್ರಿ ಒಪ್ಪಿದ್ದರು. ಇದೀಗ 7ರ ನಂತರವೂ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಿ ತಿಳಿಸುತ್ತೇನೆ. ಮದುವೆ, ಛತ್ರ, ಸಭಾಂಗಣ ಸೇರಿ ಅನೇಕ ಕಡೆ ನಿರ್ಬಂಧ ಇದೆ. ತಾಂತ್ರಿಕ‌ ಸಲಹಾ ಸಮಿತಿಯ ಸಲಹೆ ಪಡೆಯುತ್ತೇವೆ. ಬಳಿಕ ಸಿನಿಮಾ ಮಂದಿರಗಳಲ್ಲಿ ಅವಕಾಶ ನೀಡಬೇಕೇ ಎಂಬ ಬಗ್ಗೆ ತೀರ್ಮಾನಿಸುತ್ತೇವೆ’ ಎಂದರು.

ಚಿತ್ರ ನಿರ್ಮಾಪಕರ ಸಂಘದ ಕಾರ್ಯದರ್ಶಿ ಕೆ. ಮಂಜು ಮಾತನಾಡಿ, ‘ಚಿತ್ರಮಂದಿರಗಳು ಯಾವಾಗಲೂ ಭರ್ತಿ ಇರುವುದಿಲ್ಲ. ಮೊದಲ ದಿನ ಪ್ರೇಕ್ಷಕರು ಫುಲ್‌ ಬರಬಹುದು. ನಂತರ ಥಿಯೇಟರ್‌ಗಳಲ್ಲಿ ಶೇ 40ರಿಂದ 50ರಷ್ಟು ಮಾತ್ರ ಇರುತ್ತಾರೆ. ಹೀಗಾಗಿ, ಶೇ 50 ಸೀಟುಗಳಿಗೆ ನಿರ್ಬಂಧ ಮಾಡಬೇಡಿ. ನೀವು ಖುದ್ದಾಗಿ ಸಿನಿಮಾ ಮಂದಿರಗಳಲ್ಲಿ ಬಂದು ನೋಡಿ. ಸಿನಿಮಾ‌ ಮಂದಿರದಲ್ಲಿ ಅಷ್ಟು ಜನರು ಇರುವುದಿಲ್ಲ’ ಎಂದು ಸಚಿವರಲ್ಲಿ ಮನವಿ ಮಾಡಿದರು. ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ಪದಾಧಿಕಾರಿಗಳಾದ ರಮೇಶ್ ಯಾದವ್, ರಾಮಮೂರ್ತಿ ಮತ್ತಿತರರು ಇದ್ದರು.

ಲಾಕ್‌ಡೌನ್, ಕರ್ಫ್ಯೂ ಬೇಡವೆಂದರೆ ಎಚ್ಚರಿಕೆಯಿಂದಿರಿ: ‘ರಾಜ್ಯದಲ್ಲಿ ಸೋಮವಾರದವರೆಗೆ (ಏ.5) ಒಟ್ಟು 48.50 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ನೀಡುವಲ್ಲಿ ಇಡೀ ದೇಶದಲ್ಲಿ ರಾಜ್ಯಕ್ಕೆ ಆರನೇ ಸ್ಥಾನವಿದೆ. ಕೇಂದ್ರ ಆರೋಗ್ಯ ಸಚಿವರು 15 ಲಕ್ಷ ಲಸಿಕೆ ಕಳುಹಿಸಿದ್ದಾರೆ. ಸೋಮವಾರ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ. ಇಡೀ ದೇಶದಲ್ಲಿ ಒಂದು ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಕರ್ನಾಟಕದಲ್ಲಿ 32 ಜನರು ಸಾವನ್ನಪ್ಪಿದ್ದಾರೆ. ಸಾವು ಪ್ರಕರಣಗಳ ನಿಖರ ಕಾರಣ ತಿಳಿಯಲು ಅಧ್ಯಯನ ಮಾಡಲು ಸೂಚಿಸಿದ್ದೇನೆ’ ಎಂದು ಸುಧಾಕರ್ ಹೇಳಿದರು.

‘ಸೋಮವಾರ 33 ಸಾವಿರ ಹಾಸಿಗೆ ಸಿದ್ಧ ಮಾಡಿದ್ದೇವೆ. ಅದರಲ್ಲಿ 10,083 ಆಕ್ಸಿನೇಟೇಡ್ ಬೆಡ್ ಇವೆ. ಕೋವಿಡ್‌ಗಾಗಿ ಹಾಸಿಗೆಗಳನ್ನು ಮೀಸಲಿಡಲಾಗುತ್ತದೆ. ಅನಗತ್ಯ ಗುಂಪುಗೂಡುವುದನ್ನು ಬಿಡಬೇಕು. ಜನರಲ್ಲಿ ಉದಾಸೀನ ಹೆಚ್ಚಾಗಿದೆ. ನಾವು ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದೇವೆ. ಜನರು ನಡವಳಿಕೆ ಸುಧಾರಣೆ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನ ಅಪಾಯ ಇದೆ. ಲಾಕ್‌ಡೌನ್ ಅಥವಾ ಕರ್ಫ್ಯೂ ಬೇಡ ಎಂದರೆ‌ ಜನರೇ‌ ಎಚ್ಚರಿಕೆಯಿಂದ ಇರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT