ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ ಮತ್ತು ಲಂಚ: ವೈರಲ್‌ ಆಗಿರೋದು ಪೊಲೀಸ್‌ ಕಾನ್‌ಸ್ಟೆಬಲ್‌ ಪೋಸ್ಟ್‌?

Last Updated 18 ಜುಲೈ 2021, 9:29 IST
ಅಕ್ಷರ ಗಾತ್ರ

ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರದ್ದುಎಂದು ಹೇಳಲಾಗುತ್ತಿರುವ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ತಮಗಿರುವ ಆರ್ಥಿಕ ತೊಂದರೆ, ಮದುವೆ ಮತ್ತು ಸಂಸಾರದ ಬಗೆಗಿನ ಸಂಕಷ್ಟಗಳನ್ನು ಹಂಚಿಕೊಂಡಿರುವ ಅವರು... 'ಆತ್ಮಹತ್ಯೆಯತ್ತ ಚಿತ್ತ ಹರಿಯುತ್ತಿದೆ' ಎಂಬ ನೋವಿನ ನುಡಿಗಳನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ ಏನಿದೆ ಎಂಬುದನ್ನುಓದಿ.

***

'ಪೋಲೀಸ್ ಸುರೇಂದ್ರನಾಥನೆಂಬ ನಾನು.. ಬಿ.ಎ. ಪದವೀಧರ. 28 ವರ್ಷ ವಯಸ್ಸು. 5 ವರ್ಷದಿಂದ ಕರ್ನಾಟಕ ಪೋಲೀಸ್ ಸೇವೆಯಲ್ಲಿ ಪೇದೆಯಾಗಿ ಆಗಿ ಕೆಲಸ ಮಾಡುತ್ತಿದ್ದೇನೆ. ಸುಮಾರು ₹ 23,000 ಸಂಬಳ ಬರುತ್ತದೆ.

ನನಗೆ ತಂದೆ ಇಲ್ಲ. ತಾಯಿ ಮತ್ತು ಬಿಇ ಎರಡನೇ ಸೆಮಿಸ್ಟರ್ ಓದುತ್ತಿರುವ ತಂಗಿ ಇದ್ದಾಳೆ. ನಗರದಲ್ಲಿ ಕೆಲಸವಿದೆ. ಆದರೆ, ನನ್ನ ವಾಸಿಸುತ್ತಿರುವುದು ನಗರದಿಂದ 25 ಕಿಲೋಮೀಟರ್ ದೂರ ಇರುವ ಬಾಡಿಗೆ ಮನೆಯಲ್ಲಿ. ಇದು ನನ್ನ ಬಗೆಗಿನ ಮಾಹಿತಿ.

ನನ್ನ ಮನಸ್ಸಿನ ಕೆಲವು ತೊಳಲಾಟಗಳನ್ನು ನಿಮ್ಮ ಮುಂದೆ ಹೇಳಬೇಕೆನಿಸಿದೆ. ಬಹುಶಃ ಮೊದಲ ಮತ್ತು ಕೊನೆಯ ಬಾರಿಗೆ.

ನಮ್ಮ ಮನೆ ಬಾಡಿಗೆ ₹ 5,000, ಬಸ್ ಪಾಸ್ ₹ 1,500, ವಿದ್ಯುತ್ /ಕೇಬಲ್ /ವಾಟರ್ ಬಿಲ್ ₹ 1,000 ರೂಪಾಯಿ, ಮನೆಯ ಊಟ ಮತ್ತು ಇತರೆ ಖರ್ಚಿಗೆ ₹ 6,000 ಆಗುತ್ತದೆ. ತಂಗಿಯನ್ನು ಬಿಇಗೆ ಸೇರಿಸುವಾಗ 2,00,000 ಚೀಟಿ ಹಾಕಿ ತೆಗೆದಿದ್ದೇನೆ. ಅದಕ್ಕೆ ತಿಂಗಳಿಗೆ ₹ 10,000 ಕಟ್ಟಬೇಕು. ಸಂಬಳ ಅಲ್ಲಿಗಲ್ಲಿಗೆ ಸರಿಹೋಗುತ್ತದೆ.

ತಂಗಿಯೆಂದರೆ ನನಗೆ ಪ್ರಾಣ. ಅವಳು ಆಗಾಗ ಡ್ರೆಸ್ಸು ಅದು ಇದು ಅಂತ ಖರ್ಚಿಗೆ ಸ್ವಲ್ಪ ಹಣ ತೆಗೆದುಕೊಳ್ಳುತ್ತಾಳೆ. ನಾನಂತೂ ಕೆಲಸಕ್ಕೆ ಸೇರಿದಾಗಿನಿಂದ ಸರ್ಕಾರ ಕೊಟ್ಟ ಯುನಿಫಾರ್ಮ್‌ ಬಿಟ್ಟರೆ ಮತ್ಯಾವ ಬಟ್ಟೆಯನ್ನೂ ನನಗಾಗಿ ಖರೀದಿಸಿಲ್ಲ. ಸ್ನೇಹಿತರ ಜೊತೆ ಒಮ್ಮೆಯೂ ಪಿಕ್ ನಿಕ್ ಅಥವಾ ಪಾರ್ಟಿಗಳಿಗೆ ಹೋಗಿಲ್ಲ.

ಇತ್ತೀಚೆಗೆ ಅಮ್ಮನಿಗೆ ಆರೋಗ್ಯ ಅಷ್ಟೊಂದು ಉತ್ತಮವಾಗಿಲ್ಲ. ಆದ್ದರಿಂದ ಅಮ್ಮ ನನಗೆ ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ. ತಂಗಿಯ ಒತ್ತಡವೂ ಇದೆ. ನನ್ನ ಆದಾಯ ನಮಗೇ ಸಾಕಾಗುತ್ತಿಲ್ಲ. ತಂಗಿಯ ಜವಾಬ್ದಾರಿ ಬೇರೆ ಇದೆ. ಆದ್ದರಿಂದ ಮದುವೆಯಾಗಲು ನನಗೆ ಇಷ್ಟವಿಲ್ಲ.

ಆದರೆ ನನ್ನ ಆತ್ಮೀಯರು, ಸಹಪಾಠಿಗಳು, ಸಂಬಂಧಿಗಳು ನನ್ನ ಆದಾಯ ಹೆಚ್ಚಾಗಲು ತಿಂಗಳ ಮಾಮೂಲಿ ಲಂಚ ತೆಗೆದುಕೊಳ್ಳಲು ಒತ್ತಾಯಿಸುತ್ತಿದ್ದಾರೆ. ಬದುಕುವ ಕಲೆ ಗೊತ್ತಿಲ್ಲದ ಮೂರ್ಖನೆಂದು ನನಗೆ ಮೂದಲಿಸುತ್ತಿದ್ದಾರೆ.

ನಮ್ಮ ಸ್ಟೇಷನ್‌ನಲ್ಲಿ ನನ್ನ ಜೊತೆಗಾರರು ಏನಿಲ್ಲವೆಂದರೂ ತಿಂಗಳಿಗೆ ಕನಿಷ್ಠ 15,000ದಷ್ಟು ವಿವಿಧ ಮೂಲಗಳಿಂದ ಲಂಚದ ರೂಪದಲ್ಲಿ ಗಳಿಸುತ್ತಾರೆ. ಆದರೆ, ನನ್ನ ಆತ್ಮಸಾಕ್ಷಿ ಇದನ್ನು ಒಪ್ಪುವುದಿಲ್ಲ. ನಾನು ಇದುವರೆಗೆ ಒಂದು ಲೋಟ ಕಾಫಿ ಕೂಡ ಇನ್ನೊಬ್ಬರಿಂದ ಕುಡಿದಿಲ್ಲ. ಮನೆಯಿಂದ ತಂದ ಬುತ್ತಿಯೇ ನನ್ನ ನಿತ್ಯದ ಆಹಾರ.

ಇತ್ತೀಚೆಗೆ ನನಗೆ ಮಾನಸಿಕ ಹಿಂಸೆ ಜಾಸ್ತಿಯಾಗುತ್ತಿದೆ. ನನ್ನ ಸುತ್ತಲಿನ ಎಲ್ಲರೂ ಲಂಚ ತೆಗೆದುಕೊಳ್ಳಲು ಒತ್ತಾಯಿಸುತ್ತಿದ್ದಾರೆ. ಇದೇ ಸ್ಥಿತಿಯಲ್ಲಿ ಮದುವೆಯಾದರೆ ಈಗಿನ ಹುಡುಗಿಯರು ತುಂಬಾ ಫಾಸ್ಟ್ ಮತ್ತು ಸಿರಿವಂತಿಕೆ ಬಯಸುತ್ತಾರೆ. ನಿನ್ನಲ್ಲಿ ಹಣವಿಲ್ಲದಿದ್ದರೆ ನಾಲ್ಕು ದಿನವೂ ಬಾಳುವುದಿಲ್ಲ ಎಂದು ಹೆದರಿಸುತ್ತಾರೆ.

ಕುಡಿತ, ಧೂಮಪಾನ ಮುಂತಾದ ಯಾವ ಕೆಟ್ಟ ಅಭ್ಯಾಸವೂ ಇಲ್ಲದ ನನ್ನನ್ನು ನೀನೊಬ್ಬ ವೇಸ್ಟ್‌ ಬಾಡಿ, ನೀನು ಬದುಕಿರುವುದೇ ವ್ಯರ್ಥ, ನೀನು ಗಾಂಧಿ ಎಂದು ಚುಡಾಯಿಸುತ್ತಾರೆ ಮತ್ತು ಮೂದಲಿಸುತ್ತಾರೆ.

ಇದಲ್ಲದೆ ಇತ್ತೀಚೆಗೆ ನನ್ನ ತಾಯಿ ತಂಗಿಯೂ ಲಂಚ ತೆಗೆದುಕೊಳ್ಳುವುದು ಈಗಿನ ಕಾಲದಲ್ಲಿ ದೊಡ್ಡ ವಿಷಯವೇ ಅಲ್ಲ. ಅದು ಸಹಜವಾದದ್ದು. ನೀನೇನು ಶ್ರೀಮಂತರ ವಂಶದಲ್ಲಿ ಹುಟ್ಟಿಲ್ಲ. ಒಬ್ಬ ಸಾಮಾನ್ಯ, ಚಿಲ್ಲರೆ ಅಂಗಡಿ ಇಟ್ಟಿದ್ದವನ ಮಗ. ಪ್ರಾಮಾಣಿಕವಾಗಿದ್ದರೆ ನಿನಗೇನೂ ಭಾರತ ರತ್ನ ಕೊಡುವುದಿಲ್ಲ ಎಂದು ಹಂಗಿಸುತ್ತಾರೆ.

ಯಾಕೋ ಈ ಎಲ್ಲಾ ಮಾತುಗಳಿಂದ ಮತ್ತು ಈ ವ್ಯವಸ್ಥೆಯಿಂದ ಮನಸ್ಸು ಪ್ರಕ್ಷುಬ್ಧವಾಗಿದೆ. ಇವುಗಳಿಂದ ದೂರ ಹೋಗಲು ಮನಸ್ಸು ಹಾತೊರೆಯುತ್ತಿದೆ. ಆತ್ಮಹತ್ಯೆಯತ್ತ ಚಿತ್ತ ಹರಿಯುತ್ತಿದೆ. ನೋಡೋಣ.

ಲಂಚ ತೆಗೆದುಕೊಂಡು ಬದುಕುವುದೋ
ಅಥವಾ
ಲಂಚ ತೆಗೆದುಕೊಳ್ಳದೇ ಸಾಯುವುದೋ....
ಆಯ್ಕೆ ನನ್ನ ಮುಂದಿದೆ....
ಕ್ಷಮಿಸಿ ...
ನಿಮ್ಮ ಮನಸ್ಸಿಗೆ ಬೇಸರ ಮಾಡಿದಕ್ಕೆ ....'

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT