ಸೋಮವಾರ, ಆಗಸ್ಟ್ 2, 2021
23 °C
ಹಿಂಸೆ ತಡೆಯಲಾರದೇ, ಊರಿಗೂ ಹೋಗಲಾಗದೇ ಸಾಯಲು ನಿರ್ಧರಿಸಿದ್ದ ಸಂತ್ರಸ್ತೆ

ದಾವಣಗೆರೆ: ಹೊಟ್ಟೆಗೆ ಚೂರಿ ಹಾಕಿಕೊಂಡಿದ್ದ ಫೈರೊಜಾ ಬಾನು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ದೇಶಕ್ಕೆ ಮರಳುವ ಬಗ್ಗೆ ನಿರೀಕ್ಷೆ ಇರಲಿಲ್ಲ. ಕೆಲಸಕ್ಕೆ ಇದ್ದ ಮನೆಯಲ್ಲಿ ಮಕ್ಕಳಿಂದ ಹಿಡಿದು ಎಲ್ಲರೂ ಹೊಡೆಯುವವರೇ. ತಾಳಲಾರದ ಹಿಂಸೆ. ನನ್ನ ಜೀವನದ ಬಗ್ಗೆಯೇ ಜುಗುಪ್ಸೆ ಉಂಟಾಗಿತ್ತು. ಒಂದು ದಿನ ಸಾಯಲು ನಿರ್ಧರಿಸಿ ಹೊಟ್ಟೆಗೆ ಚೂರಿ ಹಾಕಿಕೊಂಡೆ’.

ಸೌದಿ ಅರೇಬಿಯಾದಿಂದ ಹಿಂತಿರುಗಿದ ಶಿವನಗರದ ಫೈರೊಜಾ ಬಾನು ‘ಪ್ರಜಾವಾಣಿ’ಗೆ ಎರಡು ವರ್ಷ ಅನುಭವಿಸಿದ ಕಷ್ಟಗಳನ್ನು ವಿವರಿಸಿದರು.

‘ಎರಡು ವರ್ಷದ ಹಿಂದೆ ಸೌದಿಗೆ ಹೋದಾಗ ವಾತಾವರಣ, ಆಹಾರ ಬದಲಾಗಿದ್ದರಿಂದ ಅನಾರೋಗ್ಯ ಉಂಟಾಗಿತ್ತು. ಸುಸ್ತು ಎಂದು ಮಲಗಿದರೆ, ನೀನು ಇಲ್ಲಿ ನಿದ್ದೆ ಮಾಡಲು ಬಂದಿದ್ದಲ್ಲ. ಕೆಲಸಕ್ಕೆ ಬಂದಿದ್ದು ಎಂದು ಕಫೀಲ್‌ (ಪ್ರಾಯೋಜಕ) ಹೊಡೆದಿದ್ದ. ಆಮೇಲೆ ಒಂದು ಮನೆಗೆ ಮನೆಕೆಲಸಕ್ಕೆ ಸೇರಿಸಿದ. ಆ ಮನೆಯವರೂ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದರು. ನಾನು ಅದನ್ನು ನನ್ನನ್ನು ಸೌದಿಗೆ ಕಳುಹಿಸಿದ್ದ ಏಜೆಂಟ್‌ಗೆ ತಿಳಿಸಿದ್ದೆ. ಅದಕ್ಕೆ ಕಫೀಲ್‌ ನನ್ನನ್ನು ಕರೆದುಕೊಂಡು ಹೋಗಿ ಮೂರು ದಿನ ಹೊಡೆದು ಬಳಿಕ ಮತ್ತೆ ಆ ಮನೆಗೆ ಬಿಟ್ಟಿದ್ದ’ ಎಂದು ಕಫೀಲ್ ಸಅದ್‌ನ ಕ್ರೂರ ವರ್ತನೆಯನ್ನು ಬಿಚ್ಚಿಟ್ಟರು.

‘ಇದಾದ ಮೇಲೆ ನಾನು ಕೆಲಸ ಮಾಡುವುದಿಲ್ಲ ಎಂದು ನಾನಿದ್ದ ಮನೆಯವರು ಕಫೀಲ್‌ಗೆ ದೂರಿದರು. ಅವಳನ್ನು ಅಲ್ಲೇ ಹೊಡೆದು ಹಾಕಿ. ಇಲ್ಲವೇ ಪೊಲೀಸರಿಗೆ ಕೊಡಿ. ನಾನು ಏನೂ ಹೇಳಲ್ಲ ಎಂದು ಹೇಳಿದ್ದ. ಆ ಮನೆಯವರು ನಿನ್ನನ್ನು ಏನೂ ಮಾಡಿದರೂ ಬ್ರೋಕರ್‌ ಕೇಳಲ್ಲ ಎಂದು ಹೇಳಿ ಹಿಂಸೆ ಕೊಡತೊಡಗಿದರು. ಆ ಮನೆಯಲ್ಲಿ ಒಂದೂವರೆ ವರ್ಷ ಇದ್ದೆ. ಎಲ್ಲರೂ ಹೊಡೆಯುವವರಾದಾಗ ಹಿಂಸೆ ತಡೆದುಕೊಳ್ಳುವುದೇ ಕಷ್ಟವಾಯಿತು. ಕೆಲವು ದಿನ ದಿನಕ್ಕೆ ಒಂದೇ ಹೊತ್ತು ಊಟ. ಎರಡು ಹೊತ್ತು ಉಪಾವಾಸ. ಅದಕ್ಕೆ ಒಂದು ದಿನ ಚೂರಿ ಹಾಕಿಕೊಂಡೆ’ ಎಂದು ತಿಳಿಸಿದರು.

‘ಇದರಿಂದ ಆ ಮನೆಯವರು ಹೆದರಿಕೊಂಡರು. ಕಫೀಲ್‌ ಕರೆದುಕೊಂಡು ಹೋಗಿ ಆತನ ತಂಗಿಯ ಮನೆಯಲ್ಲಿಟ್ಟ. ಆ ಮನೆಯಲ್ಲಿ 20 ದಿನ ಇದ್ದೆ. ಚೆನ್ನಾಗಿ ನೋಡಿಕೊಂಡರು. ನಾನು ಚೇತರಿಸಿಕೊಂಡೆ. ಆಗ ನನ್ನದೇ ದುಡ್ಡಿನಲ್ಲಿ ನನಗೆ ಒಂದು ಮೊಬೈಲ್‌ ಮತ್ತು ಸಿಮ್‌ ಖರೀದಿಸಿ ನೀಡಿದ. ಇದೇ ಸಮಯದಲ್ಲಿ ನನ್ನ ತಾಯಿಗೆ ಇಲ್ಲಿ ಹುಷಾರಿರಲಿಲ್ಲ. ನೋಡಲು ಕಳುಹಿಸಲಿಲ್ಲ. ತಾಯಿ ಮೃತಪಟ್ಟರೂ ಕಳುಹಿಸುವ ವ್ಯವಸ್ಥೆ ಮಾಡಲಿಲ್ಲ. ಅಲ್ಲಿಂದ ಸಕಾಕಹ್‌ಗೆ ಕಳುಹಿಸಿದ. ಕೊನೇ ಮೂರು ತಿಂಗಳು ಅಲ್ಲೇ ಇದ್ದೆ. ಅಲ್ಲಿ ಅಂಥ ಹಿಂಸೆ ಇರಲಿಲ್ಲ. ಆದರೆ ಊರಿಗೆ ಮರಳುವ ಸಾಧ್ಯತೆ ಇರಲಿಲ್ಲ. ಇದರ ನಡುವೆ ‘ಪ್ರಜಾವಾಣಿ’ ವರದಿ ನೋಡಿ ನನ್ನನ್ನು ಭಾರತಕ್ಕೆ ಕಳುಹಿಸಲು ಹಮೀದ್‌ ಇನ್ನಿತರು ಪ್ರಯತ್ನಿಸಿದ್ದರಿಂದ ಸಿಟ್ಟುಕೊಂಡು ನನ್ನ ಮೊಬೈಲ್‌ನ ಸಿಮ್‌ ಕಿತ್ತುಕೊಂಡು ಸಂಪರ್ಕ ಇಲ್ಲದಂತೆ ಮಾಡಿದ’ ಎಂದರು.

ಏಳು ತಿಂಗಳ ವೇತನ ಕೊಟ್ಟಿಲ್ಲ

‘ಕಫೀಲ್‌ ನನ್ನ ಕೈಗೆ ಒಂದು ಸಾವಿರ ರಿಯಾಲ್‌ (ಸುಮಾರು ₹ 19,500) ನೀಡಿ ಅದನ್ನು ಫೋಟೊ ತೆಗೆಸಿಕೊಂಡ. ಚೆನ್ನಾಗಿ ನೋಡಿಕೊಂಡಿದ್ದಾರೆ. ಯಾವುದೇ ಹಿಂಸೆ ನೀಡಿಲ್ಲ. ಎಲ್ಲ ವೇತನ ನೀಡಿದ್ದಾರೆ ಎಂದು ಪೊಲೀಸರಿಗೆ ಮತ್ತು ಕೇಳಿದವರಿಗೆ ತಿಳಿಸಬೇಕು. ಊರಿಗೆ ಹೋದಾಗ ಮಾಧ್ಯಮದವರು ಬಂದಾಗಲೂ ಅದನ್ನೇ ಹೇಳಬೇಕು. ಹಾಗಾದರೆ ಮಾತ್ರ ಕಳುಹಿಸಿಕೊಡುವುದಾಗಿ ಹೇಳಿದ. ಊರಿಗೆ ಬಂದು ಮೂವರು ಮಕ್ಕಳ ಮುಖ ನೋಡಿದರೆ ಸಾಕು ಎಂದು ಕಾಯುತ್ತಿದ್ದ ನಾನು ಆಯಿತು ಅಂದೆ. ಪೊಲೀಸರ ಮುಂದೆ ನನ್ನಿಂದ ಅದೇ ಹೇಳಿಕೆ ಕೊಡಿಸಿದ. ಬಳಿಕ ರಿಯಾದ್‌ನಿಂದ ದೋಹಾ ಕತಾರ್‌ಗೆ, ಅಲ್ಲಿಂದ ಬೆಂಗಳೂರಿಗೆ ಟಿಕೆಟ್‌ ಮಾಡಿ ಕಳುಹಿಸಿದ. ಇನ್ನು ಏಳು ತಿಂಗಳ ವೇತನ 7 ಸಾವಿರ ರಿಯಾದ್‌ (ಸುಮಾರು ₹ 1.4 ಲಕ್ಷ) ಕೊಡಲು ಬಾಕಿ ಇದೆ ಎಂದು ಫೈರೋಜಾ ಬಾನು ತಿಳಿಸಿದರು.

ಇಲ್ಲಿಯೂ, ಸೌದಿಯಲ್ಲೂ ನಡೆದ ಪ್ರಯತ್ನ: ಅಬು ಸಲೇಹಾ

‘ಫೈರೋಜಾ ಬಾನು ಸೌದಿಗೆ ಹೋಗಿ ಒಂದು ತಿಂಗಳಷ್ಟೇ ನಮ್ಮ ಸಂಪರ್ಕದಲ್ಲಿ ಇದ್ದರು. ಬಳಿಕ ಆರು ತಿಂಗಳು ಸಂಪರ್ಕವೇ ಇರಲಿಲ್ಲ. ಕಫೀಲ್‌ಗೆ ಯಾವಾಗಲೂ ಗೋಗರೆದ ಕಾರಣ ಆರು ತಿಂಗಳ ಬಳಿಕ ಒಮ್ಮೆ ಅವನ ಮೊಬೈಲನ್ನು ಮಾತನಾಡುಲು ಫೈರೋಜ್‌ಗೆ ಕೊಟ್ಟ. ಆವಾಗೊಮ್ಮೆ, ಇವಾಗೊಮ್ಮೆ ಮಾತಿಗೆ ಸಿಗುತ್ತಿದ್ದರು. ಫೈರೋಜ್‌ ಅವರ ತಾಯಿಗೆ ಹುಷಾರಿಲ್ಲ ಅಂದಾಗ 10 ದಿನಗಳಲ್ಲಿ ಕಳುಹಿಸಿಕೊಡುತ್ತೇನೆ ಎಂದಿದ್ದ. ಆಮೇಲೆ ತಾಯಿ ಮೃತಪಟ್ಟರೂ ಕಳುಹಿಸಲಿಲ್ಲ’ ಎಂದು ಫೈರೋಜ್‌ ಅವರ ತಂಗಿಯ ಗಂಡ ಅಬು ಸಲೇಹಾ ಹೇಳಿದರು.

‘ನಾನು ಮತ್ತು ಪತ್ನಿ ನಸ್ರೀನ್‌ ಬಾನು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೆವು. ಅವರು ಕೇಂದ್ರ ಸರ್ಕಾರ, ರಾಯಬಾರಿ ಕಚೇರಿಗೆ ಮಾಹಿತಿ ನೀಡಿದ್ದರು. ‘ಪ್ರಜಾವಾಣಿ’ಯ ವರದಿ ನಮಗೆ ಆನೆಬಲ ನೀಡಿತ್ತು.  ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕೇಂದ್ರ ಸರ್ಕಾರದ ಜತೆ ಮಾತನಾಡಿದ್ದರು. ರಾಜ್ಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಖಾಲಿದ್‌ ಅಹ್ಮದ್‌, ಮಾಜಿ ಕಾರ್ಪೊರೇಟರ್‌ ಎಚ್‌.ಎಂ. ರುದ್ರಮುನಿಸ್ವಾಮಿ ಅವರು ನಮಗೆ ಬಹಳ ಸಹಾಯ ಮಾಡಿದರು. ಸಂಸದರನ್ನು ಅವರೇ ಭೇಟಿ ಮಾಡಿಸುತ್ತಿದ್ದರು. ಸೌದಿಯಲ್ಲಿ ಹಮೀದ್‌ ಮತ್ತು ಅವರ ಗೆಳೆಯರು ಪ್ರಯತ್ನ ಮುಂದುವರಿಸಿದ್ದರು. ಫೈರೋಜಾ ಬಾನು ಊರಿಗೆ ಬರಲು ಎಲ್ಲರ ಪ್ರಯತ್ನ ಕಾರಣ. ಅವರೆಲ್ಲರನ್ನು ನಾವು ಜೀವಮಾನದಲ್ಲಿ ಮರೆಯುವಂತಿಲ್ಲ’ ಎಂದು ನೆನಪಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು