ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಹೆಜ್ಜೆಯ ಜಾಡು ಹಿಡಿದು ಹೊರಟ ಸಿಬ್ಬಂದಿ

ಮುಂದುವರಿದ ಶೋಧ, ಸಿಗದ ‘ಹುಲಿ’ ಸುಳಿವು, ಸ್ಥಳಕ್ಕೆ ಬಂದ ಆಧುನಿಕ ತಂತ್ರಜ್ಞಾನವುಳ್ಳ ಸಲಕರಣೆ, ಹೈಡ್‌ಕೇಜ್‌
Last Updated 16 ಮಾರ್ಚ್ 2021, 14:19 IST
ಅಕ್ಷರ ಗಾತ್ರ

ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನಲ್ಲಿ ಕೇವಲ 25 ದಿನದಲ್ಲಿ ಇಬ್ಬರು ಬಾಲಕರು, ಕಾರ್ಮಿಕ ಮಹಿಳೆ ಸೇರಿದಂತೆ ಮೂವರು ಹಾಗೂ 20ಕ್ಕೂ ಹೆಚ್ಚು ಜಾನುವಾರು ಬಲಿ ಪಡೆದಿರುವ ಅಪಾಯಕಾರಿ ಹುಲಿ ಸುಳಿವು ಮಾತ್ರ ಕಾರ್ಯಾಚರಣೆ ತಂಡಕ್ಕೆ ಇನ್ನೂ ಸಿಕ್ಕಿಲ್ಲ.

150ಕ್ಕೂ ಮಂದಿ ಅರಣ್ಯ ಇಲಾಖೆ ಸಿಬ್ಬಂದಿ, ವೈದ್ಯರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದಾರೆ. ಆದರೂ, ತಂಡಕ್ಕೆ ಯಶಸ್ಸು ಸಿಕ್ಕಿಲ್ಲ. ಆತಂಕದಲ್ಲಿರುವ ಬೆಳೆಗಾರರ ಸಿಟ್ಟು ಮತ್ತಷ್ಟು ಹೆಚ್ಚಾಗಿದೆ.

ದಿನ ಕಳೆದಂತೆ ಕಾರ್ಯಾಚರಣೆ ತಂಡದ ಮೇಲೆಯೇ ಅನುಮಾನ ಹೆಚ್ಚುತ್ತಿದೆ. ಮತ್ತೊಂದೆಡೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಕೊಡಗು ಜಿಲ್ಲೆಗೆ ತಕ್ಷಣವೇ ಭೇಟಿ ನೀಡಿ, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಹುಲಿ ಸೆರೆ ಕಾರ್ಯಾಚರಣೆ ಚುರುಕು ಪಡೆಯುವಂತೆ ಮಾಡಬೇಕು ಎಂಬ ಟ್ವೀಟರ್‌ ಅಭಿಯಾನ ಆರಂಭವಾಗಿದೆ. ಮುಖಂಡರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲೆಗೆ ಬರುವಂತೆ ಮನವಿ ಮಾಡುತ್ತಿದ್ದಾರೆ.

ಹೆಜ್ಜೆ ಗುರುತು ಬಿಟ್ಟರೆ ಬೇರೇನೂ ಸಿಕ್ಕಿಲ್ಲ!:

ಅಪಾಯಕಾರಿ ಹುಲಿಯು ಒಮ್ಮೆ ಶಾರ್ಪ್‌ಶೂಟರ್ ಕಾದು ಕುಳಿತಿದ್ದ ಸ್ಥಳದ ಬಳಿಗೆ ಬಂದಿತ್ತು. ಆದರೆ, ಕಾನೂನು ತೊಡಕಿನಿಂದ ಅಂದು ಅದನ್ನು ಸೆರೆ ಹಿಡಿಯುವುದಾಗಲಿ, ಗುಂಡಿಕ್ಕುವುದಾಗಲಿ ಮಾಡಲು ಶಾರ್ಪ್‌ಶೂಟರ್‌ ಸಾಧ್ಯವಾಗರಲಿಲ್ಲ ಎನ್ನಲಾಗಿದೆ. ಅದಾದ ಮೇಲೆ ಕಾರ್ಯಾಚರಣೆ ತಂಡಕ್ಕೆ, ಹೆಜ್ಜೆ ಗುರುತು ಬಿಟ್ಟರೆ ಬೇರೇನೂ ಸಿಕ್ಕಿಲ್ಲ. ಇಡೀ ದಿನ ಕಾಡುಮೇಡು ಅಲೆಯುವ ತಂಡವು ಸಂಜೆಯ ವೇಳೆಗೆ ವಾಪಸ್‌ ಆಗುತ್ತಿದೆ. ರಾತ್ರಿ ವೇಳೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಸಂಜೆ 6ರ ಮೇಲೆ ಯಾವುದೇ ಕಾರ್ಯಾಚರಣೆ ನಡೆಯುತ್ತಿಲ್ಲ ಎಂಬುದು ರೈತರ ಆಪಾದನೆ.

ಹುಲಿಯು ಮಧ್ಯರಾತ್ರಿ ವೇಳೆ ದಾಳಿ ನಡೆಸುತ್ತಿದೆ. ಆದರೆ, ರಾತ್ರಿಯೇ ಕಾರ್ಯಾಚರಣೆ ನಡೆಯದಿದ್ದರೆ ಹೇಗೆ? ಜಿಲ್ಲಾಧಿಕಾರಿಗಳೇ ನೀವೇ ಬಂದು ಕಾರ್ಯಾಚರಣೆ ಪ್ರಗತಿ ಗಮನಿಸಿ. ಮಡಿಕೇರಿಯಲ್ಲಿ ಕುಳಿತು ಮಾಹಿತಿ ಪಡೆದರೆ ಹುಲಿ ಸೆರೆಯಾಗುವುದಿಲ್ಲ ಎಂಬುದು ರೈತರ ಆಕ್ರೋಶದ ಮಾತು. ಮಡಿಕೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಇದೇ ಮಾತನ್ನು ಹೇಳಿದ್ದರು.

ಹೇಗಿದೆ ಕಾರ್ಯಾಚರಣೆ?

ಈಗ ಅರಣ್ಯ ಇಲಾಖೆಯ ವಿರಾಜಪೇಟೆ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಕಾರ್ಯಾಚರಣೆಯ ಮಾಹಿತಿ ನೀಡಿದ್ದಾರೆ.
ಸೋಮವಾರ ಹಾಗೂ ಮಂಗಳವಾರ ವಿವಿಧೆಡೆ ಕಾರ್ಯಾಚರಣೆ ನಡೆದಿದೆ. ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ, ಹುಲಿಯ ಚಲನವಲನಗಳಿದ್ದ ಜಾಗದಲ್ಲಿ ಅಳವಡಿಸಿದ್ದ ಕ್ಯಾಮೆರಾ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಚಿತ್ರಗಳು ಸೆರೆಯಾಗಿಲ್ಲ. ಎರಡು ಪತ್ಯೇಕ ತಂಡಗಳು ನಾಲ್ಕೇರಿ ಗ್ರಾಮದ ಲಕ್ಷ್ಮಣತೀರ್ಥ ಹೊಳೆಯ ಎರಡು ಬದಿಯಲ್ಲಿ ನಾಲ್ಕೇರಿ ಹೆರ್ಮಾಡು ಈಶ್ವರ ದೇವಾಲಯದ ಕೂಂಬಿಂಗ್‌ ನಡೆಸಲಾಗಿದೆ.

ಹುಲಿ ಕಾರ್ಯಾಚರಣೆಗೆ ಬೇಕಿರುವ ಆಧುನಿಕ ತಂತ್ರಜ್ಞಾನವುಳ್ಳ ಸಲಕರಣೆಗಳು ಮತ್ತು ಹುಲಿಯನ್ನು ಡಾರ್ಟಿಂಗ್‌/ ಶೂಟ್‌ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಿರುವ ಹೈಡ್‌ಕೇಜ್‌ ತರಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬೆಳ್ಳೂರು ಗ್ರಾಮದ ಚೆಕ್ಕೇರಕುಮಾರ್‌ ಅವರ ಮನೆಯಿಂದ ಹೈಸೊಡ್ಲೂರು ಗ್ರಾಮ, ನಾಲ್ಕೇರಿ ಗ್ರಾಮದಲ್ಲಿ ಶೋಧ ನಡೆಸಲಾಗಿದ್ದು ಹುಲಿ ಓಡಾಟ ನಡೆಸಿರುವ ಹೆಜ್ಜೆ ಗುರುತು ಪತ್ತೆಯಾಗಿದೆ.

ರೈತರ ಹೋರಾಟದಲ್ಲಿ ಕಾಂಗ್ರೆಸ್ ರಾಜಕೀಯ: ಆರೋಪ

ಮಡಿಕೇರಿ: ಹುಲಿ ಸೆರೆ ಕಾರ್ಯಾಚರಣೆಗಾಗಿ ಒತ್ತಾಯಿಸಿ, ದಕ್ಷಿಣ ಕೊಡಗಿನ ರೈತಾಪಿ ವರ್ಗ ನಡೆಸಿದ ಅರ್ಥಪೂರ್ಣ ಹೋರಾಟದಲ್ಲಿ ಕೆಲವು ರಾಜಕಾರಣಿಗಳು ರಾಜಕೀಯ ಬೆರೆಸುತ್ತಿರುವುದು ಖಂಡನೀಯ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕೊಡಗು ಮಾತ್ರವಲ್ಲದೆ ಉತ್ತರ ಕೊಡಗಿನಲ್ಲಿ ಕೂಡ ಹುಲಿ, ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಇದರಿಂದ ಬೇಸತ್ತಿರುವ ಗ್ರಾಮೀಣ ಜನರು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ರೈತಾಪಿ ವರ್ಗ ಹಾಗೂ ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ನ್ಯಾಯೋಚಿತವಾಗಿದೆ. ಆದರೆ, ಇದನ್ನೇ ನೆಪಮಾಡಿಕೊಂಡು ವಿರೋಧ ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಟೀಕಿಸಿದ್ದಾರೆ.

ಹುಲಿ ದಾಳಿಯಿಂದ ಮೂರು ಮಾನವ ಜೀವ ಬಲಿಯಾಗಿದ್ದು, ಸಾಲು ಸಾಲು ಜಾನುವಾರುಗಳು ಸಾಯುತ್ತಿವೆ. ವಿದ್ಯಾರ್ಥಿಗಳು, ಕಾರ್ಮಿಕರು, ತೋಟದ ಮಾಲೀಕರು ಹಾಗೂ ಗ್ರಾಮಸ್ಥರು ನಿರ್ಭೀತಿಯಿಂದ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಅತ್ಯಂತ ವಿಷಾದಕರ ಬೆಳವಣಿಗೆ; ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಸರ್ಕಾರ ಕೂಡ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿ ಹುಲಿ ಸೆರೆಗೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಶಾಸಕರುಗಳು ದಕ್ಷಿಣ ಕೊಡಗಿನ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದ್ದಾರೆ. ಅಲ್ಲದೇ ಅರಣ್ಯಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಕೆಲವರು ತಮ್ಮ ರಾಜಕೀಯ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ರೈತರ ಹೋರಾಟದಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ ಎಂದು ಮಹೇಶ್ ಜೈನಿ ಟೀಕಿಸಿದ್ದಾರೆ.

ಚುನಾವಣೆ ಸಂದರ್ಭ ತಮ್ಮ ರಾಜಕೀಯ ಲಾಭಕ್ಕಾಗಿ ಅಪರೂಪಕೊಮ್ಮೆ ಕೊಡಗಿಗೆ ಬರುವ ಕಾಂಗ್ರೆಸ್‍ನ ಕೆಲವು ನಾಯಕರು ಶಾಸಕರು ವಿರುದ್ಧ ಹೇಳಿಕೆ ನೀಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಪ್ರತಿಭಟನೆಗೆ ಬೆಂಬಲ ನೀಡುವ ನೆಪದಲ್ಲಿ ಹೋರಾಟದ ಉದ್ದೇಶವನ್ನೇ ಮರೆ ಮಾಚುವ ರೀತಿಯಲ್ಲಿ ಚುನಾಯಿತ ಪ್ರತಿನಿಧಿಗಳ ವಿರುದ್ಧ ವಿನಾಕಾರಣ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇದನ್ನು ಜಿಲ್ಲಾ ತೀವ್ರವಾಗಿ ಖಂಡಿಸುತ್ತದೆ. ಈಗಾಗಲೇ ಜಿಲ್ಲೆಯ ಶಾಸಕರು ವನ್ಯಜೀವಿಗಳ ದಾಳಿಯ ಬಗ್ಗೆ ವಿಧಾನಸಭೆಯಲ್ಲಿ ಸರ್ಕಾರ ಹಾಗೂ ಅರಣ್ಯ ಸಚಿವರ ಗಮನ ಸೆಳೆದಿದ್ದಾರೆ. ಅರಣ್ಯ ಅಧಿಕಾರಿಗಳು ಕೂಡ ಹುಲಿ ಸೆರೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ.

ಕಾಂಗ್ರೆಸ್‌ನ ಸ್ಥಳೀಯ ಮುಖಂಡರೊಬ್ಬರು ಪ್ರತ್ಯಕ್ಷದರ್ಶಿಯಂತೆ ಅರಣ್ಯ ಇಲಾಖೆಯೇ ಹುಲಿಗಳನ್ನು ಬೇರೆ ಪ್ರದೇಶದಿಂದ ತಂದು ಕೊಡಗಿನ ಅರಣ್ಯದಲ್ಲಿ ಬಿಡುತ್ತಿದ್ದಾರೆ ಎನ್ನುವ ಬಾಲಿಶ ಹೇಳಿಕೆಗಳನ್ನು ನೀಡಿ ಆತಂಕ ಮೂಡಿಸುತ್ತಿದ್ದಾರೆ. ಜನರ ಜೀವನದ ಜೊತೆ ಚೆಲ್ಲಾಟವಾಡದೇ ಭಯದ ನೆರಳಿನಲ್ಲಿರುವವರಿಗೆ ಧೈರ್ಯ ತುಂಬುವ ಕಾರ್ಯವನ್ನು ಕಾಂಗ್ರೆಸ್ ಮಾಡಲಿ ಎಂದು ಮಹೇಶ್ ಜೈನಿ ಒತ್ತಾಯಿಸಿದ್ದಾರೆ.

ವನ್ಯಜೀವಿ ದಾಳಿಯಂತಹ ಸೂಕ್ಷ್ಮ ವಿಚಾರಗಳಲ್ಲಿ ಕ್ಷುಲ್ಲಕ ರಾಜಕಾರಣ ಮಾಡದೆ ಉಪಟಳ ನೀಡುತ್ತಿರುವ ಹುಲಿ ಸೆರೆಗೆ ಅಗತ್ಯ ಸಹಕಾರ ನೀಡುವುದು ಸೂಕ್ತ. ಪಕ್ಷಾತೀತವಾಗಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕೆ ಹೊರತು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲು ಯಾರೂ ಪ್ರಯತ್ನಿಸಬಾರದೆಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT